ಹಾವೇರಿ: ಖಾಸಗಿ ಶಾಲೆಗಳ ಮಿತಿಮೀರಿದ ಡೊನೇಶನ್ ಹಾವಳಿ ತಡೆಯುವಂತೆ ಹಾಗೂ ಡೊನೇಶನ್ ವಸೂಲಿ ಮಾಡುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಕೆಯ ನೇತೃತ್ವ ವಹಿಸಿದ್ದ ಕರ್ನಾಟಕ ವಿದ್ಯಾರ್ಥಿ ವಿಕಾಸ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಕೆಲವು ವರ್ಷಗಳಿಂದ ಕೆಲ ಅನುದಾನಿತ ಹಾಗೂ ಖಾಸಗಿ ಶಾಲೆಗಳು ಡೊನೇಶನ್ ವಸೂಲಿ ಮಾಡಿ ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ಪೋಷಕರಿಗೆ, ವಿದ್ಯಾರ್ಥಿಗಳಿಗೆ ನಿರಂತರ ಅನ್ಯಾಯ ಮಾಡುತ್ತಿವೆ. ಇದರ ತಡೆಗೆ ಕೂಡಲೇ ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯ ಡೆರಾ ಕಮಿಟಿ ಸಭೆ ಕರೆದು ತಪ್ಪಿತಸ್ಥ ಶಿಕ್ಷಣ ಸಂಸ್ಥೆಗಳ ಮೇಲೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.ಡೋನೇಶನ್ ಹಾವಳಿ ಎಂಬುದು ದೊಡ್ಡ ಮಾಫಿಯಾ, ಬಡ ಪ್ರತಿಭಾವಂತ ಮಕ್ಕಳಿಗೆ ಉನ್ನತಮಟ್ಟದ ಶಿಕ್ಷಣ ಮರೀಚಿಕೆಯಾಗುತ್ತಿದೆ. ಡೊನೇಶನ್ ಹಾವಳಿ ನಿಯಂತ್ರಿಸಬೇಕಾದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಯವರೊಂದಿಗೆ ಮಿಲಾಪಿಯಾಗಿದ್ದಾರೆ ಎಂದು ಆರೋಪಿಸಿದರು.ಇನ್ನೋರ್ವ ಮುಖಂಡ ಹೊನ್ನಪ್ಪ ಮರಿಯಮ್ಮನವರ ಮಾತನಾಡಿ, ಯಾವ ಕ್ಷೇತ್ರದಲ್ಲಿಯೂ ನಡೆಯದಂತಹ ಭ್ರಷ್ಟಾಚಾರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಇದರ ಬಗ್ಗೆ ತನಿಖೆಯಾಗಬೇಕು. ವಾರದೊಳಗೆ ಡೆರಾ ಕಮಿಟಿ ಸಭೆ ಕರೆದು ದೂರುದಾರ, ಹೋರಾಟಗಾರರನ್ನು ಸಭೆಗೆ ಅಹ್ವಾನಿಸಿ ಸಮಸ್ಯೆ ಆಲಿಸಬೇಕು ಎಂದರು.ಈ ಕುರಿತು ಡಿಡಿಪಿಐ ಮೋಹನ ದಂಡಿನ, ಜಿಲ್ಲಾ ಪಂಚಾಯಿತಿ ಸಿಇಒ ದಲ್ಜಿತ್‌ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಜಗದೀಶ ಕೆರೂಡಿ, ಹರಿಹರಗೌಡ ಪಾಟೀಲ, ಸುರೇಶ ಮಲ್ಲಾಪುರ ಇದ್ದರು.