ಬದುಕಿಗೆ ಸಂಸ್ಕೃತಿ, ಸಂಸ್ಕಾರ ಮುಖ್ಯ: ಬ್ರಹ್ಮಾನಂದ ಭಾರತಿ ಸ್ವಾಮೀಜಿ

KannadaprabhaNewsNetwork |  
Published : Feb 10, 2025, 01:47 AM IST
ಸಿದ್ದಾಪುರದ ನೆಹರೂ ಮೈದಾನದಲ್ಲಿ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಸಿದ್ದಾಪುರ ಉತ್ಸವ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂಸ್ಕೃತಿ, ಸಂಸ್ಕಾರ ಇಲ್ಲದಂಥ ಬದುಕು ಬದುಕೇ ಅಲ್ಲ ಎಂದು ಪ್ರಾಚೀನರು ಹೇಳುತ್ತಾರೆ. ಜೀವನಶೈಲಿಗೆ ಇಂಗ್ಲಿಷಿನಲ್ಲಿ ಲೈಫ್ ಸ್ಟೈಲ್ ಎಂದು ಹೇಳುತ್ತಾರೆ. ವಿದೇಶಿಗರಿಗೆ ಜೀವನ ಶೈಲಿ ಪ್ರಧಾನ. ಭಾರತೀಯರದ್ದು ಸಂಸ್ಕೃತಿ ಪ್ರಧಾನ.

ಸಿದ್ದಾಪುರ: ವಿಕೃತಿಯಿಂದ ಪ್ರಕೃತಿಯೆಡೆಗೆ, ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಮನುಷ್ಯ ಸಾಗುತ್ತ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕಿದೆ. ಸಾಹಿತ್ಯ ಸಂಗೀತ, ಕಲೆ ಯಾರಿಗೆ ಇಲ್ಲವೋ ಅವನು ಬಾಲ ಇಲ್ಲದ ಪಶು ಮಾತ್ರ ಎಂಬುದಾಗಿ ಉಪನಿಷತ್ ವಿವರಿಸುತ್ತದೆ ಎಂದು ಶಿರಳಗಿಯ ಬ್ರಹ್ಮಾನಂದ ಭಾರತಿ ಸ್ವಾಮೀಜಿ ತಿಳಿಸಿದರು.ಪಟ್ಟಣದ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಿದ್ದಾಪುರ ಉತ್ಸವ- ೨೦೨೫ ಶನಿವಾರ ಸಂಜೆ ಉದ್ಘಾಟಿಸಿ ಆಶೀರ್ವಚನ ನೀಡಿದರು.ಸಂಸ್ಕೃತಿ, ಸಂಸ್ಕಾರ ಇಲ್ಲದಂಥ ಬದುಕು ಬದುಕೇ ಅಲ್ಲ ಎಂದು ಪ್ರಾಚೀನರು ಹೇಳುತ್ತಾರೆ. ಜೀವನಶೈಲಿಗೆ ಇಂಗ್ಲಿಷಿನಲ್ಲಿ ಲೈಫ್ ಸ್ಟೈಲ್ ಎಂದು ಹೇಳುತ್ತಾರೆ. ವಿದೇಶಿಗರಿಗೆ ಜೀವನ ಶೈಲಿ ಪ್ರಧಾನ. ಭಾರತೀಯರದ್ದು ಸಂಸ್ಕೃತಿ ಪ್ರಧಾನ.

ಸಂಸ್ಕಾರವನ್ನು ಹೊಂದಿ ಬದುಕುವ ಜೀವನ ಶೈಲಿಗೆ ಸಂಸ್ಕೃತಿ ಎಂದು ಹೇಳುತ್ತೇವೆ. ದೇಶದ ಬಟ್ಟೆ ಉಡುವ ಶೈಲಿ, ಗುರುಕುಲ ಪದ್ಧತಿ, ವಿವಾಹ ಮತ್ತು ದಾಂಪತ್ಯ ಜೀವನದ ರೀತಿ ಇರಬಹುದು, ಬೆಳಗ್ಗೆಯಿಂದ ಸಂಜೆಯ ತನಕ ಮನುಷ್ಯ ಏನೇನು ಕ್ರಿಯೆಗಳನ್ನು ಮಾಡುತ್ತಾನೋ ಇವುಗಳಲ್ಲೆಲ್ಲ ಸಂಸ್ಕೃತಿ ಹಾಸು ಹೊಕ್ಕಾಗಿರುವುದು ಕಾಣಿಸುತ್ತದೆ ಎಂದರು.

ಈ ಜೀವನ ಶೈಲಿಯನ್ನು ಪ್ರಾಚೀನರು ಋಷಿಗಳು ನಮಗೆ ಏಕೆ ಕೊಟ್ಟರು ಎಂದರೆ ಆನಂದವಾಗಿ ಮನುಷ್ಯ ಬದುಕಬೇಕೆಂಬ ಕಾರಣಕ್ಕೆ. ಪ್ರಕೃತಿ ನಮಗೆ ದಾನದ ಪಾಠವನ್ನು ಹೇಳುತ್ತದೆ. ಶಾಸ್ತ್ರಗಳು ದಾನವನ್ನು ಮಾಡಿ ಎಂದು ಹೇಳುತ್ತದೆ. ಸಂಸ್ಕೃತಿ ಎಲ್ಲಿದಿಯೋ ಅದಕ್ಕೆ ಸಂಸ್ಕಾರ ಎಂದು ಹೇಳುತ್ತೇವೆ.

ಮಕ್ಕಳಿರುವಾಗಲೇ ಈ ಸಂಸ್ಕೃತಿ ಎಂಬ ಬೀಜವನ್ನು ಅವರ ಹೃದಯದಲ್ಲಿ ನೆಡಬೇಕು. ನಮ್ಮದು ಜಗತ್ತಿನ ಅತ್ಯಂತ ಪ್ರಾಚೀನವಾದ ಶ್ರೀಮಂತ ಸಂಸ್ಕೃತಿ. ಇಂಥ ಉತ್ಸವಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿರೂಪ ಕಾಣಿಸುವಂತಾಗಲಿ. ಯಾವ ಪ್ರತಿಫಲಾಪೇಕ್ಷೆಯಿಲ್ಲದ ಇಂಥ ಕಾರ್ಯಗಳು ಸಮಾಜಕ್ಕೆ ಉತ್ತಮ ಸಂದೇಶ ಕೊಡಲಿ ಎಂದು ಆಶಿಸಿದರು.ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ಸಿದ್ದಾಪುರ ಕೇವಲ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಸೀಮಿತವಾಗಿಲ್ಲ. ಇಲ್ಲಿ ಪ್ರತಿ ಸಮುದಾಯವು ಒಂದು ವಿಶೇಷವಾದ ಕಲೆಯನ್ನು, ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿದೆ. ಇಂದಿನ ದಿನಗಳಲ್ಲಿ ಪ್ರವಾಸೋದ್ಯಮದ ಕಲ್ಪನೆ ಬದಲಾಗುತ್ತಿದ್ದು, ಸಾಂಸ್ಕೃತಿಕ ಪ್ರವಾಸೋದ್ಯಮ ಮಹತ್ವದ್ದಾಗಿದೆ. ಬರುವ ದಿನಗಳಲ್ಲಿ ಸಿದ್ದಾಪುರ ಉತ್ಸವ ನಾಡಿನ ಕಲಾ ಶ್ರೀಮಂತಿಕೆಯನ್ನು ಜಗತ್ತಿನ ಎದುರು ತೆರೆದಿಡುವ ದೊಡ್ಡ ಪ್ರದರ್ಶನ ವೇದಿಕೆಯಾಗಬೇಕು ಎಂದರು.

ಶಿರಸಿಯ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಿದ್ದಾಪುರ ಉತ್ಸವ ಸಮಿತಿ ಗೌರವಾಧ್ಯಕ್ಷ ಉಪೇಂದ್ರ ಪೈ ಬಾಳೂರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷರಾದ ಸತೀಶ ಹೆಗಡೆ ಬೈಲಳ್ಳಿ, ವಿಜಯ ಪ್ರಭು ಹಾಗೂ ಉಪಾಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘಟನಾ ಪ್ರಧಾನ ಕಾರ್ಯದರ್ಶಿ ಹರೀಶ ಗೌಡರ್ ನಿರೂಪಿಸಿದರು.

ಇಂದು ನಾಗಮಾಸ್ತಿ ಕ್ಷೇತ್ರದ ಪ್ರಥಮ ವರ್ಧಂತ್ಯುತ್ಸವ

ಭಟ್ಕಳ: ಇಲ್ಲಿನ ರೈಲ್ವೆ ನಿಲ್ದಾಣದ ಸನಿಹದ ಶಕ್ತಿಕ್ಷೇತ್ರ ಎಂದೇ ಕರೆಯಲ್ಪಡುವ ನಾಗಮಾಸ್ತಿ ಕ್ಷೇತ್ರದ ಪ್ರಥಮ ವರ್ಷದ ವರ್ಧಂತ್ಯುತ್ಸವ ಫೆ. 10ರಂದು ನಡೆಯಲಿದೆ.ಬೆಳಗ್ಗೆ 5 ಗಂಟೆಗೆ ಸತ್ಯಸಾಯಿ ಸೇವಾ ಸಮಿತಿಯಿಂದ ನಗರ ಸಂಕೀರ್ತನಾ ಭಜನೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ನಾಗಮಾಸ್ತಿ ಭಜನಾ ತಂಡ ಮಣ್ಕುಳಿ ಮತ್ತು ಸುವಿಧಾ ಭಜನಾ ಮಂಡಳಿ ಮುಟ್ಟಳ್ಳಿ ಇವರಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸುವರು.

ಅಧ್ಯಕ್ಷತೆಯನ್ನು ನಾಗಮಾಸ್ತಿ ಕ್ಷೇತ್ರಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸತೀಶಕುಮಾರ ನಾಯ್ಕ, ನಾಗಮಾಸ್ತಿ ಸೇವಾ ಸಮಿತಿಯ ಅಧ್ಯಕ್ಷ ಲೋಕೇಶ ನಾಯ್ಕ ವಹಿಸಲಿದ್ದಾರೆ. ಅತಿಥಿಗಳಾಗಿ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು, ಹೊಗೆವಡ್ಡಿ ಕ್ಷೇತ್ರದ ಧರ್ಮದರ್ಶಿ ಅನಂತ ನಾಯ್ಕ, ಕೊಂಕಣ ರೈಲ್ವೆ ಹಿರಿಯ ವಿಭಾಗೀಯ ಅಭಿಯಂತರರಾದ ಆರ್. ಚಂದ್ರಣ್ಣ, ರಾಜೇಶ ಶೆಟ್ಟಿ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸವಿತಾ ಕಾಮತ್, ನಾಗಮಾಸ್ತಿ ಕ್ಷೇತ್ರಾಭಿವೃದ್ಧಿ ಮಂಡಳಿಯ ಸದಸ್ಯೆ ಗಿರಿಜಾ ದೇವಡಿಗ ಪಾಲ್ಗೊಳ್ಳಲಿದ್ದಾರೆ. ರಾತ್ರಿ 9 ಗಂಟೆಗೆ ಶ್ರೀ ಗಣೇಶ ಯಕ್ಷಗಾನ ಬೊಂಬೆಯಾಟ ಮಂಡಳಿ ಉಪ್ಪಿನಕುದ್ರು ಅವರಿಂದ ಚೂಡಾಮಣಿ ಲಂಕಾದಹನ ಗೊಂಬೆ ಆಟ ಪ್ರದರ್ಶನ ನಡೆಯಲಿದೆ ಎಂದು ದೇವಸ್ಥಾನದ ಕ್ಷೇತ್ರಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸತೀಶಕುಮಾರ ನಾಯ್ಕ ಹಾಗೂ ಸೇವಾ ಸಮಿತಿ ಅಧ್ಯಕ್ಷ ಲೋಕೇಶ ನಾಯ್ಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?
ಸಂಸ್ಕೃತಿಯ ಸಂರಕ್ಷಣೆ ಹೊಣೆ ಯುವಶಕ್ತಿ ಮೇಲಿದೆ: ಸಂಜೀವ ಚವ್ಹಾಣ