ಶಿರಸಿ: ಹವಾಮಾನಾಧಾರಿತ ಬೆಳೆ ವಿಮೆಗೆ ಸಂಬಂಧಿಸಿದಂತೆ ಕ್ಷೇಮಾ ಇನ್ಸುರೆನ್ಸ್ ಕಂಪೆನಿ ಒಪ್ಪದ ಕಾರಣ ಮರು ಟೆಂಡರ್‌ನಲ್ಲಿ ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂಪೆನಿ ಪಡೆದಿದ್ದು, ರೈತರು ಕಂತು ಭರಣ ಮಾಡಲು ಆ.೧೧ರ ವರೆಗೆ ಅವಕಾಶವಿದೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ತಿಳಿಸಿದರು.
ನಗರದ ತಾಪಂನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ.ಸತೀಶ ಅಧ್ಯಕ್ಷತೆಯಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಪ್ರಗತಿ ಮಂಡಿಸಿದರು.ತೋಟಗಾರಿಕಾ ಇಲಾಖೆಯಲ್ಲಿ ಮೈಲು ತುತ್ತ ಹಾಗೂ ಯಂತ್ರಗಳಿಗೆ ಸಹಾಯಧನ ಲಭ್ಯವಿದ್ದು, ದೋಟಿಗೆ ಸಹಾಯಧನ ನೀಡುವುದಕ್ಕೆ ನ್ಯಾಯಾಲಯದಿಂದ ತೀರ್ಪು ಬಂದಿದೆ ಎಂದು ತಿಳಿದು ಬಂದಿದೆ. ಎಣ್ಣೆ ತಾಳೆ ಬೆಳೆಗೆ ತಾಲೂಕಿನಲ್ಲಿ ೫೦ ಹೆಕ್ಟೇರ್ ಪ್ರದೇಶ ವಿಸ್ತರಣೆ ಗುರಿ ಇದೆ. ಉಚಿತವಾಗಿ ತಾಳೆ ಗಿಡ ವಿತರಿಸಿ ಸಹಾಯಧನ ನೀಡಲಾಗುತ್ತಿದೆ.
ಹನಿ ನೀರಾವರಿಗೆ ಶೇ. ೯೦ ರಷ್ಟು ಹಾಗೂ ೫ ವರ್ಷಗಳ ನಂತರ ಕೊಳವೆ ಬಾವಿಗೆ ಸಹಾಯಧನ ಲಭ್ಯವಿದೆ ಎಂದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಈ ವರೆಗೆ ೨೩೮೮ ಮಿಮೀ ಮಳೆಯಾಗಿ ಶೇ. ೫೭ ರಷ್ಟು ಮಳೆಯಾಗಿದೆ. ಈ ವರ್ಷ ಹುಲೇಕಲ್ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ನಾಟಿ ೨೦೪೦ ಹೆಕ್ಟೇರ್ ಪ್ರದೇಶ ನಾಟಿಯಾಗಿದ್ದು, ೯೨೧ಕ್ವಿಂಟಲ್ ಬಿತ್ತನೆ ಬೀಜದಲ್ಲಿ ೬೯೨ ಬಿತ್ತನೆ ಬೀಜ ಖರ್ಚಾಗಿದೆ ಎಂದರು.
ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ. ಮಧುಕರ ಮಾತನಾಡಿ, ಮಳೆಗಾಲದಲ್ಲಿ ಸೊಳ್ಳೆ ಹಾಗೂ ನೀರಿನಿಂದ ಬರುವ ರೋಗಗಳು ಹೆಚ್ಚಾಗಿದೆ. ಹವಾಮಾನ ವ್ಯತ್ಯಾಸದಿಂದ ವಾಂತಿ ಬೇಧಿ ಪ್ರಕರಣ ಹಾಗೂ ವೈರಲ್ ಫಿವರ್ ಹೆಚ್ಚಿದೆ. ಬಿಸಿ ನೀರು ಬಳಕೆ ಮಾಡಬೇಕು. ಟಿಬಿ ವಿರುದ್ಧ ತೂಕ ಕಡಿಮೆ ಇರುವವರಿಗೆ, ೬೦ ವರ್ಷ ಮೇಲ್ಪಟ್ಟವರಿಗೆ ಬಿಸಿಜಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಜನರಿಲ್ಲಿ ಟಿಬಿ ಲಸಿಕೆ ಬಗ್ಗೆ ಭಯವಿದ್ದು, ಟಿವಿ ವ್ಯಾಕ್ಸಿನ್ ಪಡೆದರೆ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ೧೩೯ ಹುದ್ದೆ ಖಾಲಿ ಇದೆ. ಪ್ರಾಥಮಿಕ ಶಾಲೆಗೆ ೭೯ ಹಾಗೂ ಪ್ರೌಢಶಾಲೆಗೆ ೧೨ ಅತಿಥಿ ಶಿಕ್ಷಕರನ್ನು ನೀಡಲಾಗಿದೆ. ೧೫ ಅತಿಥಿ ಶಿಕ್ಷಕರ ಬೇಡಿಕೆ ಸಲ್ಲಿಸಲಾಗಿದೆ. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ೪೩ ಹಾಗೂ ಯಲ್ಲಾಪುರ ಕ್ಷೇತ್ರದ ೨೭ ಶಾಲೆ ದುರಸ್ತಿಗೆ ಕಳುಹಿಸಲಾಗಿದೆ. ವಿವೇಕ ಕೊಠಡಿ ಕಾಮಗಾರಿ ಮುಕ್ತಾಯಗೊಂಡಿದೆ. ೧೦ ಹೊಸ ಕೊಠಡಿಗಳು ಮಂಜೂರಿಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆಲಸ ಪ್ರಾರಂಭಗೊಳ್ಳಬೇಕಿದೆ ಎಂದರು.
ಅಬಕಾರಿ ಮಂಜುಕುಮಾರ ನಾಯ್ಕ ಮಾತನಾಡಿ, ಶಿರಸಿ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ಕಡಿಮೆ ಇದ್ದು, ಸಿದ್ದಾಪುರ ಭಾಗದಲ್ಲಿ ಹೆಚ್ಚಿದೆ. ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಹಿರಿಯ ಮೇಲ್ವಿಚಾರಕಿ ಸುಶೀಲಾ ಮೊಗೇರ ಮಾತನಾಡಿ, ೩೭೮ ಅಂಗನವಾಡಿ ಕೇಂದ್ರದಲ್ಲಿ ೩ ಕಾರ್ಯಕರ್ತೆ ಹುದ್ದು ಹಾಗೂ ೪೭ ಸಹಾಯಕಿ ಹುದ್ದೆ ಖಾಲಿ ಇದೆ ಎಂದರು.
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ ಪಾಟೀಲ ಮಾತನಾಡಿ, ೫೨೭೦ ಗೃಹ ಜ್ಯೋತಿಯಲ್ಲಿ ನೋಂದಣಿಗೆ ಬಾಕಿ ಇದೆ. ಜುಲೈ ತಿಂಗಳಿನಲ್ಲಿ ೧೦೯ ಕಂಬಗಳಿಗೆ ಹಾನಿಯಾಗಿದೆ. ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿಲ್ಲ ಎಂದು ತಿಳಿಸಿದರು.ಪಶು ಸಂಗೋಪನಾ, ಅರಣ್ಯ, ಸಾರಿಗೆ, ಸಮಾಜ ಕಲ್ಯಾಣ, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಇಲಾಖಾ ವರದಿ ಮಂಡಿಸಿದರು. ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ, ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ ಇದ್ದರು.
ರೈತರು ಸಮತೋಲ ರಸಗೊಬ್ಬರ ಬಳಕೆ ಹೆಚ್ಚಿಸಬೇಕು.ಇದರಿಂದ ಅಧಿಕ ಉತ್ಪಾದನೆ, ದುಷ್ಪರಿಣಾಮ ಕಡಿಮೆ ಇದೆ. ೨೫೦೦ ಟನ್ ಯೂರಿಯಾ ದಾಸ್ತಾನಿತ್ತು, ಅದರಲ್ಲಿ ೧೦೪೧ ಟನ್ ಖರ್ಚಾ ಆಗಿದೆ. ೧೫೨ ಟನ್ ಯೂರಿಯಾ ಗೊಬ್ಬರ ದಾಸ್ತಾನಿದೆ. ರಸಗೊಬ್ಬರದ ಸಮಸ್ಯೆಯಿಲ್ಲ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ತಿಳಿಸಿದ್ದಾರೆ.ಸಹಕಾರ ಇಲಾಖೆ ಸ್ಪಂದನೆ ಕೊರತೆ
ಸಹಕಾರವೇ ಉಸಿರಾದ ತಾಲೂಕಿನಲ್ಲಿ ಸಹಕಾರ ಇಲಾಖೆ ಸ್ಪಂದನೆ ಕೊರತೆ ಇದೆ ಎಂಬ ಆರೋಪ ಕೇಳಿ ಬಂತು. ಸಹಕಾರ ಇಲಾಖೆಯು ಗ್ರಾಮೀಣ ಭಾಗದ ಸೇವಾ ಸಹಕಾರಿ ಸಂಘಗಳಲ್ಲಿ ಅನಗತ್ಯ ಹಸ್ತಕ್ಷೇಪ ಹಾಗೂ ಕೆಲವಡೆ ಧಾರಾಳತನ ಎರಡೂ ತೋರಿಸುತ್ತಿದೆ ಎಂಬ ದೂರೂ ಸಭೆಯಲ್ಲಿ ವ್ಯಕ್ತವಾಯಿತು.