ಗದಗ: ಜಿಲ್ಲೆಯಲ್ಲಿ ತೀವ್ರವಾದ ಬರಗಾಲವಿದೆ. ಪ್ರಾಥಮಿಕ ಅಂದಾಜಿನಂತೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ ಒಟ್ಟು 164 ಕೋಟಿ ಮೌಲ್ಯದ ಹಾನಿಯಾಗಿದೆ. ಎನ್ ಡಿಆರ್ ಎಫ್ ನಿಯಮಾವಳಿಯಂತೆ ಮತ್ತು ರೈತರ ಹೊಲಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಕಳೆದ 68 ದಿನಗಳಲ್ಲಿ(ಜೂ. 1ರಿಂದ ಆ. 7) ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 31ರಷ್ಟು ಮಳೆ ಕೊರತೆಯಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಅರ್ಹತೆಯಿದ್ದು, ತಾಲೂಕುವಾರು ವೈಜ್ಞಾನಿಕ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಗಜೇಂದ್ರಗಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿದ್ದು, ಶೇ. 47, ಗದಗ ಶೇ. 43, ಮುಂಡರಗಿ ಶೇ. 33, ಶಿರಹಟ್ಟಿ ಶೇ. 27, ಲಕ್ಷ್ಮೇಶ್ವರ ಶೇ. 18ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿದ್ದು, ತಾಂತ್ರಿಕ ನಿಯಮಾವಳಿಗಳಂತೆ ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನಂತೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ ಒಟ್ಟು 164 ಕೋಟಿ ಮೌಲ್ಯದ ಹಾನಿಯಾಗಿದೆ. ಜಿಲ್ಲೆಯ ಶೇ. 75ರಷ್ಟು ರೈತರು ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿದ್ದು, ಶೇ. 80ರಷ್ಟು ಬೆಳೆ ವಿಫಲವಾಗಿರುವ ಸಾಧ್ಯತೆಯಿದೆ. ವಿಮಾ ಕಂಪನಿಗಳಿಂದ ಶೀಘ್ರ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ, ಗದಗ ಶಾಸಕ ಎಚ್.ಕೆ. ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಅಧಿಕಾರಿಗಳು ಇದ್ದರು.