ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕದಲ್ಲಿ ಮರಗಳ ಹನನ

KannadaprabhaNewsNetwork | Updated : Nov 09 2024, 01:24 AM IST

ಸಾರಾಂಶ

ರಕ್ಷಿತಾರಣ್ಯದೊಳಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೃತ್ಯಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಇಲ್ಲಿನ ವಲಯ ಅರಣ್ಯ ವ್ಯಾಪ್ತಿಗೆ ಒಳಪಟ್ಟ, ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ಸರ್ಕಾರಿ ರಕ್ಷಿತಾರಣ್ಯದಿಂದ ವ್ಯಾಪಕವಾಗಿ ಮರಗಳ ಮಾರಣಹೋಮ ನಡೆಯುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಅರಣ್ಯ ಸಚಿವರ ಸಹಿತ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಟ್ಟ ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ರಕ್ಷಿತಾರಣ್ಯದಿಂದ ಉತ್ತಮ ಜಾತಿಯ ನೂರಾರು ಮರಗಳನ್ನು ಕಡಿದು ಅಲ್ಲೇ ತುಂಡರಿಸಿ ಸೈಜುಗಳನ್ನಾಗಿ ಮಾಡಿ ಸಾಗಾಟ ಮಾಡಿರುವುದು ಕಂಡು ಬರುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಕೃತ್ಯದ ಬಗ್ಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೌನ ತಾಳಿದ್ದಾರೆ ಎಂದು ಆರೋಪಿಸಿ ಅರಣ್ಯ ಸಂಪತ್ತು ಲೂಟಿ ಮಾಡುವ ಮರಕಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಸಚಿವರನ್ನು ಆಗ್ರಹಿಸಿದ್ದಾರೆ.

ಕೊಕ್ಕಡ- ಅರಸಿನಮಕ್ಕಿ ರಸ್ತೆ ಬದಿಯಲ್ಲಿ, ಬೃಹದಾಕಾರವಾಗಿ ಬೆಳೆದು ನಿಂತಿದ್ದ ಮರಗಳನ್ನು ಯಂತ್ರದ ಮೂಲಕ ತುಂಡರಿಸಿ, ಸೈಜುಗಳನ್ನಾಗಿ ಮಾಡಿ ಟಿಪ್ಪರ್ ಮತ್ತು ಪಿಕ್‌ಅಪ್ ಮೂಲಕ ಬಂಟ್ವಾಳ, ಮಂಗಳೂರು ಕಡೆಗೆ ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಕ್ಷಿತಾರಣ್ಯದೊಳಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೃತ್ಯಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಕಾಡು ಪ್ರಾಣಿಗಳ ಬೇಟೆಗಾರರಿಗೆ ಮತ್ತು ಮರಗಳ್ಳರಿಗೆ ವರದಾನವಾಗಿ ಪರಿಣಮಿಸಿದೆ. ಹಾಡಹಗಲಿನಲ್ಲಿ ಕಾಡು ಕೋಣ, ಕಡವೆ ಬೇಟಿಯಾಡಿದ ಕೃತ್ಯಗಳ ಬಗ್ಗೆ ಪ್ರಕರಣ ದಾಖಲಾಗಿ ತಿಂಗಳು ಆಗುತ್ತಾ ಬಂದಿದ್ದರೂ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಸರ್ಕಾರಿ ರಕ್ಷಿತಾರಣ್ಯವಾಗಲಿ, ಸ್ವಂತ ಭೂಮಿಯಾಗಲಿ ಇಲಾಖಾನುಮತಿ ಪಡೆಯದೆ ಮರ ಕಡಿದಿದ್ದರೂ ಅಪರಾಧ ಆಗುತ್ತದೆ. ಆದ ಕಾರಣ ಮರ ಕಡಿಯಲಾಗಿದೆ ಎನ್ನಲಾದ ಸ್ಥಳದ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.

Share this article