ಜನಸ್ಪಂದನೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು

KannadaprabhaNewsNetwork |  
Published : Sep 30, 2025, 12:00 AM IST
ಬಳ್ಳಾರಿಯ ನೂತನ ಜಿಲ್ಲಾಡಳಿತ ಭವನ ಆವರಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಅಹವಾಲು ಸಲ್ಲಿಸಲು ಮುಗಿಬಿದ್ದಿದ್ದರು.  | Kannada Prabha

ಸಾರಾಂಶ

ಜನರ ಅಹವಾಲು ಸ್ವೀಕರಿಸಬೇಕಿದ್ದ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ಬರೋಬ್ಬರಿ ಎರಡು ತಾಸು ತಡವಾಗಿ ಬಂದರು

ಬಳ್ಳಾರಿ: ಇಲ್ಲಿನ ನೂತನ ಜಿಲ್ಲಾಡಳಿತ ಭವನ ಆವರಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ ಸೂಕ್ತ ವ್ಯವಸ್ಥೆಯಿಲ್ಲದ ಪರಿಣಾಮ ನಾಗರಿಕರು ಕುಂದುಕೊರತೆಗಳನ್ನು ಸಚಿವರ ಮುಂದೆ ಹೇಳಿಕೊಳ್ಳಲು ಪರದಾಡುವಂತಾಯಿತು.

ಜನಸ್ಪಂದನಕ್ಕೆ ಚಾಲನೆ ನೀಡಿ, ಜನರ ಅಹವಾಲು ಸ್ವೀಕರಿಸಬೇಕಿದ್ದ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ಬರೋಬ್ಬರಿ ಎರಡು ತಾಸು ತಡವಾಗಿ ಬಂದರು. ಮಧ್ಯಾಹ್ನ 12.30ಕ್ಕೆ ಶುರುಗೊಳ್ಳಬೇಕಿದ್ದ ಸಭೆ 2.40ಕ್ಕೆ ಉದ್ಘಾಟನೆಗೊಂಡಿತು. ಸಮಯವಾಗಿದೆ ಎಂಬ ಕಾರಣಕ್ಕೆ ಉದ್ಘಾಟನಾ ಭಾಷಣ ಮಾಡದೇ ನೇರವಾಗಿ ಜನರ ಅಹವಾಲುಗಳನ್ನು ಆಲಿಸಲು ಸಚಿವರು ಮುಂದಾದರು. ಆದರೆ, ಜಿಲ್ಲಾಡಳಿತ ಅಹವಾಲು ಹೇಳಿಕೊಳ್ಳಲು ಬಂದಿದ್ದ ಜನರಿಗೆ ಸಚಿವರನ್ನು ಭೇಟಿ ಮಾಡಲು ಸರಿಯಾಗಿ ವ್ಯವಸ್ಥೆ ಮಾಡದೇ ಇರುವುದರಿಂದ ಜನರ ನೂಕು ನುಗ್ಗಲಾಯಿತು. ಇದೇ ವೇಳೆ ಜೋರಾಗಿ ಮಳೆ ಸುರಿದಿದ್ದರಿಂದ ಜನರು ಒಂದೆಡೆ ಕೂಡಿಕೊಂಡರು. ಅನೇಕ ಸಮಸ್ಯೆ, ಸಂಕಷ್ಟಗಳನ್ನು ಹೇಳಿಕೊಳ್ಳಲು ದೂರದ ಊರುಗಳಿಂದ ಬಂದಿದ್ದ ಕೆಲ ವೃದ್ಧರು ನೂಕು ನುಗ್ಗಲು ಕಂಡು ದೂರವೇ ಉಳಿದರು.

ಜನಸ್ಪಂದನ ಸಭೆಗೆ ಸಚಿವರು ಆಗಮಿಸುತ್ತಿದ್ದಂತೆಯೇ ಕೆಲ ಕಾಂಗ್ರೆಸ್ಸಿಗರು ಸೇರಿದಂತೆ ನೂರಾರು ಸಂಖ್ಯೆಯಲ್ಲಿದ್ದ ಹಿಂಬಾಲಕರು ಜನಸ್ಪಂದನ ವೇದಿಕೆ ಮುಂಭಾಗವೇ ನಿಂತುಕೊಂಡರು. ಇದು ಸಾರ್ವಜನಿಕರಿಗೆ ಕಿರಿಕಿರಿ ಎನಿಸಿತು.

ಸಚಿವರು, ಶಾಸಕರ ಹಿಂಬಾಲಕರ ದಂಡೇ ವೇದಿಕೆಯನ್ನು ಆಕ್ರಮಿಸಿಕೊಂಡಿತ್ತು. ಜನಸ್ಪಂದನೆ ವೇದಿಕೆಯಲ್ಲಿ ಏನು ನಡೆಯುತ್ತಿದೆ? ಯಾರು ಯಾವ ಅಹವಾಲು ಸಲ್ಲಿಸಿದರು. ಸಚಿವರ ಉತ್ತರವೇನು? ಸ್ಥಳದಲ್ಲಿ ಎಷ್ಟು ಜನರ ಸಮಸ್ಯೆ ಬಗೆಹರಿಯಿತು ಎಂಬುದೇ ಗೊತ್ತಾಗಲಿಲ್ಲ. ಸಚಿವರು, ಶಾಸಕರ ಹಿಂಬಾಲಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಾಥ್ ನೀಡಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸ್ಥಳೀಯರು ತಂದಿದ್ದ ಅಹವಾಲು ಅರ್ಜಿಗಳನ್ನು ಪಡೆದು, ಕೆಲವರಿಗೆ ಮುಂದಿನ ಕ್ರಮದ ಭರವಸೆ ನೀಡಿದರು. ಸುಮಾರು ಒಂದು ವರ್ಷದ ಬಳಿಕ ಸಚಿವರ ಸಮ್ಮುಖದಲ್ಲಿ ಜನಸ್ಪಂದನ ನಡೆದಿದ್ದರಿಂದ ಅಹವಾಲು ಸಲ್ಲಿಸಲು ಜನರು ದೊಡ್ಡ ಸಂಖ್ಯೆಯಲ್ಲಿಯೇ ಜಮಾಯಿಸಿದ್ದರು. ಆದರೆ, ಸಮಯದ ಅಭಾವದಿಂದ ಪ್ರತಿಯೊಬ್ಬರ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಕಾಳಜಿ ಕಂಡು ಬರಲಿಲ್ಲ. ಸಚಿವ ಜಮೀರ್ ಖಾನ್ ಜನಸ್ಪಂದನ ವೇಳೆ ಬಡವರು ತಮ್ಮ ಸಂಕಷ್ಟ ಹೇಳಿಕೊಂಡರೆ ಕೈಗೆ ಸಿಕ್ಕಷ್ಟು ಹಣ ಕೊಡುತ್ತಾರೆ ಎಂಬುದನ್ನು ತಿಳಿದಿದ್ದ ಅನೇಕರು ಪುಟ್ಟ ಮಕ್ಕಳನ್ನು ಕರೆದುಕೊಂಡು ಜನಸ್ಪಂದನ ಸಭೆಗೆ ಆಗಮಿಸಿದ್ದರು. ಸಚಿವರು ಕೆಲವರಿಗೆ ಹಣದ ನೆರವು ನೀಡಿ, ಗಮನ ಸೆಳೆದರು. ಶಾಸಕರಾದ ಬಿ.ನಾಗೇಂದ್ರ, ನಾರಾ ಭರತ್ ರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಸುಕುಂ, ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಎಸ್ಪಿ ಡಾ.ಶೋಭಾರಾಣಿ ಮತ್ತಿತರರಿದ್ದರು.

ತರಾತುರಿ ಅಹವಾಲು ಸ್ವೀಕಾರ: ಜಿಲ್ಲಾ ಸಚಿವರು ತರಾತುರಿಯಲ್ಲಿ ಜನರ ಅಹವಾಲು ಸ್ವೀಕರಿಸಿದ್ದು ಎಷ್ಟು ಸರಿ ? ಎಂದು ಅಹವಾಲು ಸಲ್ಲಿಸಲು ಬಂದಿದ್ದ ಕೆಲ ನಾಗರಿಕರು ಬೇಸರ ವ್ಯಕ್ತಪಡಿಸಿದರು. ಸಚಿವರು ಸಭೆಗೆ ತಡವಾಗಿ ಬಂದರು. ವೇದಿಕೆಗೆ ಹೋಗಿ ಸಮಸ್ಯೆ ಹೇಳಿಕೊಳ್ಳೋಣ ಎಂದರೆ ಸಚಿವರು, ಶಾಸಕರ ಹಿಂಬಾಲಕರೇ ವೇದಿಕೆಯಲ್ಲಿ ತುಂಬಿಕೊಂಡಿದ್ದರು. ಹೀಗಾಗಿ ನಾವು ಸಚಿವರನ್ನು ಭೇಟಿ ಮಾಡುವುದು ಸಾಧ್ಯವಾಗಲಿಲ್ಲ ಎಂದು ಗ್ರಾಮೀಣ ಪ್ರದೇಶಗಳಿಂದ ಬೆಳಿಗ್ಗೆಯೇ ಆಗಮಿಸಿದ್ದ ಕೆಲ ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ