
ಕನ್ನಡಪ್ರಭ ವಾರ್ತೆ ತುಮಕೂರು
ಮೃತಪಟ್ಟವರನ್ನು ಕೊಪ್ಪಳ ಜಿಲ್ಲೆಯ ಕುಕನೂರು ಮತ್ತು ಯಲಬುರ್ಗಾ ಮೂಲದ ಗವಿಸಿದ್ದಪ್ಪ (40), ಮಾರತಪ್ಪ (35), ವೆಂಕಟೇಶಪ್ಪ (30) ಹಾಗೂ ಸಾಕ್ಷಿ (6) ಎಂದು ಗುರುತಿಸಲಾಗಿದೆ. ಪ್ರಶಾಂತ್, ಪ್ರವೀಣ್‌ಕುಮಾರ್, ರಾಜಪ್ಪ, ಉಲಗಪ್ಪ, ರಾಕೇಶ್, ತಿರುಪತಿ ಹಾಗೂ ಶ್ರೀನಿವಾಸ್ ಸೇರಿದಂತೆ 7 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಳೆದ 4 ದಿನಗಳ ಹಿಂದೆ 11 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕೊಪ್ಪಳ ಜಿಲ್ಲೆಯಿಂದ ಶಬರಿಮಲೈಗೆ ಕ್ರೂಸರ್ ವಾಹನದಲ್ಲಿ ತೆರಳಿದ್ದರು. ಶಬರಿಮಲೈನಲ್ಲಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ಊರಿಗೆ ವಾಪಸ್ಸಾಗುತ್ತಿದ್ದರು. ದುರಾದೃಷ್ಟವಶಾತ್ ಮುಂಜಾನೆ ಮಾರ್ಗಮಧ್ಯೆ ತಾಲೂಕಿನ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ವಸತಂನರಸಾಪುರ ಕೈಗಾರಿಕಾ ಪ್ರದೇಶದ ಸಮೀಪವಿರುವ ಬೆಳ್ಳಾವಿ ಕ್ರಾಸ್ ಬಳಿ ರಸ್ತೆಬದಿ ನಿಂತಿದ್ದ ಲಾರಿಗೆ ಅಯ್ಯಪ್ಪಸ್ವಾಮಿ ಭಕ್ತರಿದ್ದ ಈ ಕ್ರೂಸರ್ ವಾಹನ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.ಕ್ರೂಸರ್ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದು ಶವಾಗಾರಕ್ಕೆ ಸಾಗಿಸಿದರು. ನಂತರ ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋರಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಡಿಷನಲ್ ಎಸ್ಪಿ ಗೋಪಾಲ್, ಪುರುಷೋತ್ತಮ್, ಡಿವೈಎಸ್ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನೂ ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಕೆ. ವಿ. ಅಶೋಕ್ ಬೆಳಿಗ್ಗೆ 5.30 ರ ಸುಮಾರಿಗೆ ಘಟನೆ ನಡೆದಿದೆ. ರಸ್ತೆ ಬದಿ ವಾಹನ ನಿಲ್ಲಿಸಿದ್ದ ಲಾರಿ ಚಾಲಕ ಶೌಚಕ್ಕೆ ತೆರೆಳಿದ್ದರು. ಕ್ರೂಸರ್ ನಲ್ಲಿ ಒಟ್ಟು 11 ಜನ ಇದ್ದರು ಎಂಬ ಮಾಹಿತಿಯಿದೆ. ಘಟನೆಯಲ್ಲಿ 4 ಜನ ಮೃತಪಟ್ಟಿದ್ದು, 7 ಜನರಿಗೆ ಗಾಯವಾಗಿದೆ. ಕ್ರೂಸರ್ ಚಾಲಕ ಪ್ರದೀಪ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಲಾರಿ ಚಾಲಕ ಸತೀಶ್ ಹಾಗೂ ಕ್ರೂಸರ್ ಚಾಲಕ ಪ್ರದೀಪ್ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು. ಘಟನೆಯಲ್ಲಿ 6 ವರ್ಷದ ಸಾಕ್ಷಿ ಎಂಬ ಬಾಲಕಿ ಸಹ ಮೃತಪಟ್ಟಿದ್ದು ಈ ಸಂಬಂಧ ಮೃತ ಬಾಲಕಿ ತಂದೆ ಹುಲುಗಪ್ಪ ಸಹ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಕ್ರೂಸರಗಳಲ್ಲಿ ನಾವು ಶಬರಿಮಲೈಗೆ ಹೋಗಿದ್ದೇವು. ನಂತರ ದರ್ಶನ ಮಾಡಿ ಅಲ್ಲಿಂದ ತಮಿಳುನಾಡಿನ ಪಳನಿಗೆ ಹೋಗಿ ಅಲ್ಲಿಂದ ಬೆಂಗಳೂರು ಮೂಲಕ ಕೊಪ್ಪಳಕ್ಕೆ ಪ್ರಯಾಣ ಬೆಳೆಸಿದ್ದೇವು. ಮಗಳು ನನ್ನ ಪಕ್ಕದಲ್ಲಿಯೇ ಮಲಗಿದ್ದಳು, ಅಪಘಾತ ಹೇಗಾಯಿತು ಎಂದು ಗೊತ್ತಿಲ್ಲ. ನಾಲ್ಕು ಜನ ಸಾವನ್ನಪ್ಪಿದ್ದಾರೆ. ನಾವು ಎಲ್ಲರೂ ಅಕ್ಕಪಕ್ಕದವರೆ. ಮಗಳನ್ನು ಎರಡನೇ ಬಾರಿ ಶಬರಿಗೆ ಕರೆದೊಯ್ದು ಒಳ್ಳೆಯದಾಗಲಿ ಎಂದು ಬೇಡಿಕೊಂಡು ಬಂದೇವು. ಆದರೆ ಘಟನೆಯಲ್ಲಿ ಮಗಳು ಇಲ್ಲವಾಗಿದ್ದಾಳೆ ಎಂದು ಕಣ್ಣೀರು ಹಾಕಿದ್ದಾರೆ.