ಧಾರವಾಡ: ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳ ಪ್ರತಿಭೆ ಹೊರ ತರಲು ಉತ್ತಮ ವೇದಿಕೆಗಳಾಗಿವೆ ಎಂದು ವಿಧಾನ ಪರಿಷತ್ ಸದಸ್ಯರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಮೊದಲನೇ ದಿನದ ಸಾರ್ಥವಾಹ ಕಾರ್ಯಕ್ರಮದ ಉದ್ಘಾಟನೆ ನಂತರ ರಸ ಪ್ರಶ್ನೆ, ಸ್ಕಿಟ್, ಭಾಷಣ ಸ್ಪರ್ಧೆ, ಕೋಲಾಜ್ ಸ್ಪರ್ಧೆಗಳು ಜರುಗಿದವು. ಮೊದಲನೆ ದಿನದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಪುಸ್ತಕಗಳ ಮಹತ್ವ, ಬಾಲ ಕಾರ್ಮಿಕರು, ಶಿಕ್ಷಣದ ಮಹತ್ವ, ಭಾರತೀಯ ಕೃಷಿ, ಚಂದ್ರಯಾನ, ತಂತ್ರಜ್ಞಾನ ಮತ್ತು ಪರಿಸರ, ಮಹಿಳಾ ಸುರಕ್ಷಿತೆ ಕುರಿತು ಮಾತನಾಡಿದರು.
2ನೇ ದಿನ ಗುರುವಾರ ಸಾರ್ಥವಾಹ ಸಾಂಸ್ಕೃತಿಕ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಅಂತಿಮ ಸುತ್ತಿನ ರಸ ಪ್ರಶ್ನೆ, ಅಡುಗೆ ಸ್ಪರ್ಧೆ, ಚಿಕ್ಕಿ ರಂಗೋಲಿ, ತರಕಾರಿಗಳಲ್ಲಿ ಕೆತ್ತನೆ, ಡಿಜಿಟಲ್ ಪೊಸ್ಟರ್ ಮೇಕಿಂಗ್, ವಾಟರ್ ಕಲರ್ ಪೇಂಟಿಂಗ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸವ ಭರಿತವಾಗಿ ಭಾಗವಹಿಸಿದ್ದರು.ಅಡುಗೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪೌಷ್ಟಿಕಾಂಶಯುಕ್ತ ಹೊಸ ರೀತಿಯ ಖಾದ್ಯಗಳಾದ ಕೇಕ್, ಬ್ರೇಡ್ ಸ್ಯಾಂಡ ವಿಚ್, ತರಕಾರಿ, ಹಣ್ಣು, ಬೇಳೆಕಾಳು ಬಳಸಿ ಆಹಾರ ಪದಾರ್ಥ ಸಿದ್ದಪಡಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಈ ತರಹದ ಅಡುಗೆ ಸ್ಪರ್ಧೆಗಳಿಂದ ಹೊಸ ರೀತಿಯ ರುಚಿಯ ಖಾದ್ಯ ಮಾಡಲು ಪ್ರೇರಣೆ ದೊರೆಯುತ್ತದೆ ಎಂದು ಹುಬ್ಬಳ್ಳಿಯ ಜೆ.ಜೆ. ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ ಸೋನಾಲಿ ಹೇಳಿದರೆ, ಪ್ರಸ್ತುತ ಅಡುಗೆ ಮಾಡುವದು ಸೃಜನಶೀಲ ಕಲೆಯಾಗಿದೆ ಎಂದು ಮೃತ್ಯುಂಜಯ ಕಲಾ ಕಾಲೇಜಿನ ವಿದ್ಯಾರ್ಥಿನಿ ಅಲಿಯಾ ಅಭಿಪ್ರಾಯಪಟ್ಟರು.