ತಂಬಾಕು ದರ ಕುಸಿತ ಪ್ರತಿಭಟನೆ

KannadaprabhaNewsNetwork |  
Published : Feb 06, 2026, 03:00 AM IST
59 | Kannada Prabha

ಸಾರಾಂಶ

ಮಾರುಕಟ್ಟೆಯ ಮುಖ್ಯದ್ವಾರಕ್ಕೆ ರೈತರು ಬೀಗ ಹಾಕಿದರು. ಹರಾಜು ಪ್ಲಾಟ್ ಫಾರಂಗಳಿಂದ ರೈತರು ಹೊರಬಂದು ಖರೀದಿ ಕಂಪನಿಗಳು, ತಂಬಾಕು ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಣಸೂರು

ತಂಬಾಕಿನ ದರದಲ್ಲಿ ದಿಢೀರ್ ಕುಸಿತ ಕಂಡುಬಂದ ಹಿನ್ನಲೆಯಲ್ಲಿ ಆಕ್ರೋಶಗೊಂಡ ರೈತರು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟಿಸಿದರು.

ತಾಲೂಕಿನ ಕಟ್ಟೆಮಳಲವಾಡಿಯ ಡಿ. ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ 13 ದಿನಗಳ ಕಾಲ ತಂಬಾಕ ಖರೀದಿ ಕಂಪನಿಗಳು ನಡೆಸಿದ್ದ ಮಾರುಕಟ್ಟೆ ಬಂದ್ ತೆರವುಗೊಂಡ ನಂತರದ ಮೊದಲ ದಿನವೇ ರೈತರ ಆಕ್ರೋಶದಿಂದಾಗಿ ಮಾರುಕಟ್ಟೆ ಮತ್ತೆ ಬಂದ್ ಆಯಿತು. ಗುರುವಾರ ರೈತರ ದಿಢೀರ್ ಪ್ರತಿಭಟನೆ ನಡೆಯಿತು.

ಮಾರುಕಟ್ಟೆಯ ಮುಖ್ಯದ್ವಾರಕ್ಕೆ ರೈತರು ಬೀಗ ಹಾಕಿದರು. ಹರಾಜು ಪ್ಲಾಟ್ ಫಾರಂಗಳಿಂದ ರೈತರು ಹೊರಬಂದು ಖರೀದಿ ಕಂಪನಿಗಳು, ತಂಬಾಕು ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಮಾರುಕಟ್ಟೆೆಯ ಮೂರು ಪ್ಲಾಟ್‌ ಫಾರಂಗಳ ಹರಾಜು ಅಧೀಕ್ಷಕರು ಖರೀದಿ ಕಂಪಗಳು ಮತ್ತು ರೈತರೊಂದಿಗೆ ಚರ್ಚಿಸಲು ತುರ್ತು ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ, ಅಗ್ರಹಾರ ರಾಮೇಗೌಡ, ಖರೀದಿ ಕಂಪನಿಗಳು ಅನುತ್ಪಾದಕ ತಂಬಾಕಿಗೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ವಿಧಿಸಿರುವುದನ್ನು ವಿರೋಧಿಸಿ ಜ. 24 ರಿಂದ ಫೆ. 5ರವರಗೆ ಮಾರುಕಟ್ಟೆಯಲ್ಲಿ ವಹೀವಾಟು ನಡೆಸಲಿಲ್ಲ. ಅವರ ಬೇಡಿಕೆಯನ್ನು ಕೇಂದ್ರ ಸರ್ಕಾರ ಮನ್ನಿಸಿ ಸುಂಕ ಹಿಂಪಡದಿದೆ. ಆದರೆ ಇಂದು ಖರೀದಿ ಕಂಪನಿಗಳು ಜ. 24ಕ್ಕೂ ಮುನ್ನ ಮಾರುಕಟ್ಟೆಯಲ್ಲಿದ್ದ ದರಕ್ಕಿಂತ (ಕೆ.ಜಿ.ಗೆ ರೂ.320) 40 ರೂ.ಗಳಷ್ಟು ಕಡಿಮೆ ಬೆಲೆಗೆ (ರೂ.280ಕ್ಕೆ) ಖರೀದಿಸಲು ಮುಂದಾಗಿವೆ. ಇದು ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ವಿಧಿಸಿದ್ದ ಸುಂಕ ಹಿಂಪಡೆದ ನಂತರವೂ ರೈತರ ಮೇಲೆ ಖರೀದಿ ಕಂಪನಿಗಳು ಗದಾಪ್ರಹಾರ ನಡೆಸುವುದು ಎಷ್ಟು ಸರಿ? ನಿಮಗೆ ಕರ್ನಾಟಕದ ರೈತರು ಬೆಳೆದ ತಂಬಾಕಿನ ಅಗತ್ಯವಿಲ್ಲ ಎನ್ನುವುದಾದರೆ ಹೇಳಿ ಬಿಡಿ ಮುಂದಿನ ವರ್ಷ ಬೆಳೆಯುವುದಿಲ್ಲ. ಮಂಡಳಿ ಬಿತ್ತನೆ ಬೀಜ ವಿತರಣೆ ಮಾಡುವುದನ್ನು ಈಗಲೇ ನಿಲ್ಲಿಸಲಿ ಎಂದು ಆಗ್ರಹಿಸಿದರು.

ರೈತ ಮುಖಂಡ ಅಶೋಕ್ ಮಾತನಾಡಿ, ಆಂಧ್ರ ಪ್ರದೇಶದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಬೆಳೆದಿದ್ದ 70 ರಿಂದ 80 ಮಿಲಿಯನ್ ಕೆಜಿ ತಂಬಾಕನ್ನು ಖರೀದಿಸುವ ಕಂಪನಿಗಳು ಮತ್ತು ಅದಕ್ಕೆ ಪ್ರೋತ್ಸಾಹ ನೀಡುವ ತಂಬಾಕು ಮಂಡಳಿ ಕರ್ನಾಟಕದ ರೈತರಿಗೆ ಮಾತ್ರ ಇಲ್ಲಸಲ್ಲದ ಕಾರಣ ಹೇಳುತ್ತಿರುವುದು ಖಂಡನೀಯ. ಮಾರುಕಟ್ಟೆ ಬಂದ್ ಆಗುವ ವೇಳೆಯಲ್ಲಿದ್ದ ದರವನ್ನೇ ಈಗಲೂ ಮುಂದುವರಸಬೇಕು ಎಂದು ಅವರು ಒತ್ತಾಯಿಸಿದರು.

ನಂಜುಂಡೇಗೌಡ ಮಾತನಾಡಿ, ಖರೀದಿ ಕಂಪನಿಗಳು ಇದ್ದಕ್ಕಿದ್ದಂತೆ ವಹೀವಾಟು ನಿಲ್ಲಿಸಿದರೂ 13 ದಿನಗಳ ಕಾಲ ರೈತರು ತಕರಾರು ತೆಗೆಯಲಿಲ್ಲ. ಆದರೆ ಈಗ ಸುಂಕದ ಸಮಸ್ಯೆ ಇಲ್ಲದಿದ್ದರೂ 40 ರೂ.ಗಳ ದರ ಕುಸಿತ ನ್ಯಾಯಯುತವೇ ಎಂದು ಮಂಡಳಿ ಅಧಿಕಾರಿಗಳು ಆಲೋಚಿಸಲಿ. ರೈತರಿಗೆ ನೆರವಾಗುವುದು ಮಂಡಳಿಯ ಕರ್ತವ್ಯವಾಗಿದೆ ಎಂದರು.

ಹರಾಜು ಅಧೀಕ್ಷಕ ಸಿದ್ದರಾಜು, ಇಂದು ಕೂಡ 15 ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿವೆ. ಐಟಿಸಿ ಮತ್ತು ಜಿಪಿಐ ಕಂಪನಿಗಳು ಖರೀದಿಸುತ್ತಿವೆ. ದರ ಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ. ತಂಬಾಕು ಮಾರಲು ವಿರೋಧಿಸಿ ರೈತರು ಮಾರುಕಟ್ಟೆಯಿಂದ ಹೊರ ಬಂದಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಸಭೆಯಲ್ಲಿದ್ದ ಐಟಿಸಿ ಕಂಪನಿಯ ವೇಣುಪ್ರವೀಣ್, ಜಿಪಿಐ ಕಂಪನಿಯ ವಂಶಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಆದರೆ ಸಮಸ್ಯಗೆ ಪರಿಹಾರ ಸಿಗಲಿಲ್ಲ. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ದೇವರಾಜು, ಶ್ರೀಧರ್, ಬಿಳಿಗೆರೆ ಪ್ರಭಾಕರ್, ಸತೀಶ್, ಸ್ವಾಮಿಗೌಡ, ಹರಾಜು ಅಧೀಕ್ಷಕ ಸಿ.ಆರ್. ಮೀನ, ಪ್ರಭಾಕರ್, ಎಸ್‌ಐ ರಾಜು, ಎಎಸ್‌ಐ ಮಹೇಶ್ ಮತ್ತು ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡಾನೆ ದಾಳಿಗೆ ಬಹಿರ್ದೆಸೆಗೆ ತೆರಳಿದ್ದ ರೈತ ಸಾವು
ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ಲೋಕಾ ದಾಳಿ