ಕನ್ನಡಪ್ರಭ ವಾರ್ತೆ ಬೇಲೂರುಐತಿಹಾಸಿಕ ಚನ್ನಕೇಶವ ದೇವಸ್ಥಾನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಅವರು ಕುಟುಂಬ ಸಮೇತರಾಗಿ ಶ್ರೀ ಚೆನ್ನಕೇಶವ ಸ್ವಾಮಿಗೆ ವಿಶೇಷ ಕಲ್ಯಾಣೋತ್ಸವ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಅತ್ತೆ- ಮಾವನವರ ವಿವಾಹದ 50ನೇ ವರ್ಷದ ಸಂಭ್ರಮ ಹಾಗೂ ಕುಟುಂಬ ಸದಸ್ಯ ಕುಮಾರಸ್ವಾಮಿ ಅವರ ವಿವಾಹದ 25ನೇ ವರ್ಷದ ನೆನಪಿನ ಅಂಗವಾಗಿ ಹಾಗೂ ಲೋಕ ಕಲ್ಯಾಣ ಸರ್ವರ ಒಳಿತಿಗಾಗಿ ಶ್ರೀ ಚೆನ್ನಕೇಶವ ಸ್ವಾಮಿಯ ಕಲ್ಯಾಣೋತ್ಸವವನ್ನು ನಡೆಸಲಾಗುತ್ತಿದೆ ಎಂದರು.ವಸುದೈವ ಕುಟುಂಬಕಂ :
ಸನಾತನ ಧರ್ಮವನ್ನು ವಿರೋಧಿಸುವವರ ಇತಿಹಾಸದಲ್ಲಿ ಹಿರಣ್ಯಕಶ್ಯಪನಂತಹವರು ಧರ್ಮದ ವಿರುದ್ಧ ನಿಂತರೂ, ಅವರ ಕುಟುಂಬದಲ್ಲೇ ಪ್ರಹ್ಲಾದನಂತಹ ಭಕ್ತರು ಹುಟ್ಟಿ ಧರ್ಮದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಅದೇ ರೀತಿ ಧರ್ಮವನ್ನು ವಿರೋಧಿಸುವವರ ಒಡಲಲ್ಲಿಯೇ ಭಗವಂತನ ದರ್ಶನ ಮಾಡಿಸುವಂತಹ ಪ್ರಹ್ಲಾದರು ಜನ್ಮ ತಾಳಿ ಸನಾತನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.ಹೊಸ ಸರ್ಕಾರಕ್ಕೆ ಕಿವಿಮಾತು:
ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ. ಆದರೆ ಜನಪರ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯಲು ಅವಕಾಶವಿದೆ. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿದರೆ ವಿರೋಧ ಪಕ್ಷವಾಗಿ ಸಂಪೂರ್ಣ ಬೆಂಬಲ ನೀಡುತ್ತೇವೆ. ಆದರೆ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ನಿರ್ಧಾರ ಕೈಗೊಂಡರೆ ಅದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ್ ಭಟ್, ನರಸಿಂಹಪ್ರಿಯ ಭಟ್ , ಪಲ್ಲವಿ ಸಿಟಿ ರವಿ, ಬಿಜೆಪಿ ಕಾರ್ಯಕರ್ತರು, ಕುಟುಂಬ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.