ಹೊಸಪೇಟೆ: ಹಂಪಿ ಉತ್ಸವದ ಅಂಗವಾಗಿ ನಡೆದ ವಸಂತ ವೈಭವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿದರು.
ಮೆರುಗು ತಂದ ಕಲಾಮೇಳ:
ಮೆರವಣಿಗೆಯಲ್ಲಿ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಮತ್ತು ಯಕ್ಷಗಾನದ ವೇಷಧಾರಿಗಳು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಜನರನ್ನು ಮಂತ್ರಮುಗ್ಧಗೊಳಿಸಿದರು. ರಾಮ, ಲಕ್ಷ್ಮಣ, ಆಂಜನೇಯ, ಹೀಗೆ ವಿವಿಧ ರೀತಿಯ ವೇಷ ಧರಿಸಿದ್ದ ಕಲಾವಿದರು, ತೊಗಲು ಗೊಂಬೆ, ಕೀಲು ಕುದುರೆ ಕುಣಿತ ಹೀಗೆ ಸಾಂಸ್ಕೃತಿಕ ಸೌಂದರ್ಯ ಸುಂದರವಾದ ಸ್ತಬ್ಧಚಿತ್ರಗಳು ಮೆರವಣಿಗೆಯ ಅಂದವನ್ನು ಇಮ್ಮಡಿಗೊಳಿಸಿತು. ಸಾಂಪ್ರದಾಯಿಕ ಮಂಗಳವಾದ್ಯಗಳಾದ ನಾದಸ್ವರ, ತಮಟೆಗಳ ಸದ್ದಿಗೆ ಕಲಾವಿದರು ಹೆಜ್ಜೆ ಹಾಕುತ್ತಾ ಸಾಗುತ್ತಿದ್ದರೆ, ಸಾರ್ವಜನಿಕರು ಮೆರವಣಿಗೆ ವಾದ್ಯಗಳ ನಾದಕ್ಕೆ ನಿಂತಲ್ಲಿಯೇ ಹೆಜ್ಜೆ ಹಾಕುತ್ತಿದ್ದರು.ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ ಸಾಂಪ್ರದಾಯಿಕ ವೇಷಭೂಷಣ ತೊಟ್ಟ ಮಹಿಳೆಯರು, ತಾಯಿ ಭುವನೇಶ್ವರಿದೇವಿಯ ಮೂರ್ತಿ ಹೊತ್ತು ಸಾಗಿದ ಗಜಲಕ್ಷ್ಮಿ ಕಲಾತಂಡಗಳೊಂದಿಗೆ ಗಾಂಭೀರ್ಯದಿಂದ ಹೊತ್ತು ಸಾಗುತ್ತಿದ್ದರೆ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಹೂವುಗಳನ್ನು ಚೆಲ್ಲಿ ಸಂಭ್ರಮಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಈ ಮೆರವಣಿಗೆಯು ಜನರ ಮೈ ರೋಮಾಂಚನಗೊಳಿಸಿತು. ’ವಸಂತ ಉತ್ಸವ’ ಮತ್ತು ಅದರ ಅಂಗವಾಗಿ ನಡೆಯುವ ವೈಭವದ ಮೆರವಣಿಗೆ ನೋಡುಗರ ಕಣ್ಣಿಗೆ ಹಬ್ಬವಿದ್ದಂತೆ ಭಾಸವಾಗುತ್ತಿತ್ತು.
ವಿಶೇಷವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ ಬಂಜಾರ ಸಂಸ್ಕೃತಿಯ ಉಡುಪು, ಕರಗ, ಡೊಳ್ಳು ಕುಣಿತ ನೋಡುಗರ ಆಕರ್ಷಿಸುವಂತಿತ್ತು.ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಞ, ಸಹಾಯಕ ಆಯುಕ್ತ ವಿವೇಕ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಗೆ ಸಾಕ್ಷಿಯಾದರು.