ಚಂದ್ರು ಕೊಂಚಿಗೇರಿ
ಬರದ ನಡುವೆ ಬಿರು ಬಿಸಿಲು ಹಾಗೂ ಹಸಿರು ಹುಲ್ಲು ಇಲ್ಲದೇ ಹೈನುಗಾರಿಕೆ ಕ್ಷೀಣಸಬೇಕಿತ್ತು. ಆದರೆ ಬರದಲ್ಲಿಯೂ ಹಾಲಿನ ಉತ್ಪಾದನೆ ಭರಪೂರ ಹೆಚ್ಚಳವಾಗಿದೆ.
ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದ ಅಡಿ ಹೂವಿನಹಡಗಲಿ ಉಪ ಕಚೇರಿಯ ವ್ಯಾಪ್ತಿಯಲ್ಲಿ 72 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಇದರಲ್ಲಿ 29 ಮಹಿಳಾ ಸಂಘ, 43 ಸಾಮಾನ್ಯ ಸಂಘಗಳಿವೆ, 4100 ಸಕ್ರಿಯ ಸದಸ್ಯರಿಂದ ಪ್ರತಿ ನಿತ್ಯ 27,500 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಈ ಹಿಂದೆ ಇದೇ ಸಂದರ್ಭದಲ್ಲಿ 26,000 ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಬರದಲ್ಲಿಯೂ ಪ್ರತಿ ದಿನ 1500 ಲೀಟರ್ ಹಾಲಿನ ಉತ್ಪಾದನೆ ಹೆಚ್ಚಳವಾಗಿದೆ. ತಾಲೂಕಿನಲ್ಲಿ ಒಟ್ಟು 8 ಹಾಲು ಶೀತಲೀಕರಣ ಕೇಂದ್ರಗಳಿವೆ.ರೈತರು ಕೇವಲ ಕೃಷಿಯಿಂದ ಅವಲಂಬಿತರಾಗದೇ ಜೀವನಕ್ಕಾಗಿ ಹಸು ಸಾಕಾಣಿಕೆ ಮಾಡಿಕೊಂಡಿದ್ದಾರೆ. ಹಾಲು ಉತ್ಪಾದಕರಿಗೆ ಸರ್ಕಾರ ನೀಡುವ ಪ್ರೋತ್ಸಾಹ ಧನವೂ ಸಹಕಾರಿಯಾಗಿದೆ. ಕೃಷಿ ಕೈ ಕೊಟ್ಟರೂ ಹೈನುಗಾರಿಕೆ ಕೈ ಬಿಡಲ್ಲ ಎಂದು ನಂಬಿಕೊಂಡಿರುವ ರೈತರು, ಕೃಷಿ ಭೂಮಿಗೆ ಅಗತ್ಯವಿರುವ ಸಗಣಿ ಗೊಬ್ಬರ ಬಳಕೆ ಮಾಡಿ ಭೂಮಿಯನ್ನು ಫಲವತ್ತು ಮಾಡಿಕೊಳ್ಳುತ್ತಿದ್ದಾರೆ.
8 ತಿಂಗಳು ಪ್ರೋತ್ಸಾಹ ಧನ ಬಾಕಿ: ಹಾಲು ಉತ್ಪಾದಕರು ಸಹಕಾರ ಸಂಘಕ್ಕೆ ನೀಡುವ ಪ್ರತಿ ಲೀಟರ್ ಗುಣ ಮಟ್ಟದ ಹಾಲಿಗೆ ಸರ್ಕಾರ ನೀಡುವ ₹5 ಪ್ರೋತ್ಸಾಹ ಧನ ಕಳೆದ 8 ತಿಂಗಳಿನಿಂದ ಬಾಕಿ ಉಳಿದುಕೊಂಡಿದೆ. ಸರ್ಕಾರ ಈವರೆಗೂ ಆ ಹಣ ಬಿಡುಗಡೆ ಮಾಡಿಲ್ಲ. ಪ್ರತಿ ತಿಂಗಳ ತಾಲೂಕಿನ ಹಾಲು ಉತ್ಪಾದಕರಿಗೆ ಅಂದಾಜು ₹41 ಲಕ್ಷ ಪ್ರೋತ್ಸಾಹ ಧನ ನೀಡಬೇಕಿದೆ.
ಹಾಲು ಹಾಕುವ ರೈತರಿಗೆ ಉಚಿತ ಮೇವಿನ ಬೀಜ, ಜಾನುವಾರುಗಳಿಗೆ ವಿಮಾ ಸೌಲಭ್ಯ, ಸಂಘದ ಸದಸ್ಯ ಅಕಾಲಿಕ ಮರಣ ಹೊಂದಿದರೆ, ಆ ಕುಟುಂಬಕ್ಕೆ ₹20 ಸಾವಿರ ಧನಸಹಾಯ ನೀಡಲಾಗುತ್ತಿದೆ. ಬರಗಾಲದಲ್ಲಿಯೂ 27,500 ಲೀ. ಹಾಲು ಸಂಗ್ರಹವಾಗುತ್ತಿದೆ ಎಂದು ಹಾಲು ಉತ್ಪಾದಕರ ಒಕ್ಕೂಟದ ಹೂವಿನಹಡಗಲಿ ವಿಸ್ತಣಾಧಿಕಾರಿ ಎಂ. ಗುರುಬಸವರಾಜ ಹೇಳುತ್ತಾರೆ.