ರೈತರಿಗೆ ವರವಾಗದ ಫಸಲ್ ಬಿಮಾ ಯೋಜನೆ

KannadaprabhaNewsNetwork |  
Published : Jun 29, 2026, 02:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದ 38177 ರೈತರಲ್ಲಿ ಮೊದಲ ಹಂತವಾಗಿ 9687 ರೈತರಿಗೆ ಹಾಗೂ 2ನೇ ಕಂತಿನಲ್ಲಿ ಕೇವಲ 3020 ರೈತರಿಗೆ ಮಾತ್ರ ಮಧ್ಯಂತರ ಪರಿಹಾರ ಜಮೆ ಮಾಡಿದೆ.

ಶಿವಕುಮಾರ ಕುಷ್ಟಗಿ

ಗದಗ: ಪ್ರಕೃತಿಯ ಮುನಿಸು, ತೀವ್ರ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ಅನ್ನದಾತನಿಗೆ ವಿಮಾ ಕಂಪನಿಗಳು ಕಾನೂನುಬದ್ಧವಾಗಿ ಸಿಗಬೇಕಾದ ಹಕ್ಕನ್ನೂ ನೀಡದೆ ವಂಚಿಸುತ್ತಿವೆ. 2025- 26ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಿಲ್ಲೆಯ ರೈತರ ಪಾಲಿಗೆ ಆಶಾಕಿರಣವಾಗುವ ಬದಲು, ಆಶಾಭಂಗವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಒಟ್ಟು 52013 ರೈತರು 2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆವಿಮೆ ಪಾವತಿ ಮಾಡಿದ್ದಾರೆ. ಕಳೆದ ಸಾಲಿನಲ್ಲಿ ವಾಡಿಕೆಗಿಂತಲೂ ಅತಿ ಹೆಚ್ಚಿನ ಮಳೆಯಾಗಿ ರೈತರು ಬೆಳೆನಷ್ಟ ಅನುಭವಿಸಿದ್ದು, ಅವರೆಲ್ಲ ಪರಿಹಾರಕ್ಕೆ ಅರ್ಹರು. ಆದರೆ ಇದುವರೆಗೂ ಪರಿಹಾರ ಮಾತ್ರ ದೊರೆತಿಲ್ಲ.

ವಿಮಾ ನಿಯಮ?: ಕೃಷಿ ಇಲಾಖೆ ಮತ್ತು ವಿಮಾ ಕಂಪನಿಗಳ ನಡುವೆ ಆಗಿರುವ ಒಡಂಬಡಿಕೆಯ ಪ್ರಕಾರ ಬೆಳೆವಿಮೆ ಮಾಡಿಸಿದ ರೈತರು ಸ್ಥಳೀಯ ಗಂಡಾಂತರಗಳು (ಅತಿಯಾದ ಮಳೆ, ಬೆಂಕಿಗೆ ಆಹುತಿ) ಎದುರಾದ ವೇಳೆ ವಿಮಾ ಕಂಪನಿ ನೀಡಿರುವ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ದೂರು ಸಲ್ಲಿಸಬೇಕು. ಹೀಗೆ ದೂರು ಸಲ್ಲಿಸಿದ ರೈತರ ಜಮೀನುಗಳಿಗೆ ವಿಮಾ ಕಂಪನಿಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿ, ಅವರಿಗೆ ಮಧ್ಯಂತರ ಪರಿಹಾರ ನೀಡಬೇಕು. ಈ ನಿಯಮದ ಅನ್ವಯ 2025- 26ನೇ ಸಾಲಿನಲ್ಲಿ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದವರು 38177 ರೈತರು. ಇವರೆಲ್ಲ ಮಧ್ಯಂತರ ಪರಿಹಾರಕ್ಕೆ ಅರ್ಹರಾಗಿದ್ದಾರೆ.

12707 ರೈತರಿಗೆ ಮಧ್ಯಂತರ ಪರಿಹಾರ: ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದ 38177 ರೈತರಲ್ಲಿ ಮೊದಲ ಹಂತವಾಗಿ 9687 ರೈತರಿಗೆ ಹಾಗೂ 2ನೇ ಕಂತಿನಲ್ಲಿ ಕೇವಲ 3020 ರೈತರಿಗೆ ಮಾತ್ರ ಮಧ್ಯಂತರ ಪರಿಹಾರ ಜಮೆ ಮಾಡಿದೆ. ಇನ್ನುಳಿದ 22356 ಜನರು ಮಧ್ಯಂತರ ಪರಿಹಾರಕ್ಕೆ ಅರ್ಹರಿದ್ದರೂ ಅವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಬದಲಾಗಿ 3114 ರೈತರು ಎಲ್ಲ ಅಗತ್ಯ ದಾಖಲೆಗಳಿದ್ದರೂ, ಸರಿಯಾದ ಸಂದರ್ಭದಲ್ಲಿಯೇ ದೂರನ್ನು ಸಲ್ಲಿಸಿದ್ದರೂ ಅವರ ಜಮೀನುಗಳು ಪಾಳು (ಜಮೀನಿನಲ್ಲಿ ಏನೂ ಇಲ್ಲ) ಎಂದು ದಾಖಲಿಸಿ ಪರಿಹಾರವನ್ನೇ ತಿರಸ್ಕರಿಸಿದ್ದಾರೆ.

ಪಾಳು ಭೂಮಿ ಎಂದು ನಮೂದು: ವಿಮೆ ಸಮೀಕ್ಷೆಯ ವೇಳೆಯಲ್ಲಿ ಸರ್ವೇ ನಂಬರ್‌ಗಳಿಗೆ ಹೋಗಿ ಸರಿಯಾಗಿ ಸಮೀಕ್ಷೆ ಮಾಡದೇ ಒಂದೇ ಸರ್ವೇ ನಂಬರ್‌ನಲ್ಲಿ ನಿಂತು ಸಮೀಕ್ಷೆ ಮಾಡಿದ್ದಾರೆ. ಆ ಜಮೀನಿನಲ್ಲಿ ಬೆಳೆ ಇಲ್ಲದೇ ಇದ್ದರೆ, ಅದೇ ಸರ್ವೇ ನಂಬರ್‌ನಲ್ಲಿರುವ ಇನ್ನುಳಿದ ಹಿಸ್ಸಾಗಳಲ್ಲಿರುವ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದರೂ ಅವು ಕೂಡಾ ಪಾಳು ಎಂದು ನಮೂದಿಸಿದ್ದು, ನೈಜ ರೈತರಿಗೆ ಅನ್ಯಾಯವಾಗಿದೆ.

ರೈತರು ಬೀದಿಗೆ: 2025- 26ನೇ ಸಾಲಿನಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಒಣ ಮೆಣಸಿನಕಾಯಿ ಮತ್ತು ಗೋವಿನಜೋಳಕ್ಕೆ ಬೆಳೆವಿಮೆ ಕ್ಲೇಮ್ ಆಗಿದೆ. ಕೆಲವೇ ಕೆಲವು ರೈತರಿಗೆ ಮಧ್ಯಂತರ ಪರಿಹಾರ ದೊರೆತಿದ್ದು, ಇನ್ನುಳಿದ 52013 ರೈತರಿಗೆ (ಒಟ್ಟು ರೈತರು) ಪೂರ್ಣ ಪ್ರಮಾಣದ ಕ್ಲೇಮ್ ಸಿಕ್ಕಿಲ್ಲ. ರೈತರು ಬ್ಯಾಂಕ್ ಮತ್ತು ಕೃಷಿ ಇಲಾಖೆ ಕೇಳಿದ ಎಲ್ಲ ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ನೀಡಿದ್ದರೂ ವಿಮಾ ಕಂಪನಿಯ ಅಧಿಕಾರಿಗಳು ಮಾತ್ರ ಗಮನ ನೀಡುತ್ತಿಲ್ಲ.

ಜಾಣ ಕುರುಡು: ಪ್ರಸಕ್ತ ಸಾಲಿನಲ್ಲಿ ತೀವ್ರ ಬರಗಾಲ ಆವರಿಸಿದ್ದು, ರೈತರು ಬಿತ್ತನೆಗೆ ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಹಿಂದಿನ ವರ್ಷದ ಬೆಳೆವಿಮೆ ಪರಿಹಾರ ಕೈಗೆ ಬಂದಿದ್ದರೆ ಅನ್ನದಾತನಿಗೆ ಆಸರೆಯಾಗುತ್ತಿತ್ತು. ಇದಕ್ಕಾಗಿ ಹಲವಾರು ಬಾರಿ ಹೋರಾಟ ಮಾಡಿ ಮನವಿ ನೀಡಿ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅನ್ಯಾಯವಾಗುತ್ತಿದೆ ಎಂದು ವಿನಂತಿಸಿದಾಗಲೂ, ಜಿಲ್ಲಾಡಳಿತವಾಗಲಿ ಅಥವಾ ಕೃಷಿ ಇಲಾಖೆಯಾಗಲಿ ವಿಮಾ ಕಂಪನಿಗಳ ವಿರುದ್ಧ ಯಾವುದೇ ಶಿಸ್ತುಕ್ರಮ ಜರುಗಿಸದೇ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ರೈತ ಮುಖಂಡ ಪರಮೇಶ್ವರ ಜಂತ್ಲಿ ತಿಳಿಸಿದರು.

ಸರ್ಕಾರಕ್ಕೆ ಪತ್ರ: ಈ ವಿಷಯವಾಗಿ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳಿಗೆ, ಸರ್ಕಾರಕ್ಕೆ ಪತ್ರ ಬರೆದು ಗಮನಕ್ಕೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾಸ್ಪತ್ರೆಗೆ ಇರುವುದು ಒಂದೇ ಆ್ಯಂಬುಲೆನ್ಸ್
ಹೊರಗುತ್ತಿಗೆ ನೌಕರರ ನೂತನ ಕನಿಷ್ಠ ವೇತನ ಆದೇಶ ತಕ್ಷಣ ಜಾರಿಗೊಳಿಸಲು ಆಗ್ರಹ