ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಕೆಎಲ್ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ ನಟಿಸಿದ ಕಲ್ಟ್ ಸಿನಿಮಾ ಪ್ರಮೋಷನ್ ಅಪಾರ ಸಿನಿಪ್ರಿಯರ ಸಮ್ಮುಖದಲ್ಲಿ ನಡೆಯಿತು. ಬೃಹತ್ ಪರದೆ ಮೇಲೆ ಕಲ್ಟ್ ಚಿತ್ರದ ಟ್ರೇಲರ್ ಹಾಗೂ ಅಯ್ಯೋ ಶಿವನೇ, ಬ್ಲಡಿ ಲವ್ ಎಂಬ ಎರಡು ಹಾಡುಗಳನ್ನು ಆಲಿಸಿದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ನಟ ಜೈದ್ ಖಾನ್ ಬೆಳಗಾವಿಗೆ ಬರುತ್ತಿದ್ದಂತೆ ಚನ್ನಮ್ಮ ಪ್ರತಿಮೆಗೆ ಗೌರವ ಸಲ್ಲಿಸಿದರು. ನಂತರ ಪುನೀತ ರಾಜಕುಮಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ನಾಯಕ ನಟ ಜೈದ್ ಖಾನ್, ಕಲ್ಟ್ ಕನ್ನಡ ಚಲನಚಿತ್ರ ಜ.23ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಹಾಗೂ ಹಾಡುಗಳು ಜನಮನ ಗೆದ್ದಿವೆ. ಕುಟುಂಬ ಸಮೇತರಾಗಿ ಚಿತ್ರವನ್ನು ನೋಡಬಹುದು. ಎಲ್ಲ ವರ್ಗದ ಜನರಿಗೆ ಚಿತ್ರ ಇಷ್ಟವಾಗಲಿದೆ. ಕನ್ನಡಿಗರು ಚಿತ್ರ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ತಂದೆ ಜಮೀರ್ ಅಹಮ್ಮದ್ ಖಾನ್ ರಾಜಕೀಯದಲ್ಲಿದ್ದು, ತಾವು ರಾಜಕೀಯಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ, ನನಗೆ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದೆ. ವೃತ್ತಿಪರ ನಟನಾಗಿದ್ದೇನೆ. ರಾಜಕೀಯಕ್ಕೆ ಬರುವ ಉದ್ದೇಶ ಇಲ್ಲ, ಅಭಿಮಾನಿಗಳು ಬಯಸುವ ಚಿತ್ರಗಳನ್ನು ಮಾಡುತ್ತೇನೆ. ಇನ್ನು ಮುಂದೆ ವರ್ಷಕ್ಕೆ ಒಂದಾದರೂ ಚಿತ್ರ ಮಾಡುವ ಉದ್ದೇಶವಿದೆ ಎಂದರು.
ಯುವ ನಾಯಕ ಅಮನ್ ಸೇಠ ಮಾತನಾಡಿ, ಜೈದ್ ಖಾನ್ ನಟಿಸಿದ ಚಿತ್ರದ ಬಗ್ಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾದ ಬಳಿಕ ಬ್ಲಾಕ್ ಬಸ್ಟರ್ ದಾಖಲೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.