ಯುನಿಟಿ ರನ್ ಆ್ಯಂಡ್ ರೈಡ್ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಕಾರ್ಯಕ್ರಮ
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ 101ನೇ ಜನ್ಮದಿನೋತ್ಸವದ ಅಂಗವಾಗಿ ಸತ್ಯ ಸಾಯಿ ಸೇವಾ ಸಮಿತಿ ಜಿಲ್ಲಾ ಘಟಕವು ‘ಫಿಟ್ ಇಂಡಿಯಾ’ ಸಂಘಟನೆಯ ಸಹಯೋಗದೊಂದಿಗೆ ಭಾನುವಾರ ಮುಂಜಾನೆ ನಗರದಲ್ಲಿ ಹಮ್ಮಿಕೊಂಡಿದ್ದ ‘ಯುನಿಟಿ ರನ್ ಆ್ಯಂಡ್ ರೈಡ್’ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಮಾಲಾದೇವಿ ಮೈದಾನದಿಂದ ಆರಂಭಗೊಂಡ ಈ ಏಕತೆಯ ಓಟದಲ್ಲಿ ನಗರದ ಸಾವಿರಾರು ನಾಗರಿಕರು ಸಕ್ರಿಯವಾಗಿ ಪಾಲ್ಗೊಂಡು ಗಮನ ಸೆಳೆದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಎಂ. ಪದ್ಮನಾಭ ಪೈ, "ಸತ್ಯ ಸಾಯಿ ಬಾಬಾರವರ ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ " ಎಂಬ ಉದಾತ್ತ ಸಂದೇಶವನ್ನು ಜಗತ್ತಿನಾದ್ಯಂತ ಪಸರಿಸುವ ಪ್ರಯತ್ನ ಸಾಗುತ್ತಿದೆ. ದೇಶದ ಸುಮಾರು 60 ಪ್ರಮುಖ ನಗರಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಸೋಲು-ಗೆಲುವಿಗಿಂತಲೂ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಮ್ಯಾರಥಾನ್‌ನಲ್ಲಿ 3 ಕಿಮೀ, 5 ಕಿಮೀ ಹಾಗೂ 10 ಕಿಮೀ ಓಟದ ವಿಭಾಗಗಳಿದ್ದವು. ಇನ್ನು ಸೈಕ್ಲಿಂಗ್ ವಿಭಾಗದಲ್ಲಿ ಮಹಿಳೆಯರು 16 ಕಿಮೀ ಹಾಗೂ ಪುರುಷರು 22 ಕಿಮೀ ಗುರಿಯನ್ನು ಉತ್ಸಾಹದಿಂದ ತಲುಪಿದರು.
ಈ ಸಂದರ್ಭ ಸಾಯಿ ಸಂಸ್ಥೆಯ ಗೋವಾ ರಾಜ್ಯಾಧ್ಯಕ್ಷ ಮಹೇಶ ಪಾವಸ್ಕರ, ಜಿಲ್ಲಾಧ್ಯಕ್ಷ ರಾಮದಾಸ್ ಆಚಾರಿ, ರಾಜ್ಯ ಸೇವಾ ಸಂಯೋಜಕ ಪ್ರಿಯಾ ಪೈ, ಜಿಲ್ಲಾ ಸಂಯೋಜಕ ಜಿ.ಡಿ. ಮನೋಜ್ ಹಾಗೂ ಸಂಘಟನೆಯ ವಿವಿಧ ಪದಾಧಿಕಾರಿಗಳಾದ ವೆಂಕಟೇಶ ಬಡಿಗೇರ, ಸುರೇಶ್ ಶೆಟ್ಟಿ, ನಂದಕುಮಾರ ಭಟ್, ತಿಮ್ಮಯ್ಯ ಮಿರಾಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.