ಗೋಪಾಲ್ ಯಡಗೆರೆ
ರೈತರ ಬೇಡಿಕೆಯಂತೆ ದಾವಣಗೆರೆಯಲ್ಲಿ ಅತ್ಯಾಧುನಿಕ ಮೆಗಾ ಡೇರಿ ನಿರ್ಮಿಸಬೇಕೆಂಬ ಶಿಮುಲ್ ಕನಸು ಹತ್ತಿರವಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭದ ನಿರೀಕ್ಷೆಯಲ್ಲಿದೆ.
ದಾವಣಗೆರೆ ಹೊರ ವಲಯದ ಎಚ್.ಕಲ್ಪನಹಳ್ಳಿಯಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ನಿರ್ಮಾಣಕ್ಕೆ ಶಿಮುಲ್ ಆಡಳಿತ ಮಂಡಳಿ ನಿರ್ಧರಿಸಿದೆ.ಒಟ್ಟು 280 ಕೋಟಿ ರು. ವೆಚ್ಚದ ಅತ್ಯಾಧುನಿಕ ಡೇರಿ ಇದ್ದಾಗಿದ್ದು, ಒಕ್ಕೂಟದಿಂದ 84 ಕೋಟಿ ರು. ಹಾಗೂ ಎನ್‌ಡಿಡಿಬಿಯಿಂದ 196 ಕೋಟಿ ರು. ಅನುದಾನ ಒದಗಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭಿಸುವ ಉದ್ದೇಶದಿಂದ ಒಕ್ಕೂಟವು ತನ್ನ ಪಾಲಿನ 84 ಕೋಟಿ ರು. ಮೊತ್ತದಲ್ಲಿ ಈಗಾಗಲೇ ಮುಂಗಡವಾಗಿ 34 ಕೋಟಿ ರು. ಹಣವನ್ನು ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ.
ಒಕ್ಕೂಟವು ನಿರಂತರವಾಗಿ ಲಾಭದಲ್ಲಿರುವುದರಿಂದ ಮೆಗಾ ಡೇರಿ ನಿರ್ಮಾಣದ ಜೊತೆಯಲ್ಲೇ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಲವು ಯೋಜನೆಗಳನ್ನು ಒಟ್ಟೊಟ್ಟಿಗೆ ಜಾರಿಗೊಳಿಸಲಾಗುತ್ತಿದೆ. ರೈತರಿಗೆ ಹೆಚ್ಚು ಉತ್ತೇಜನ ನೀಡಿ ಹಾಲಿನ ಉತ್ಪಾದನೆಯನ್ನು ಹೆಚ್ಚಳ ಮಾಡುವುದರ ಜತೆಗೆ ಹಾಲಿನ ಮಾರಾಟ, ಹಾಲಿನ ವಿವಿಧ ಉತ್ಪನ್ನಗಳ ತಯಾರಿಕೆ, ಮಾರಾಟದ ಜಾಲವನ್ನು ವಿಸ್ತರಿಸುವುದಕ್ಕೂ ನಿರ್ಧರಿಸಲಾಗಿದೆ. ಕೆಲ ಯೋಜನೆಗಳಿಗೆ ಈಗಾಗಲೆ ಟೆಂಡರ್ ನೀಡಿದರೆ, ಇನ್ನೂ ಕೆಲ ಯೋಜನೆಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮೆಗಾ ಡೇರಿ ಹೊರತಾಗಿ ಉಳಿದೆಲ್ಲಾ ಯೋಜನೆಗಳ ಕಾಮಗಾರಿಗೆ ಒಂದು ವರ್ಷದ ಕಾಲಮಿತಿ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ದಾಖಲೆಯ 11.39 ಕೋಟಿ ರು. ಲಾಭಶಿವಮೊಗ್ಗ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ ದಾಖಲೆಯ 11.39 ಕೋಟಿ ರು. ಲಾಭ ಗಳಿಸಿದೆ. ಮೂರೂವರೆ ದಶಕಗಳ ಇತಿಹಾಸ ಇರುವ ಒಕ್ಕೂಟವು 2010-11ರಲ್ಲಿ 33.25 ಲಕ್ಷ ರು. ಮಾತ್ರ ಲಾಭಗಳಿಸಿತ್ತು. ಅಲ್ಲಿಂದ ಹಂತ ಹಂತವಾಗಿ ಬೆಳೆದು 2020-21ರಲ್ಲಿ ಅತಿಹೆಚ್ಚು 7.92 ಕೋಟಿ ರು. ಲಾಭ ಗಳಿಸಿತ್ತು. ಇದಾದ ಬಳಿಕ 2024-25ರಲ್ಲಿಯೇ (11.39 ಕೋಟಿ ರು.) ಅತಿ ಹೆಚ್ಚು ಲಾಭ ಗಳಿಸಿದೆ.
---1987ರಲ್ಲಿ ಪ್ರಾರಂಭಗೊಂಡ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ 3 ಜಿಲ್ಲೆಗಳನ್ನೊಳಗೊಂಡು 1353 ಕಾರ್ಯನಿರತ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಇದರಲ್ಲಿ 455 ಮಹಿಳಾ ಸಹಕಾರ ಸಂಘಗಳಿವೆ. ಒಟ್ಟು 1,96,584 ಸದಸ್ಯರ ಸಂಖ್ಯೆ ಇದ್ದು, 88406 ಸದಸ್ಯರು ಪ್ರತಿನಿತ್ಯ ಹಾಲು ಉತ್ಪಾದನೆ ಪೂರೈಕೆ ಮಾಡುತ್ತಿದ್ದಾರೆ. ಪ್ರತಿ ದಿನ 7,61,501 ಲಕ್ಷ ಲೀಟರ್ ಹಾಲು ಶೇಖರಣೆ ಆಗುತ್ತಿದ್ದು, ಇದರಲ್ಲಿ 2,86,886 ಲಕ್ಷ ಲೀಟರ್ ಮಾರಾಟವಾಗುತ್ತಿದೆ. 78265 ಲೀಟರ್ ಮೊಸರು, 203 ಕೆ.ಜಿ. ಪೇಡ, 1262 ಲೀಟರ್ ತುಪ್ಪ, 3154 ಲೀಟರ್ ನಂದಿನಿ ಮಜ್ಜಿಗೆ ಪ್ರತಿ ನಿತ್ಯ ಮಾರಾಟವಾಗುತ್ತಿದೆ.
ಎಸ್.ಬಿ.ಶೇಖರ್ ಶಿಮುಲ್ ವ್ಯವಸ್ಥಾಪಕ ನಿರ್ದೇಶಕ---
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಶಿಮುಲ್)ದಲ್ಲಿ ನಿತ್ಯ ಲಕ್ಷಾಂತರ ಲೀಟರ್ ಉತ್ತಮ ಗುಣಮಟ್ಟದ ಹಾಲಿನ ಶೇಖರಣೆಗೆ ನರವಾಗುತ್ತಿರುವ ಹಾಲು ಉತ್ಪಾದಕ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶಿಮುಲ್‌ನಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇವೆಲ್ಲವೂ ರೈತರಿಗೆ ಪೂರಕವಾಗಿದ್ದು, ಇವುಗಳಿಂದ ಮುಂದಿನ ದಿನಗಳಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ.-ಎಚ್.ಎನ್.ವಿದ್ಯಾಧರ, ಶಿಮುಲ್ ಅಧ್ಯಕ್ಷ.
--ಒಕ್ಕೂಟದಿಂದ ಹಮ್ಮಿಕೊಂಡಿರುವ ಯೋಜನೆಗಳು
1. ದಾವಣಗೆರೆ ಜಿಲ್ಲೆಯ ಎಚ್. ಕಲ್ಪನಹಳ್ಳಿಯಲ್ಲಿ ದಿನವಹಿ 5 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ 280 ಕೋಟಿ ರು. ವೆಚ್ಚದಲ್ಲಿ ಎನ್.ಡಿ.ಡಿ.ಬಿ. ವತಿಯಿಂದ ಟರ್ನ್ ಕೀ ಆಧಾರದಲ್ಲಿ ಘಟಕ ನಿರ್ಮಿಸಲು ಯೋಜಿಸಲಾಗಿದೆ.2. ಶಿವಮೊಗ್ಗ ಡೇರಿಯಲ್ಲಿ ಪ್ರತ್ಯೇಕವಾಗಿ ಸಿಹಿ ಉತ್ಪನ್ನಗಳ ಉತ್ಪಾದನಾ ಘಟಕವನ್ನು 22.00 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.
3. ಚಿತ್ರದುರ್ಗ ಹಾಗೂ ಹೊಸದುರ್ಗದಲ್ಲಿ ಅನುಕ್ರಮವಾಗಿ ದಿನವಹಿ ತಲಾ 1.00 ಲಕ್ಷ ಲೀ. ಸಾಮರ್ಥ್ಯದ ಶೀತಲೀಕರಣ ಕೇಂದ್ರಗಳ ಕಾಮಗಾರಿಗಳನ್ನು ಕರ್ನಾಟಕ ಗಣಿ ಅಭಿವೃದ್ಧಿ ನಿಗಮದ 18 ಕೋಟಿ ರು. ಅನುದಾನದೊಂದಿಗೆ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ.4. ಶಿವಮೊಗ್ಗ ಡೇರಿಯ ಆವರಣದಲ್ಲಿ 70 ಲಕ್ಷ ರು. ವೆಚ್ಚದಲ್ಲಿ 100 ಮೆ.ಟನ್ ಸಾಮರ್ಥ್ಯದ ಗೋಧಾಮು ನಿರ್ಮಾಣ.
5. ಚಿತ್ರದುರ್ಗ ಶೀತಲೀಕರಣ ಕೇಂದ್ರದ ಆವರಣದಲ್ಲಿ 25 ಲಕ್ಷ ರು.ವೆಚ್ಚದಲ್ಲಿ 60 ಮೆ.ಟನ್ ಸಾಮರ್ಥ್ಯದ Weigh bridge ಅಳವಡಿಕೆ.6. ಶಿವಮೊಗ್ಗ ಕೇಂದ್ರ ಡೇರಿ ಆವರಣದಲ್ಲಿನ ಹಳೆಯ ಶೇ.ಮ.ತಾಂ ಕಟ್ಟದ ಮಹಡಿಯಲ್ಲಿ 70 ಲಕ್ಷ ರು.ಗಳ ವೆಚ್ಚದಲ್ಲಿ ತರಭೇತಿ ಸಭಾಂಗಣ ನಿರ್ಮಾಣ.
7. ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಪುರಸಭೆ, ನಗರಸಭೆ, ಬಸ್‌ನಿಲ್ದಾಣ, ಸಾರ್ವಜನಿಕ ಆಸ್ಪತ್ರೆಗಳಲ್ಲಿ 25 ಸಂಖ್ಯೆ ಮಿಲ್ಕ್ ಪಾರ್ಲರ್‌ಗಳ ನಿರ್ಮಾಣ.8. ಶುದ್ಧ ಹಾಲು ಉತ್ಪಾದನೆಯಡಿ 352 ಲಕ್ಷ ರು. ವೆಚ್ಚದಲ್ಲಿ 20 ಸಂಖ್ಯೆ ಬಿ.ಎಂ.ಸಿ.ಗಳ ಅಳವಡಿಕೆ.
9. 133 ಲಕ್ಷ ರು. ವೆಚ್ಚದಲ್ಲಿ 70 ಸಂಖ್ಯೆ AMCUಗಳ ಅಳವಡಿಕೆ.10. ಸಾಗರದಲ್ಲಿ 199 ಲಕ್ಷ ರು.ಗಳ ವೆಚ್ಚದಲ್ಲಿ ನಂದಿನಿ ಮಳಿಗೆ, ಉಗ್ರಾಣ, ಕಚೇರಿ ಕಟ್ಟಡ ಮತ್ತು ರೈತರ ತರಭೇತಿ ಸಭಾಂಗಣ ನಿರ್ಮಾಣ.
11. ತಡಗಣಿ ಶೀತಲೀಕರಣ ಕೇಂದ್ರದ ಆವರಣದಲ್ಲಿ 210 ಲಕ್ಷ ರು.ಗಳ ವೆಚ್ಚದಲ್ಲಿ ಕಚೇರಿ ಕಟ್ಟಡ, ಉಗ್ರಾಣ ಮತ್ತು ರೈತರ ತರಭೇತಿ ಸಭಾಂಗಣ.12. ಹೊನ್ನಾಳಿ ಶೀತಲೀಕರಣ ಕೇಂದ್ರದ ಆವರಣದಲ್ಲಿ 30 ಲಕ್ಷ ರು. ವೆಚ್ಚದಲ್ಲಿ ಕಚೇರಿ ಕಟ್ಟಡ ನಿರ್ಮಾಣ.