ಕನ್ನಡಪ್ರಭ ವಾರ್ತೆ ಹೊಸಪೇಟೆ
ಸರ್ವ ಜನಾಂಗದ ಶಾಂತಿಯ ತೋಟದ ಸನ್ಮಾರ್ಗದವರು ನಮ್ಮ ಶರಣರು. ಅವರ ನಿತ್ಯ ಸ್ಮರಣೆಯ ಜೊತೆಗೆ ಅವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯೋಣ ಎಂದು ಸಂಡೂರಿನ ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಮಂಗಳವಾರ ನಡೆದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವವನ್ನು ದೀಪ ಬೆಳಗಿಸಿ, ಶರಣರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ಹಡಪದ ಅಪ್ಪಣ್ಣ ಸಮುದಾಯದವರಿಗೆ ಲಿಂಗತ್ವದಲ್ಲಿ ಸಿಕ್ಕ ಸಮಾನತೆಯು ಆರ್ಥಿಕವಾಗಿ ಸಿಕ್ಕಿಲ್ಲ. ಇನ್ನಾದರೂ ಸವಲತ್ತುಗಳ ಸೌಭಾಗ್ಯ ನಿಮ್ಮ ಮನೆ ಬಾಗಿಲಿಗೆ ಬರುವಂತಾಗಲಿ. ಅರ್ಥಗರ್ಭಿತ ವಚನಗಳು ಬರಿ ಓದಲಿಕ್ಕಷ್ಟೇ ಸೀಮಿತವಾಗಿರದೇ ಬದುಕಿನಲ್ಲಿಯೂ ಪ್ರವಚನಗಳ ಮಹತ್ವವನ್ನು ತಿಳಿದು ನಡೆಯೋಣ ಎಂದರು.ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ ಅವರು ಮಾತನಾಡಿ, ಅಪ್ಪಣ್ಣನವರು 200ಕ್ಕಿಂತ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಪ್ರತಿಯೊಬ್ಬರು ಗುರು, ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದು, ಸಮಾಜದ ಏಳಿಗೆಗೆ ಶ್ರಮಿಸೋಣ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಸವರಾಜ ಟಿ.ಎಚ್. ಅವರು ಉಪನ್ಯಾಸ ನೀಡಿ, ಅಪ್ಪಣ್ಣನವರು ಇಷ್ಟಲಿಂಗ ಸಾಧನೆಯಲ್ಲಿ ಉತ್ತುಂಗಕ್ಕೇರಿ ಸಾಧನೆ ಮಾಡಿದವರು. ಅಪ್ಪಣ್ಣನವರು ಬಸವಣ್ಣನವರ ಆಪ್ತ ಸಲಹೆಗಾರರಾಗಿದ್ದರು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್ ಪ್ರಾಸ್ತಾವಿಕ ಮಾತನಾಡಿ, ಶರಣಗಣದ ವಿಚಾರಧಾರೆಯಲ್ಲಿ ಬೆಳೆದು ಬಂದ ನಾವೆಲ್ಲರೂ ಬೇಧ- ಭಾವ ತೊರೆದು ಸಂತ ಶರಣರ ಸನ್ಮಾರ್ಗದಲ್ಲಿ ನಡೆಯೋಣ ಎಂದರು.
ಕಾರ್ಯಕ್ರಮಕ್ಕೂ ಮೊದಲು ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆಯು ಬಸವೇಶ್ವರ ವೃತ್ತದಿಂದ ನಗರದ ವಿವಿಧ ವೃತ್ತಗಳಲ್ಲಿ ಡೊಳ್ಳು, ವಾದ್ಯಗಳೊಂದಿಗೆ ಸಾಗಿ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಬಂದಿ ಸೇರಿತು.ಕಾರ್ಯಕ್ರಮದಲ್ಲಿ ಹಡಪದ ಸಮಾಜದ ಜಿಲ್ಲಾಧ್ಯಕ್ಷ ಎಚ್. ಮಲ್ಲಪ್ಪ, ಹೊಸಪೇಟೆಯ ತಾಲೂಕಾಧ್ಯಕ್ಷ ಎಚ್. ಬಸವರಾಜಪ್ಪ, ನಿವೃತ್ತ ಪ್ರಾಧ್ಯಾಪಕ ಮೃತ್ಯುಂಜಯ ರುಮಾಲೆ, ಮಲಪನಗುಡಿಯ ಗೌರವಾಧ್ಯಕ್ಷ ಎಚ್. ಶೇಖರಪ್ಪ, ವೀರಶೈವ ಸಮಾಜದ ಮುಖಂಡರಾದ ಗೊಗ್ಗ ಚನ್ನಬಸಪ್ಪನವರು, ಜಿಪಂ ಅಧಿಕಾರಿಗಳಾದ ಅಶೋಕ ತೋಟದ, ಶಿವಶರಣ ಸಮಾಜದ ಜನಾಂಗದವರು ಭಾಗಿಯಾಗಿದ್ದರು.
ಕೂಡ್ಲಿಗಿಯ ಪತ್ರಕರ್ತ ವೀರೇಶ ಕಣಕಲ್‌ಮಠ, ಪಂಡಿತ್ ಪುಟ್ಟರಾಜ ಗವಾಯಿಗಳ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಚಾರಿಟೇಬಲ್ ಟ್ರಸ್ಟ್ ಮರಿಯಮ್ಮನಹಳ್ಳಿಯ ಗಾಯಕರಾದ ಚಂದ್ರಕಾಂತ್, ಕೊಟ್ರೇಶ್, ದುರುಗಪ್ಪ, ದುರುಗೇಶ್ ಅವರಿಂದ ನಾಡಗೀತೆ ಮತ್ತು ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.