ಕೋಟ್ಯಂತರ ಅನುದಾನ: ಆಮೆಗತಿ ಕಾಮಗಾರಿ!

KannadaprabhaNewsNetwork |  
Published : Sep 17, 2026, 03:00 AM IST
ಲೋಟಗೇರಿ–ನಾಲತವಾಡ ರಸ್ತೆ | Kannada Prabha

ಸಾರಾಂಶ

ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ತಂದರೂ ಕಾಮಗಾರಿಗಳು ಮಾತ್ರ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ನಾಲತವಾಡ ಭಾಗದ ಅಭಿವೃದ್ಧಿ ಮರೀಚಿಕೆಯಾಗಿದೆ. ಭೂಮಿಪೂಜೆ, ಶಂಕುಸ್ಥಾಪನೆಗಳ ಸಂಭ್ರಮ ಮುಗಿದು ತಿಂಗಳು, ವರ್ಷಗಳೇ ಕಳೆದರೂ ರಸ್ತೆ ಕಾಮಗಾರಿಗಳು ಪೂರ್ಣಗೊಂಡು ವಾಹನ ಸವಾರರ ತಾಪತ್ರಯ ತಪ್ಪುತ್ತಿಲ್ಲ.

ಯೂನುಸ್ ಮೂಲಿಮನಿ

ಕನ್ನಡಪ್ರಭ ವಾರ್ತೆ ನಾಲತವಾಡಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ತಂದರೂ ಕಾಮಗಾರಿಗಳು ಮಾತ್ರ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ನಾಲತವಾಡ ಭಾಗದ ಅಭಿವೃದ್ಧಿ ಮರೀಚಿಕೆಯಾಗಿದೆ. ಭೂಮಿಪೂಜೆ, ಶಂಕುಸ್ಥಾಪನೆಗಳ ಸಂಭ್ರಮ ಮುಗಿದು ತಿಂಗಳು, ವರ್ಷಗಳೇ ಕಳೆದರೂ ರಸ್ತೆ ಕಾಮಗಾರಿಗಳು ಪೂರ್ಣಗೊಂಡು ವಾಹನ ಸವಾರರ ತಾಪತ್ರಯ ತಪ್ಪುತ್ತಿಲ್ಲ.

ನಾಲತವಾಡ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಂದಿರುವ ಹೆಗ್ಗಳಿಕೆ ಒಂದೆಡೆಯಾದರೆ, ಅದಕ್ಕೆ ತಕ್ಕಂತೆ ಕಾಮಗಾರಿ ಪೂರ್ಣಗೊಳ್ಳದಿರುವುದು ಜನರ ಬೇಸರ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಲೋಟಗೇರಿಯಿಂದ ನಾಲತವಾಡಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸುಮಾರು ಮೂರು ವರ್ಷಕ್ಕೂ ಅಧಿಕ ಕಾಲ ಕಳೆದಿದೆ. ಆದರೂ ಕಾಮಗಾರಿ ಇನ್ನೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಗುತ್ತಿಗೆದಾರರು ಆಗಾಗ್ಗೆ ಬಂದು ಒಂದಿಷ್ಟು ಕೆಲಸ ಮಾಡಿ ಹೋಗುತ್ತಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅಪೂರ್ಣ ಕಾಮಗಾರಿಯಿಂದ ಗುಂಡಿಗಳು, ಧೂಳಿನಿಂದ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಪಿಎಂಜಿಎಸ್‌ವೈ ಯೋಜನೆಯಡಿ ನಾಲತವಾಡ-ಬಲದಿನ್ನಿ ರಸ್ತೆಯ ಕಾಮಗಾರಿ ವೇಗ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗಕ್ಕೆ ಉತ್ತಮ ರಸ್ತೆ ಕಲ್ಪಿಸುವ ಉದ್ದೇಶದಿಂದ ಅನುದಾನ ತಂದರೂ ಕಾಮಗಾರಿ ವಿಳಂಬವಾದರೆ ಅದರ ಪ್ರಯೋಜನ ಜನರಿಗೆ ಸಿಗೋದು ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.

ಭೂಮಿ ಪೂಜೆಗಷ್ಟೇ ಸೀಮಿತವಾದ ರಸ್ತೆ?: ಹನ್ನೆರಡುಕುಂಟಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮೂರು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ರೈತರಿಗೆ ಜಮೀನುಗಳಿಗೆ ತೆರಳಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಆದರೆ ಕಾಮಗಾರಿ ಆರಂಭವಾಗದ ಕಾರಣ ರೈತರು ಜಮೀನುಗಳಿಗೆ ತೆರಳಲು ಹರಸಾಹಸ ಪಡುವಂತಾಗಿದೆ.

ನಾಲತವಾಡದಲ್ಲಿ ಸುಮಾರು ₹2.5 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಕಳೆದ ತಿಂಗಳು ಭೂಮಿಪೂಜೆ ನೆರವೇರಿಸಲಾಗಿದೆ. ಆದರೆ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ. ಭೂಮಿಪೂಜೆ ಮಾಡಿದ ಬಳಿಕ ಕಾಮಗಾರಿ ಆರಂಭಿಸಲು ಇನ್ನೆಷ್ಟು ಸಮಯ ಬೇಕು ಎಂಬುದು ಸಾರ್ವಜನಿಕರ ಪ್ರಶ್ನೆ.

ಗುತ್ತಿಗೆದಾರರು ಕಾಮಗಾರಿಯನ್ನು ವಿಳಂಬ ಮಾಡುತ್ತಿದ್ದಾರೆಯೇ? ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುತ್ತಿಲ್ಲವೇ? ಕಾಮಗಾರಿಗೆ ನಿಗದಿತ ಗಡುವು ಇಲ್ಲವೇ? ಗಡುವು ಮೀರಿದರೂ ಗುತ್ತಿಗೆದಾರರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂಬ ಪ್ರಶ್ನೆಗಳಿಗೆ ಸಂಬಂಧಿಸಿದ ಇಲಾಖೆ ಸ್ಪಷ್ಟನೆ ನೀಡಬೇಕಿದೆ.

ಜನರ ತೆರಿಗೆ ಹಣದಿಂದ ನಡೆಯುವ ಕಾಮಗಾರಿಗಳು ಕೇವಲ ಭೂಮಿಪೂಜೆ ಹಾಗೂ ನಾಮಫಲಕಗಳಿಗೆ ಸೀಮಿತವಾಗಬಾರದು. ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಬಳಕೆಗೆ ಸಿಗಬೇಕು ಎಂಬುದು ಜನರ ಆಗ್ರಹ.

ಲೋಟಗೇರಿ-ನಾಲತವಾಡ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಹಲವಾರು ಬಾರಿ ಸೂಚನೆ ನೀಡಿದ್ದೇವೆ. ಈಗಾಗಲೇ ಕಾಮಗಾರಿ ಸಾಕಷ್ಟು ವಿಳಂಬವಾಗಿದೆ. ಕಳೆದ 15 ದಿನಗಳಿಂದ ಗುತ್ತಿಗೆದಾರರಿಗೆ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಿರಲಿಲ್ಲ. ಮತ್ತೆ ಕರೆ ಮಾಡಿ ಮಾತನಾಡಿದ್ದು, ಕಾಮಗಾರಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದ್ದೇವೆ.

- ಅಯ್ಯಪಗೌಡ ರೆಡ್ಡಿ, ಪಿಡಬ್ಲ್ಯುಡಿ ಎಇಇ

ಮೂರು ವರ್ಷದಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ ಯಾವಾಗ ಮುಗಿಯುತ್ತೇ ಎಂದು ಕಾಯುತ್ತಿದ್ದೇವೆ. ಕಲ್ಲು, ಧೂಳಿನಿಂದ ಈ ರಸ್ತೆಯಲ್ಲಿ ಹೋಗುವುದು ಸಾಕಾಗಿ ಹೋಗಿದೆ.

-ಅಕ್ಬರಸಾಬ ನಾಯ್ಕೋಡಿ, ಲೋಟಗೇರಿ ರಸ್ತೆ ಬದಿಯ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಸಮಾಜ ಒಗ್ಗಟ್ಟಾಗಿ ತನ್ನ ಶಕ್ತಿ ಪ್ರದರ್ಶಿಸಬೇಕಿದೆ: ಯತ್ನಾಳ
29ಕ್ಕೆ ಸಚಿವ ಪ್ರಹ್ಲಾದ ಜೋಶಿ ಮನೆ ಎದುರು ಪ್ರತಿಭಟನೆ