ಹುಬ್ಬಳ್ಳಿ:
ಸಾರಸ್ವತ ಚೇಂಬರ್ ಗ್ಲೋಬಲ್ ಎಂಟರ್‌ಪ್ರೆನರ್ ವತಿಯಿಂದ ಆಯೋಜಿಸಲಾಗಿದ್ದ "ಎಂಎಸ್‌ಎಂಇ ಮತ್ತು ಸ್ಟಾರ್ಟಪ್ ಕಾನ್‌ಕ್ಲೇವ್- 2026 " ಶನಿವಾರ ಇಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.ಉದ್ಯಮಿಗಳು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ಬ್ಯಾಂಕಿಂಗ್ ವಲಯದ ಪ್ರತಿನಿಧಿಗಳು, ಹಣಕಾಸು ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಸಮಾವೇಶವು ಉದ್ಯಮದ ಬೆಳವಣಿಗೆಗೆ ಹೊಸ ದಿಕ್ಕನ್ನು ನೀಡಿತು.
ಕಾರ್ಯಕ್ರಮ ಉದ್ಘಾಟಿಸಿದ ಡಾ. ರಾಜನ್ ದೇಶಪಾಂಡೆ ಅರ್ಥಪೂರ್ಣವಾಗಿ ಮಾತನಾಡಿದರು. ಸಮಾವೇಶದಲ್ಲಿ ಎಂಎಸ್‌ಎಂಇ ಮತ್ತು ಸ್ಟಾರ್ಟಪ್ ಬೆಳವಣಿಗೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ಮತ್ತು ಚರ್ಚೆಗಳು ನಡೆದವು. ಅನುಪ್ ಪೈ ಉದ್ಯಮಗಳನ್ನು ಸಾರ್ವಜನಿಕ ಷೇರು ಮಾರುಕಟ್ಟೆಯತ್ತ ಕೊಂಡೊಯ್ಯುವ ಮಾರ್ಗಗಳ ಕುರಿತು ವಿವರಿಸಿದರು. ಸಿಎ ಉಲ್ಲಾಸ್ ಕಾಮತ್ ಕುಟುಂಬ ಆಧಾರಿತ ಉದ್ಯಮಗಳ ಸುಸ್ಥಿರ ಬೆಳವಣಿಗೆ ಮತ್ತು ನಾಯಕತ್ವ ವರ್ಗಾವಣೆಯ ಮಹತ್ವವನ್ನು ತಿಳಿಸಿದರು.ವಿಶೇಷ ಪ್ಯಾನಲ್ ಚರ್ಚೆಯಲ್ಲಿ ಸಾಂಪ್ರದಾಯಿಕ ಉದ್ಯಮಗಳನ್ನು ಆಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ಸಂಸ್ಥೆಗಳಾಗಿ ರೂಪಾಂತರಿಸುವ ಮಾರ್ಗಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳ ಪರಿಹಾರಗಳ ಕುರಿತು ಅರ್ಥಪೂರ್ಣ ಸಂವಾದ ನಡೆಯಿತು.
ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಉದ್ಯಮಗಳ ಕಾರ್ಯಕ್ಷಮತೆ ಹಾಗೂ ಸ್ಪರ್ಧಾತ್ಮಕತೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಆರ್. ಎಸ್. ಶಾನಭಾಗ್ ವಿವರಿಸಿದರು. ಅರವಿಂದ್ ಬಲೇರಿ ಅವರು ಯುವ ಉದ್ಯಮಿಗಳಿಗೆ ಅಗತ್ಯವಾದ ನಾಯಕತ್ವ ಮತ್ತು ಉದ್ಯಮಶೀಲತಾ ಕೌಶಲ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ಕಲ್ಪನಾ ನಾಯಕ್, ದಿಲೀಪ್ ಭಟ್, ಸುಹಾಸ್ ಪ್ರಭು, ರಾಮ್ ಕಿಣಿ, ಆರ್. ಆರ್. ಕಾಮತ್, ಪ್ರತಾಪ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ರಮೇಶ್ ನಾಯಕ್ ಅವರು ಸ್ವಾಗತಿಸಿದರು. ಸಿಎ ಪ್ರತೀಕ್ಷಾ ಪೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿದ್ಧಾರ್ಥ ಸಿಂಕರ್ ಸಮಾರೋಪ ಭಾಷಣ ಮಾಡಿದರು.