ಸಿಲಿಂಡರ್‌ ಟ್ರಬಲ್‌: ಹೋಟೆಲ್‌ನಲ್ಲಿ ಒಲೆ ಮೇಲೆ ಅಡುಗೆ ತಯಾರಿಕೆ

KannadaprabhaNewsNetwork |  
Published : Mar 16, 2026, 01:15 AM IST
15ಕೆಪಿಎಲ್21 ಕೊಪ್ಪಳ ನಗರದಲ್ಲಿ ಆರೂಢ ಹೋಟೆಲ್ ಮಾಲಿಕ ಲಿಂಗರಾಜ ಅವರೇ ಕಟ್ಟಿಗೆಯ ಒಲೆಯ ಮೇಲೆ ಅಡುಗೆ ಮಾಡುತ್ತಿರುವುದು. | Kannada Prabha

ಸಾರಾಂಶ

ವಾಣಿಜ್ಯ ಬಳಕೆಯ ಅಡುಗೆ ಅನಿಲ ಕೊಪ್ಪಳಕ್ಕೆ ಬಾರದಿರುವುದರಿಂದ ತೀವ್ರ ಸಮಸ್ಯೆಯಾಗಿದೆ.

ಕೊಪ್ಪಳ: ಇಸ್ರೇಲ್, ಇರಾನ್ ಯುದ್ಧದ ಪರಿಣಾಮ ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವದಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಸಮಸ್ಯೆಯಾಗಿದ್ದು, ಕೊಪ್ಪಳದಲ್ಲಿ ಹೋಟೆಲ್‌ನವರು ಕಟ್ಟಿಗೆ ಒಲೆ ಹೂಡಿ ಅಡುಗೆ ಮಾಡಲಾರಂಭಿಸಿದ್ದಾರೆ.

ವಾಣಿಜ್ಯ ಬಳಕೆಯ ಅಡುಗೆ ಅನಿಲ ಕೊಪ್ಪಳಕ್ಕೆ ಬಾರದಿರುವುದರಿಂದ ತೀವ್ರ ಸಮಸ್ಯೆಯಾಗಿದೆ. ಇದರಿಂದ ಹೋಟೆಲ್ ನಡೆಸುವುದು ಕಷ್ಟವಾಗಿದೆ. ಹಾಗಂತ ಕೈ ಕಟ್ಟಿಕುಳಿತುಕೊಳ್ಳದೇ ಆರೂಢ ಹೋಟೆಲ್ ಮಾಲೀಕ ಲಿಂಗರಾಜ ತಮ್ಮ ಹೋಟೆಲ್ ಹಿಂದುಗಡೆ ಬಯಲಲ್ಲಿಯೇ ಕಟ್ಟಿಗೆ ಒಲೆಹೂಡಿ, ಅಡುಗೆ ಸಿದ್ಧತೆ ಮಾಡುತ್ತಿದ್ದಾರೆ.

ತಮ್ಮ ಮೂರು ಹೋಟೆಲ್‌ಗೂ ಒಂದೇ ಸ್ಥಳದಲ್ಲಿ ಅಡುಗೆ ಸಿದ್ಧ ಮಾಡಿ, ಮೂರು ಹೋಟೆಲ್‌ಗಳಿಗೂ ಅಲ್ಲಿಂದಲೇ ಪೂರೈಕೆ ಮಾಡುತ್ತಿದ್ದಾರೆ.

ಸಿಲಿಂಡರ್ ಸಿಗುತ್ತಿಲ್ಲ. ಇದರಿಂದ ಹೋಟೆಲ್ ನಡೆಸುವುದು ತಿಳಿಯದಾಯಿತು. ಹೀಗಾಗಿ, ಕಟ್ಟಿಗೆ ಒಲೆ ಹೂಡಿದ್ದೇನೆ ಎನ್ನುತ್ತಾರೆ ಆರೂಢ ಹೋಟೆಲ್ ಮಾಲೀಕ ಲಿಂಗರಾಜ ಅವರು.

ಇದು, ಒಂದು ಹೋಟೆಲ್ ಮಾಲೀಕರ ಕತೆಯಲ್ಲ, ಜಿಲ್ಲಾದ್ಯಂತ ಈಗ ಅನೇಕ ಹೋಟೆಲ್ ಮಾಲೀಕರು ಕಟ್ಟಿಗೆಯ ಮೊರೆ ಹೋಗಿದ್ದಾರೆ. ಕೆಲವರ ಬಯಲಲ್ಲಿಯೇ ಕಟ್ಟಿಗೆಯ ಒಲೆ ಹೂಡಿ, ಅಡುಗೆ ಮಾಡಿದರೆ ಅನೇಕರು ಒಳಗಿರುವ ಒಲೆಯಲ್ಲಿಯೇ ಕಟ್ಟಿಗೆ ಬಳಕೆ ಮಾಡಿ ಅಡುಗೆ ಮಾಡುತ್ತಿದ್ದಾರೆ.

ಕಟ್ಟಿಗೆಗೆ ಬಂತು ಡಿಮಾಂಡ್: ಇರಾನ್, ಇಸ್ರೇಲ್ ಯುದ್ಧ ಹಲವಾರು ರೀತಿಯ ವ್ಯತಿರಿಕ್ತ ಪರಿಣಾಮಕ್ಕೆ ದಾರಿಯಾಗುತ್ತಿದೆ. ಕೆಲವರಿಗೆ ಅನನಕೂಲವಾದರೆ ಕೆಲವರಿಗೆ ಲಾಭವಾಗಿದೆ.

ಕಟ್ಟಿಗೆ ಅಡ್ಡೆಯಲ್ಲಿ ಕಟ್ಟಿಗೆ ಸಾಮಗ್ರಿ ಸಿದ್ಧ ಮಾಡುವಾಗ ತುಂಡಾಗುತ್ತಿದ್ದ ಅನೇಕ ಕಟ್ಟಿಗೆ ಕೇಳುವವರೇ ಇರಲಿಲ್ಲ. ಹೀಗಾಗಿ, ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದರು. ಆದರೆ, ಹೋಟೆಲ್ ಮಾಲೀಕರು ಕಟ್ಟಿಗೆಯ ಒಲೆಯ ಮೇಲೆ ಅಡುಗೆ ಮಾಡುತ್ತಿರುವುದರಿಂದ ಅಂಥ ಕಟ್ಟಿಗೆಗಳಿಗೂ ಭಾರಿ ಬೇಡಿಕೆ ಬಂದಿದೆ. ಕಟ್ಟಿಗೆ ಅಡ್ಡೆ ಮಾಲೀಕರು ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

ಮುಖ್ಯೋಪಾಧ್ಯಾಯರ ಮುಖದಲ್ಲಿ ನಗೆ: ಇಸ್ರೇಲ್, ಇರಾನ್ ದೇಶದ ನಡುವಿನ ಯುದ್ಧ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ಮುಖದ ಮೇಲೆ ನಗು ತಂದಿದೆ. ಇದು ಕೇಳಲು ಅಚ್ಚರಿಯಾದರೂ ನಿಜ.

ಮೊಟ್ಟೆ ದರ ಏರಿಕೆಯಿಂದ ಮುಖ ಸಪ್ಪೆ ಮಾಡಿಕೊಂಡಿದ್ದ ಮುಖ್ಯೋಪಾಧ್ಯಾಯರು ಈಗ ಮೊಟ್ಟೆ ದರ ಕುಸಿದಿದ್ದರಿಂದ ಖುಷಿಯಾಗಿದ್ದಾರೆ. ಮೊಟ್ಟೆಗೆ ₹6 ನೀಡುತ್ತಿದ್ದಾಗ ಸಮಸ್ಯೆಯಾಗುತ್ತಿದೆ ಎನ್ನುತ್ತಿದ್ದರು. ಆದರೆ, ಈಗ ಮೊಟ್ಟೆಯ ದರ ಚಿಲ್ಲರೆ ಮಾರುಕಟ್ಟೆಯಲ್ಲಿಯೇ ನಾಲ್ಕೈದು ರುಪಾಯಿ ಆಗಿದ್ದರಿಂದ ಹಣ ಉಳಿಯುತ್ತಿರುವುದೇ ಅವರ ಮುಖದಲ್ಲಿ ನಗೆ ಬರಲು ಕಾರಣವಾಗಿದೆ.

ಗವಿಮಠ ದಾಸೋಹಕ್ಕಿಲ್ಲ ಬಿಸಿ: ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಮಹಾದಾಸೋಹದಲ್ಲಿ ನಿತ್ಯವೂ ಹತ್ತಾರು ಸಾವಿರ ಭಕ್ತರು ಪ್ರಸಾದ ಸ್ವೀಕಾರ ಮಾಡುತ್ತಾರೆ. ಹೀಗಾಗಿ ಸಿಲಿಂಡರ್ ಬಿಸಿ ಇಲ್ಲಿಗೂ ತಟ್ಟಿದೆಯೇ ಎಂದರೆ ಇಲ್ಲ ಎನ್ನುತ್ತಾರೆ ದಾಸೋಹದ ಉಸ್ತುವಾರಿ ರಾಮನಗೌಡ ಅವರು.

ನಮ್ಮಲ್ಲಿ ಬಹುತೇಕ ಕಟ್ಟಿಗೆ ಒಲೆ ಬಳಕೆ ಮಾಡತ್ತೇವೆ. ಅದರಲ್ಲೂ ಸ್ಟೀಮ್‌ನಲ್ಲಿಯೇ ಬಹುತೇಕ ಅಡುಗೆ ಸಿದ್ಧ ಮಾಡುತ್ತೇವೆ. ಹೀಗಾಗಿ, ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ. ಹೀಗಾಗಿ, ಶ್ರೀ ಗವಿಸಿದ್ಧೇಶ್ವರ ಮಹಾದಾಸೋಹದಲ್ಲಿ ಪ್ರಸಾದ ಸಾಂಗವಾಗಿ ಸಾಗಿದೆ.

ಹೋಟೆಲ್ ಮಾಡಿ ನಾನು ಹದಿನೈದು ವರ್ಷವಾಗಿದ್ದು, ಒಮ್ಮೆಯೂ ಇಂಥ ಸಮಸ್ಯೆ ಎದುರಿಸಿಲ್ಲ. ಮನೆಗೆ ಸಿಲಿಂಡರ್ ಸಮಸ್ಯೆಯಾಗಿದ್ದನ್ನು ಕೇಳಿದ್ದೆ, ಆದರೆ, ಹೋಟೆಲ್‌ಗೆ ವಾಣಿಜ್ಯ ಬಳಕೆ ಸಿಲಿಂಡರ್ ಸಮಸ್ಯೆಯಾಗಿರಲಿಲ್ಲ. ಆದರೆ, ಇದೇ ಮೊದಲ ಬಾರಿ ಎದುರಾಗಿರುವ ಸಮಸ್ಯೆಗೆ ಹೊರಗೆ ಕಟ್ಟಿಗೆ ಒಲೆ ಹೂಡಿ ಅಡುಗೆ ಮಾಡುತ್ತಿದ್ದೇನೆ ಎಂದು ಆರೂಢ ಹೋಟೆಲ್ ಮಾಲೀಕ ಲಿಂಗರಾಜ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಪದೋಷ ನಿಯಂತ್ರಣಕ್ಕೆ ಮಾಹಿತಿ ಹಕ್ಕು ಕಾಯ್ದೆ ಸಹಕಾರಿ: ಪವನ ಗುನಗಾ
ಕೊಪ್ಪಳ: ಸಚಿವ ಸ್ಥಾನಕ್ಕಾಗಿ ಪೈಪೋಟಿ ಶುರು?