ಅಜೀಜಅಹ್ಮದ ಬಳಗಾನೂರ
ಗದಗ, ಬಾಗಲಕೋಟೆ, ಹಾವೇರಿ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ ರೈತರಿಗೆ ಈಗಾಗಲೇ ವಿಮಾ ಪರಿಹಾರದ ಹಣ ಜಮೆಯಾಗಿದೆ. ಆದರೆ, ಧಾರವಾಡ ಜಿಲ್ಲೆಯ ರೈತರಿಗೆ ಮಾತ್ರ ವಿಮಾ ಪರಿಹಾರ ಸಿಗದೇ ಇರುವುದರಿಂದಾಗಿ ಮುಂಗಾರಿ ಬಿತ್ತನೆ ಸಂದರ್ಭದಲ್ಲಿ ಅನುಕೂಲವಾಗಬೇಕಾಗಿದ್ದ ಹಣ ರೈತರ ಕೈಸೇರದೇ ಸಮಸ್ಯೆ ಎದುರಿಸುತ್ತಿದ್ದಾರೆ.
ಸಾಲದ ಶೂಲದಲ್ಲಿ ರೈತ: ಕಳೆದ ಎರಡು ವರ್ಷಗಳಿಂದ ಧಾರವಾಡ ಜಿಲ್ಲೆಯ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯ ಕರಾಳ ಛಾಯೆಗೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನ ಹೆಸರು, ಶೇಂಗಾ, ಹತ್ತಿ, ಈರುಳ್ಳಿ ಮತ್ತು ಸೋಯಾಬಿನ್ ಬೆಳೆಗಳು ಕೈಗೆ ಸಿಗದೆ ನಷ್ಟ ಅನುಭವಿಸಿದ್ದಾರೆ.2024-25ನೇ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಭರಣ ಮಾಡಿದ್ದರೂ ವಿಮಾ ಕಂಪನಿ ಮತ್ತು ಸರ್ಕಾರದ ವಿಳಂಬ ನೀತಿ ರೈತರನ್ನು ಸಾಲದ ಸುಳಿಗೆ ದೂಡಿದೆ. ಕಷ್ಟಕಾಲದಲ್ಲಿ ಕೈಹಿಡಿಯುತ್ತದೆ ಎಂದು ನಂಬಿ ಕಟ್ಟಿದ ವಿಮಾ ಕಂತಿನ ಪರಿಹಾರ, ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಇಲ್ಲಿ ಮಾತ್ರ ವಿಳಂಬವೇಕೆ?: ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆಯಾಗಿದೆ. ಆದರೆ, ಧಾರವಾಡದಲ್ಲಿ ಆಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ ಜಿಲ್ಲಾಡಳಿತ ಮಾತ್ರ ಪರಿಹಾರದ ಹಣ ಜಮೆ ಆಗಿದೆ ಎಂದು ಹೇಳಿಕೆ ನೀಡುತ್ತಿರುವುದು ಸಹಜವಾಗಿ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಗಾಯದ ಮೇಲೆ ಬರೆ: ಬೆಳೆ ನಷ್ಟವಾದಾಗ ಪರಿಹಾರ ಬರಲಿ ಎಂಬ ಉದ್ದೇಶದಿಂದ ರೈತರು ಬೆಳೆವಿಮೆ ತುಂಬುತ್ತಾರೆ. ಆದರೆ, ರೈತರಿಗೆ ಅನುಕೂಲವಾಗಬೇಕಿದ್ದ ಬೆಳೆವಿಮೆ, ವಿಮಾಕಂಪನಿಗಳಿಗೆ ಅನುಕೂಲವಾದಂತಾಗಿದೆ. ಈ ಕುರಿತು ಜಿಲ್ಲೆಯ ರೈತರು ಹಲವು ಬಾರಿ ಜಿಲ್ಲಾಡಳಿತಕ್ಕೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿ ಎಚ್ಚರಿಸಿದರೂ ಸಹ ರೈತರ ಖಾತೆಗಳಿಗೆ ಬೆಳೆವಿಮೆ ಪರಿಹಾರ ಮಾತ್ರ ಇಂದಿಗೂ ಜಮೆಯಾಗದಿರುವುದು ರೈತರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.
ನಷ್ಟವಾಗಿರುವ ಬೆಳೆಗಳಿಗೆ ರೈತರು ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆವಿಮೆ ತುಂಬಿದ್ದಾರೆ. ಈ ವರೆಗೂ ಪರಿಹಾರದ ಹಣ ಜಮೆಯಾಗಿಲ್ಲ. ಜಿಲ್ಲಾಡಳಿತವು ಬೆಳೆವಿಮೆ ಪರಿಹಾರದ ಮೊತ್ತ ರೈತರ ಖಾತೆಗೆ ಜಮೆಯಾಗಿದೆ ಎಂದು ಸುಳ್ಳು ಹೇಳುತ್ತಿದೆ. ಎಷ್ಟು ರೈತರಿಗೆ ಪರಿಹಾರ ಬಿಡುಗಡೆಯಾಗಿದೆ ಎಂಬುದರ ಸ್ಪಷ್ಟ ಮಾಹಿತಿ ನೀಡಲಿ ಎಂದು ಕರ್ನಾಟಕ ರೈತಸೇನೆ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಹೇಳಿದರು.ಕಳೆದ ಸಾಲಿನ ಮುಂಗಾರು ಬೆಳೆ ಹಾನಿಗೆ ಈಗಾಗಲೇ ಹಲವು ರೈತರ ಖಾತೆಗೆ ಜಮಾ ಆಗಿದೆ. ಕೆಲವೇ ಕೆಲವು ರೈತರಿಗೆ ಸಮಸ್ಯೆಯಾಗಿದೆ. ವಿಮೆ ಮಾಡಿಸಿದ ಎಲ್ಲ ರೈತರಿಗೂ ಪರಿಹಾರ ಬರುವುದಿಲ್ಲ. ಹಾನಿಯಾಗಿರುವ ಬೆಳೆಗಳಿಗೆ ಮಾತ್ರ ವಿಮಾ ಪರಿಹಾರ ನೀಡಲಾಗುತ್ತದೆ ಎಂದು ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.ಯಾವ ತಾಲೂಕಲ್ಲಿ ಎಷ್ಟೆಷ್ಟು ರೈತರು:
ಅಳ್ನಾವರ 3670 2164.76
ಧಾರವಾಡ 21953 17762.80
ಹುಬ್ಬಳ್ಳಿ ಶಹರ 1248 1428.21
ಕಲಘಟಗಿ 21876 16213.81ಕುಂದಗೋಳ 39774 37682.85
ನವಲಗುಂದ 21104 25929.28ಒಟ್ಟು 139416 136225.88