ಧರ್ಮ ಸಂಸ್ಕಾರದಿಂದ ಮನುಕುಲಕ್ಕೆ ಸಾಂಸ್ಕೃತಿಕ ಚೈತನ್ಯ

KannadaprabhaNewsNetwork |  
Published : Mar 30, 2024, 12:57 AM ISTUpdated : Mar 30, 2024, 12:58 AM IST
546654 | Kannada Prabha

ಸಾರಾಂಶ

ಧರ್ಮ ಸಿದ್ಧಾಂತದ ಸಂಸ್ಕಾರಗಳು ಕೇವಲ ಬೋಧನೆಗೆ ಮಾತ್ರ ಸೀಮಿತವಾಗಿರಬಾರದು. ಅವು ನಿತ್ಯವೂ ಆಚರಣೆಯಲ್ಲಿ ಬಂದಾಗ ಬದುಕಿನ ಜಡತ್ವ ನಿವಾರಣೆಯಾಗುತ್ತದೆ.

ಧಾರವಾಡ:

ಧರ್ಮ ಸಿದ್ಧಾಂತದ ಸಂಸ್ಕಾರಗಳು ಕೇವಲ ಬೋಧನೆಗೆ ಮಾತ್ರ ಸೀಮಿತವಾಗಿರಬಾರದು. ಅವು ನಿತ್ಯವೂ ಆಚರಣೆಯಲ್ಲಿ ಬಂದಾಗ ಬದುಕಿನ ಜಡತ್ವ ನಿವಾರಣೆಯಾಗುತ್ತದೆ. ವಿಭಿನ್ನ ನೆಲೆಯ ಧರ್ಮ ಸಂಸ್ಕಾರದಿಂದ ಮನುಕುಲಕ್ಕೆ ಸಾಂಸ್ಕೃತಿಕ ಚೈತನ್ಯ ಪ್ರಾಪ್ತವಾಗುತ್ತದೆ ಎಂದು ಕಲಘಟಗಿ ಹನ್ನೆರಡುಮಠದ ಶ್ರೀರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶುಕ್ರವಾರ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮಹಾದಾಸೋಹಿ ಶ್ರೀಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನ ಉದ್ಘಾಟಿಸಿದ ಅವರು, ಹುಟ್ಟಿನಿಂದ ಯಾವ ವ್ಯಕ್ತಿಯೂ ಶ್ರೇಷ್ಠನಾಗಿರಲಾರ. ಆಚಾರ್ಯರು, ಶರಣರು, ಸಂತ-ಮಹಾಂತರ ಮೌಲ್ಯತುಂಬಿದ ಆದರ್ಶದ ಪಥ ಹಾಗೂ ಅವರ ಉನ್ನತ ನಡೆ-ನುಡಿಯ ಉತ್ಕೃಷ್ಟ ಸಂಸ್ಕಾರಗಳಿಂದ ಮಾನವನಿಗೆ ಶ್ರೇಷ್ಠತೆ ಪ್ರಾಪ್ತವಾಗುತ್ತದೆ ಎಂದರು.

ಉಪದೇಶಾಮೃತ ನೀಡಿದ ಹಾವೇರಿ ಜಿಲ್ಲೆ ನೆಗಳೂರು ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯರು, ಮಠಗಳು ಸಮಾಜಕ್ಕೆ ಸ್ಫೂರ್ತಿ ತುಂಬುವ ಶಕ್ತಿ ಕೇಂದ್ರಗಳು. ಅರಮನೆಗಳು ನಶಿಸಿವೆ, ಆದರೆ ಗುರುಮನೆಗಳು ಶಾಶ್ವತವಾಗಿವೆ. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ. ಈ ನಿಟ್ಟಿನಲ್ಲಿ ಕಳೆದ ಸಾವಿರ ವರ್ಷಗಳಿಂದ ಧರ್ಮ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಹೇಳಿದರು.ಯಾದವಾಡ-ಮುಳಮುತ್ತಲ ಸಿದ್ಧಾರೂಢಮಠದ ಡಾ. ಆನಂದ ಸ್ವಾಮೀಜಿ ಮಾತನಾಡಿ, ಮಠಗಳ ಸಂಪರ್ಕದಿಂದ ಲಭಿಸುವ ಅಧ್ಯಾತ್ಮದ ಅನುಸಂಧಾನವು ಬದುಕಿನ ಸಂಕೀರ್ಣತೆ, ದ್ವಂದ್ವ-ವೈರುಧ್ಯಗಳ ಬಹುಮುಖ ಒತ್ತಡವನ್ನು ನಿವಾರಿಸಿ ಮುಕ್ತತೆ ತುಂಬುತ್ತದೆ. ತನ್ಮೂಲಕ ಮನುಷ್ಯ ಮುಕ್ತಿಯ ಮೆಟ್ಟಿಲೇರಿ ಬಯಲ ಬೆಳಗನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಅಮ್ಮಿನಬಾವಿ ಶ್ರೀಮಠದ ಪ್ರಥಮ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ 11 ದಿನಗಳ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನದಲ್ಲಿ ಸರ್ವ ಸಮಾಜಗಳ ಸದ್ಭಕ್ತರು ಪಾಲ್ಗೊಂಡು ಶರಣರ ಚರಿತ್ರೆಯ ಆದರ್ಶ ಅರಿಯಬೇಕೆಂದು ಕರೆ ನೀಡಿದರು.

ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀ, ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ವಿಜಯಾನಂದ ಇಟಗಿ ಸ್ವಾಗತಿಸಿದರು. ಬಿ.ಸಿ. ಕೊಳ್ಳಿ, ಪರಮೇಶ್ವರ ಅಕ್ಕಿ, ವ್ಹಿ.ಬಿ. ಕೆಂಚನಗೌಡ್ರ, ಚಂಬಣ್ಣ ಉಂಡೋಡಿ, ಉಮೇಶ ಶಿರಕೋಳ, ರಾಮಣ್ಣ ಹುಲ್ಲೂರ, ಈಶ್ವರ ಗಡೇಕಾರ, ಈಶ್ವರ ಗಾಳಿಗೌಡರ ಇದ್ದರು. ಬಸವರಾಜ ಕುಸುಗಲ್ಲ ವಂದಿಸಿದರು. ವೀರೇಶಕುಮಾರ ಮಳಲಿ ಹಾಗೂ ಮಡಿವಾಳಯ್ಯ ಶಹಪೂರಮಠ ಭಕ್ತಿ ಗೀತೆ ಪ್ರಸ್ತುತಪಡಿಸಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!