ಸಿಯುಕೆ: 16 ಸಂಶೋಧನಾ ಯೋಜನೆಗಳ ಪ್ರಗತಿ ಪರಿಶೀಲನೆ

KannadaprabhaNewsNetwork |  
Published : Oct 27, 2026, 01:30 AM IST
ಚಿತ್ರ ಶೀರ್ಷಿಕೆ - ರಿಸರ್ಚ್‌ಆಳಂದ: ಸಿಯುಕೆಯಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಶೋಧನಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಎನ್‍ಆರ್‍ಎಫ್–ಪೇರ್ ತಜ್ಞರ ಸಮಿತಿ ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಟಾನ ಪೇರ್ ಕಾರ್ಯಕ್ರಮದಡಿ ಅನುಷ್ಠಾನಗೊಳ್ಳುತ್ತಿರುವ 16 ಸಂಶೋಧನಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಟಾನ (ಎಎನ್‍ಆರ್‌ಎಫ್)–ಪೇರ್ ಕಾರ್ಯಕ್ರಮದಡಿ ಅನುಷ್ಠಾನಗೊಳ್ಳುತ್ತಿರುವ 16 ಸಂಶೋಧನಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ವಿಶ್ವವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ ಎಎನ್‍ಆರ್‌ಎಫ್–ಪೇರ್ ಕೇಂದ್ರದ ತಜ್ಞರ ಸಮಿತಿಯು ಸಿಯುಕೆ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೈಗೊಳ್ಳಲಾಗಿರುವ ಸಂಶೋಧನಾ ಯೋಜನೆಗಳ ಪ್ರಗತಿ ಪರಿಶೀಲಿಸಿತು. ಯೋಜನೆಗಳ ಪ್ರಸ್ತುತ ಸ್ಥಿತಿ, ಸಾಧಿಸಿರುವ ಪ್ರಗತಿ ಹಾಗೂ ಮುಂದಿನ ಹಂತಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಚರ್ಚಿಸಲಾಯಿತು.

ಸಂಶೋಧನಾ ಯೋಜನೆಗಳು ಕೇವಲ ಶೈಕ್ಷಣಿಕ ಅಧ್ಯಯನಕ್ಕೆ ಸೀಮಿತವಾಗದೆ, ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕು. ಸ್ವದೇಶಿ ತಂತ್ರಜ್ಞಾನಗಳ ಅಭಿವೃದ್ಧಿ, ನವೀನ ಪರಿಹಾರಗಳ ಅನ್ವೇಷಣೆ ಹಾಗೂ ರಾಷ್ಟ್ರೀಯ ಅಭಿವೃದ್ಧಿಗೆ ಪೂರಕ ಸಂಶೋಧನೆಗಳಿಗೆ ಆದ್ಯತೆ ನೀಡಬೇಕು ಎಂಬ ಆಶಯವನ್ನು ಸಭೆಯಲ್ಲಿ ಮಂಡಿಸಲಾಯಿತು.

ಸಂಶೋಧನೆಯ ಫಲಿತಾಂಶಗಳನ್ನು ಪ್ರಾಯೋಗಿಕವಾಗಿ ಬಳಕೆಗೆ ತರುವುದರ ಮಹತ್ವವನ್ನು ಪ್ರೊ. ಬಟ್ಟು ಸತ್ಯನಾರಾಯಣ ವಿವರಿಸಿದರು. ಸಂಶೋಧಕರು ತಂಡದ ಸಹಕಾರ, ಸಕ್ರಿಯ ಭಾಗವಹಿಸುವಿಕೆ, ನಾವೀನ್ಯತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಬೇಕು. ಸಂಶೋಧನೆಯಿಂದ ದೊರೆಯುವ ಫಲಿತಾಂಶಗಳು ಜನಸಾಮಾನ್ಯರ ಬದುಕಿಗೆ ಪ್ರಯೋಜನಕಾರಿಯಾಗುವಂತೆ ಅವುಗಳನ್ನು ನವೀನ ಉತ್ಪನ್ನಗಳಾಗಿ ರೂಪಿಸುವುದು ಅಗತ್ಯ. ಜತೆಗೆ, ಉತ್ಪಾದನಾ ವಲಯಕ್ಕೆ ಸಂಶೋಧನಾ ಫಲಿತಾಂಶಗಳನ್ನು ತಲುಪಿಸುವುದು, ಸ್ಟಾರ್ಟ್‍ಅಪ್‍ಗಳಿಗೆ ಉತ್ತೇಜನ ನೀಡುವುದು ಹಾಗೂ ಉದ್ಯಮಶೀಲತೆ ಬೆಳೆಸುವ ಮೂಲಕ ಸಂಶೋಧನೆಗೆ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯ ಕಲ್ಪಿಸಬೇಕು ಎಂದು ತಿಳಿಸಿದರು.

ಸರ್ಕಾರ ಮತ್ತು ಸಮಾಜವು ವಿಶ್ವವಿದ್ಯಾಲಯಗಳಿಂದ ನೈಜ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ನಿರೀಕ್ಷಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ತಮ್ಮ ಆವಿಷ್ಕಾರಗಳನ್ನು ಪ್ರಯೋಗಾಲಯಗಳಿಗೆ ಸೀಮಿತಗೊಳಿಸದೆ, ಅವುಗಳ ಪ್ರಾಯೋಗಿಕ ಅನ್ವಯಿಕೆ ಹಾಗೂ ಜನೋಪಯೋಗಿ ಸಾಧ್ಯತೆಗಳತ್ತ ಗಮನ ಹರಿಸಬೇಕು ಎಂಬ ವಿಚಾರ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಯಿತು.

ಯೋಜನಾ ನಿರ್ದೇಶಕ, ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬ್ರಹ್ಮಾನಂದಂ ಮಾನವತಿ ಮತ್ತು ಪ್ರೊ. ಸಾಮ್ರಾಟ್ ಎಲ್. ಸಬತ್ ಅವರು ಸಂಶೋಧನಾ ಯೋಜನೆಗಳ ಪ್ರಗತಿ ಪರಿಶೀಲಿಸಿ, ಮುಂದಿನ ಹಂತಗಳಲ್ಲಿ ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಾದ ಸಲಹೆಗಳನ್ನು ನೀಡಿದರು. ಸಿಯುಕೆಯ ಬೋಧಕ ಸಿಬ್ಬಂದಿ ಹಾಗೂ ವಿವಿಧ ಯೋಜನೆಗಳ ಮುಖ್ಯಸ್ಥರು ತಮ್ಮ ಯೋಜನೆಗಳ ಪ್ರಗತಿ, ಕೈಗೊಂಡಿರುವ ಕಾರ್ಯಗಳು ಮತ್ತು ಮುಂದಿನ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಪ್ರಧಾನ ಸಂಶೋಧಕ ಪ್ರೊ. ಎನ್. ಸತ್ಯನಾರಾಯಣ, ಸಹ-ಪ್ರಧಾನ ಸಂಶೋಧಕ ಪ್ರೊ. ಭರತ್ ಕುಮಾರ್, ಪ್ರಾಧ್ಯಾಪಕರಾದ ಪ್ರೊ. ಪಲ್ಲೆಪೋಗು ರಾಘವಯ್ಯ, ಪ್ರೊ. ಹನುಮೇಗೌಡ, ಪ್ರೊ. ಜನಾರ್ದನ ರೆಡ್ಡಿ, ಡಾ. ಎಸ್. ಲಿಂಗಮೂರ್ತಿ, ಡಾ. ಆರ್. ಕೃಷ್ಣ ಚೈತನ್ಯ, ಡಾ. ರಸ್ಮಿತಾ ಸಾಮಾ, ಡಾ. ಪೊನ್ನಂ ಆಂಜನೇಯಲು, ಡಾ. ಹರೀಶ್ ಹೊಳ್ಳಾ, ಡಾ. ಕವಿತಾ ಹಿರೇಮಠ, ಡಾ. ರಾಕೇಶ್ ಕುಮಾರ್, ಡಾ. ಆಂಜನೇಯಲು, ಡಾ. ಕವಿಶಂಕರ್, ಡಾ. ಅಶೋಕ್ ಪಬ್ಬತ್ತಿ, ಡಾ. ಪ್ರಶಾಂತ ಕುಮಾರ್, ಡಾ. ಪ್ರಭಂಜನ್ ಗಾಯಿ ಸೇರಿದಂತೆ ಸಂಶೋಧನಾ ಯೋಜನೆಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು