ಕನ್ನಡಪ್ರಭ ವಾರ್ತೆ ಮಡಿಕೇರಿ
ಶನಿವಾರ ಸಂಜೆಯಿಂದಲೇ ಸಾವಿರಾರು ವಾಹನಗಳು ಮಡಿಕೇರಿ ಕಡೆಗೆ ಆಗಮಿಸಿತು. ವಾಹನಗಳನ್ನು ಜನರಲ್ ತಿಮ್ಮಯ್ಯ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 9 ಗಂಟೆ ವೇಳೆಗೆ ಮಡಿಕೇರಿ ನಗರದ ರಸ್ತೆಗಳು ಜನರಿಂದಲೇ ಬಹುತೇಕ ಭರ್ತಿಯಾಗಿದ್ದವು. ನಗರದ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದಸರಾ ಹಿನ್ನೆಲೆಯಲ್ಲಿ ಮಂಜಿನ ನಗರಿ ಮಡಿಕೇರಿಯು ದೀಪಾಲಂಕಾರಗಳಿಂದ ಕಂಗೊಳಿಸಿತು. ಪ್ರವಾಸಿ ತಾಣ, ಸರ್ಕಾರಿ ಕಟ್ಟಡಗಳಲ್ಲಿ ಆಕರ್ಷಕ ಲೈಟಿಂಗ್ ಮಾಡಲಾಗಿತ್ತು.
ಮಡಿಕೇರಿಯ ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರದಲ್ಲಿ ಸಂಚರಿಸುವ ಮೂಲಕ ದಶ ಮಂಟಪಗಳ ಶೋಭಾಯಾತ್ರೆಗೆ ಚಾಲನೆ ದೊರಕಿತು. ಮೊದಲು ಪೇಟೆ ಶ್ರೀ ರಾಮ ಮಂದಿರ ದೇವಾಲಯದ ಮಂಟಪ ತೆರಳುವ ಮೂಲಕ ಮಡಿಕೇರಿ ದಸರಾದ ದಶಮಂಟಪಗಳ ಶೋಭಾಯಾತ್ರೆ ಆರಂಭಗೊಂಡಿತು.ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ದಂಡಿನಮಾರಿಯಮ್ಮ, ಕೋಟೆ ಮಹಾಗಣಪತಿ, ಕರವಲೆ ಭಗವತಿ, ಕಂಚಿ ಕಾಮಾಕ್ಷಿ, ದೇಚೂರು ಶ್ರೀ ರಾಮ ಮಂದಿರ, ಚೌಡೇಶ್ವರಿ, ಕೋದಂಡ ರಾಮ ದೇವಾಲಯದ ಮಂಟಪಗಳು ಶೋಭಾಯಾತ್ರೆ ಮೆರವಣಿಗೆ ನಡೆಸಿದವು.