ಬ್ಯಾಡಗಿ: ರಾಜ್ಯದ ಇತಿಹಾಸದಲ್ಲಿ ಸಮಾಜವಾದಿ, ಸುಧಾರಣಾವಾದಿ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಪ್ರಸಿದ್ಧಿ ಪಡೆದಿದ್ದರು ಎಂದು ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯಪಟ್ಟರು.
ಬುಧವಾರ ತಾಲೂಕಾಡಳಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉಳುವವನೇ ಹೊಲದೊಡೆಯ ಎಂಬ ಘೋಷಣೆಯನ್ನು ಸಾಕಾರಗೊಳಿಸುವ ಮೂಲಕ ರಾಜ್ಯಾದ್ಯಂತ ವ್ಯಾಪಕವಾಗಿ ಭೂಸುಧಾರಣೆಗಳನ್ನು ಜಾರಿಗೆ ತಂದ ಇವರು ಅತ್ಯಂತ ಯಶಸ್ವಿಯಾಗಿ ಭೂಮಿಯನ್ನು ಮರುಹಂಚಿಕೆ ಮಾಡಲು ಅನುಕೂಲವಾಯಿತು ಎಂದರು.
ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಮಾತನಾಡಿ, ದೇವರಾಜು ಅರಸು ಅವರು ಹಿಂದುಳಿದ ವರ್ಗದ ಆಯೋಗ, ಭೂಸುಧಾರಣೆ ಕಾಯಿದೆ ಜಾರಿಗೆ ತಂದರು. ತಮಗೆ ದೊರಕಿದ ರಾಜಕೀಯ ಪರಮಾಧಿಕಾರವನ್ನು ತಳಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು ಎಂದರು.ಡಿ.ಬಿ. ಕುಸಗೂರ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಟಿಇಒ ಕೆ.ಎಂ. ಮಲ್ಲಿಕಾರ್ಜುನ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಸಿ. ಪ್ರಸಾದಿಮಠ ಇತರರು ಪಾಲ್ಗೊಂಡಿದ್ದರು.ಶಾಸಕರ ಕಚೇರಿಯಲ್ಲಿ ಅರಸು ಜಯಂತಿ ಆಚರಣೆ
ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಬುಧವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ ಮಾತನಾಡಿ, ಆ ದಿನಗಳಲ್ಲಿಯೇ ಆಧುನಿಕ ಭಾರತದ ಕನಸು ಕಂಡಿದ್ದ ರಾಜೀವ್ ಗಾಂಧಿ ಅವರು ಯುವ ಸಮೂಹಕ್ಕೆ ಶಕ್ತಿ ತುಂಬಿದರು. ಇಡೀ ಪ್ರಪಂಚದಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕಿದೆ. ಹಿಂದುಳಿದ ವರ್ಗಗಳ ಕಲ್ಯಾಣದ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾದ ಡಿ. ದೇವರಾಜ ಅರಸು ಅವರು ನಾಡು ಕಂಡ ಧೀಮಂತ ನೇತಾರ ಎಂದು ಬಣ್ಣಿಸಿದರು.ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ ಜಮಾದಾರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ತಾಪಂ ಕೆಡಿಪಿ ಮುಖಂಡರಾದ ಭರಮಣ್ಣ ಶಿವೂರ, ಈರಣ್ಣ ಬೈಲವಾಳ, ರವಿ ದೇಶಪಾಂಡೆ, ಶಿವು ಭದ್ರಾವತಿ, ಅಶೋಕ ಹಲಸೂರ, ಮಾಲತೇಶ ಕಾಳೇರ ಇತರರು ಇದ್ದರು.