ಹುಬ್ಬಳ್ಳಿ:
ಕಲಘಟಗಿ ಮತ್ತು ಹಳಿಯಾಳ ಭಾಗದ ಕಬ್ಬು ಬೆಳೆಗಾರರಿಗೆ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಬಾಕಿ ಉಳಿಸಿಕೊಂಡಿರುವ ₹ 26 ಕೋಟಿ ಬಾಕಿ ಪಾವತಿಸುವ ವರೆಗೆ ರೈತರು ಆ ಕಾರ್ಖಾನೆಗೆ ಕಬ್ಬು ನೀಡಬಾರದು ಎಂದು ಸಚಿವ ಸಂತೋಷ ಲಾಡ್ ಮನವಿ ಮಾಡಿದ್ದಾರೆ.ಬೆಂಗಳೂರಿನ ವಿಕಾಸಸೌಧದಲ್ಲಿ ಸೋಮವಾರ ಕಲಘಟಗಿ ಮತ್ತು ಹಳಿಯಾಳ ಭಾಗದ ಕಬ್ಬು ಬೆಳೆಗಾರರ ಸಂಘ ಹಾಗೂ ಕಬ್ಬು ಬೆಳೆಗಾರರ ಹಿತಸಂರಕ್ಷಣಾ ಸಮಿತಿಯ ರೈತ ಪ್ರತಿನಿಧಿಗಳು, ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಮತ್ತು ಸಕ್ಕರೆ ಆಯುಕ್ತಾಲಯದ ಪ್ರತಿನಿಧಿ ಸಿ.ಪಿ. ಪಾಟೀಲ, ಸಕ್ಕರೆ ಕಾರ್ಖಾನೆಯ ಆಡಳಿತ ಪ್ರತಿನಿಧಿಗಳಾದ ರಮೇಶ ರೆಡ್ಡಿ, ಶಂಕರಲಿಂಗ ಅಗಡಿ, ಶಾ ಅವರೊಂದಿಗೆ ನಡೆದ ಸಭೆಯಲ್ಲಿ ಅವರು ರೈತರಿಗೆ ಈ ರೀತಿ ಸಲಹೆ ನೀಡಿದರು.
ಕಳೆದ ವರ್ಷ ರೈತರು ನೀಡಿದ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯವರು ₹ 256 ಕಡಿಮೆ ನೀಡಿದ್ದಾರೆ. ಆ ಹಣ ಕುರಿತಂತೆ ರೈತರು ಕೇಳಿದರೆ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಸಕ್ಕರೆ ಕಾರ್ಖಾನೆ ಸಕ್ಕರೆ ಆಯುಕ್ತಾಲಯದ ಆದೇಶ ಧಿಕ್ಕರಿಸಿ ರೈತರಿಗೆ ಕಡಿಮೆ ಹಣ ಸಂದಾಯ ಮಾಡಿದೆ. ಇದರಿಂದ ರೈತರಿಗೆ ಬಹಳಷ್ಟು ಅನ್ಯಾಯವಾಗಿದೆ. ಹೀಗಾಗಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲಾಧಿಕಾರಿಗಳು ಕಾರ್ಖಾನೆಯವರು ಹಣ ಸಂದಾಯ ಮಾಡುವವರಿಗೆ ಆ ಕಾರ್ಖಾನೆಯವರು ಕಬ್ಬು ಕಟಾವು ಮಾಡುವವರು ಕ್ಷೇತ್ರಕ್ಕೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ರೈತರ ಬಾಕಿಗೆ ಬಡ್ಡಿ ಸಮೇತ ಹಣ ದೂರಕಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಪ್ಯಾರಿ ಕಾರ್ಖಾನೆಗೆ ಕಬ್ಬು ನೀಡುವುದು, ಬಿಡುವುದು ರೈತರ ವಿವೇಚನೆಗೆ ಬಿಟ್ಟಿದ್ದು, ಅವರು ಬೇರೆ ಕಾರ್ಖಾನೆಗೆ ಸಾಗಿಸಲು ಮುಂದಾದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಒಟ್ಟಿನಲ್ಲಿ ಕಾರ್ಖಾನೆ ರೈತರಿಗೆ ಬಾಕಿ ಉಳಿಸಿಕೊಂಡಿರುವ ಹಣ ಪಾವತಿಸುವ ವರೆಗೆ ಕಬ್ಬು ನೀಡದಂತೆ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಧಾರವಾಡ ಜಿಲ್ಲಾ ಕಬ್ಬು ಬೆಳಗಾರ ಅಧ್ಯಕ್ಷ ಮಹೇಶ್ ಬೆಳಗಾವ್ಕರ್, ಪ್ರಧಾನ ಕಾರ್ಯದರ್ಶಿ ಪರುಶುರಾಮ್ ಎತ್ತಿನಗುಡ್ಡ, ಉಳುವಪ್ಪ ಬಳಿಗೇರ, ನಾಗೇಂದ್ರ ಜಿವೊಜಿ, ಕಬ್ಬು ಬೆಳೆಗಾರರ ಹೋರಾಟ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸಂದೀಪ ಕುಮಾರ ಬೊಬಾಟ, ಪ್ರಕಾಶ ಪಾಕರೆ, ಬಸನಗೌಡ ಶಿದ್ದನಗೌಡರ, ರಾಮದಾಸ ಬೆಳಗಾಂವಕರ, ಶಿವು ತಡಸ, ವಸಂತ ಡಾಕಪ್ಪನವರ, ಮಲ್ಲಪ್ಪ ಹೊನ್ನಿಹಳ್ಳಿ, ಬಸವಣೆಪ್ಪ ಅದರಗುಂಚಿ, ಸಹದೇವ ಕುಂಬಾರ, ನಾರಾಯಣ ನೆಸ್ರೇಕರ್ ಮುಂತಾದವರು ಉಪಸ್ಥಿತರಿದ್ದರು.