ಗದಗ: ಜಿಲ್ಲೆಯು ರಚನಾತ್ಮಕ ಕಾರ್ಯಗಳಿಗೆ ಹೆಸರುವಾಸಿಯಾಗಿದೆ. ರಾಜಕೀಯ ಕಾರ್ಯಕರ್ತರನ್ನು ಸೇವಾ ಕ್ಷೇತ್ರಕ್ಕೆ ತೊಡಗಿಸಿದ ಮೊದಲ ಕ್ಷೇತ್ರ ಗದಗ. ಸೇವೆಯ ಮೂಲಕ ಜನರನ್ನು ತಲುಪಿ, ಮುಂದಿನ 100 ದಿನಗಳಲ್ಲಿ ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗುವಂತೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಂಕಲ್ಪ ಮಾಡೋಣ ಎಂದು ಗದಗ ಶಾಸಕ ಎಚ್. ಕೆ. ಪಾಟೀಲ ಕಾರ್ಯಕರ್ತರಿಗೆ ಕರೆ ನೀಡಿದರು.
ಸೇವಾ ಕ್ಷೇತ್ರವು ಅತ್ಯಂತ ವಿಶಾಲವಾಗಿದ್ದು, ಅದಕ್ಕೆ ಯಾವುದೇ ಮಿತಿ ಇಲ್ಲ. ಜನಸೇವೆಗೆ ಮಂತ್ರಿ ಸ್ಥಾನವೇ ಬೇಕೆಂದೇನೂ ಇಲ್ಲ. ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು, ಸ್ವಾವಲಂಬಿ ಹಾಗೂ ಸಮೃದ್ಧ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸಲು ಪಕ್ಷದ ತತ್ವ- ಸಿದ್ಧಾಂತಗಳಡಿ ಕಾರ್ಯನಿರ್ವಹಿಸೋಣ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಇದೇ ವೇಳೆ ತಮ್ಮ ಬೆಂಬಲಕ್ಕೆ ನಿಂತು ಗದಗ- ಬೆಟಗೇರಿ ನಗರಸಭೆ ಸದಸ್ಯ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆಯುವಂತೆ ಸದಸ್ಯರಲ್ಲಿ ಮನವಿ ಮಾಡಿದರು. ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ. ಆರ್. ಪಾಟೀಲ ಮಾತನಾಡಿ, ಕಾರ್ಯಕರ್ತರು ಧೈರ್ಯಗೆಡದೆ ಕಾಂಗ್ರೆಸ್ ಸಿದ್ಧಾಂತಗಳ ಮೂಲಕ ಜನಸೇವೆಗೆ ಮುಂದಾಗಬೇಕು ಎಂದರು.