ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಲು ಸರ್ಕಾರ ಕೂಡಲೇ ಕ್ರಮ ವಹಿಸಬೇಕು. ತಿಂಗೊಳಗೆ ಈ ಕಾರ್ಯ ನಡೆಯದಿದ್ದರೆ ರಾಜ್ಯದೆಲ್ಲೆಡೆ ಪ್ರಬಲ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ)ಯ ರಾಜ್ಯ ಸಂಚಾಲಕ ಸೋಮಶೇಖರ್ ಎಚ್ಚರಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ 8,510 ಎಕರೆ ಡಿಸಿ ಮನ್ನಾ ಭೂಮಿಯಲ್ಲಿ 7,366 ಎಕರೆ ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ. ಉಳಿದ 1,144 ಎಕರೆ ಭೂಮಿಯಲ್ಲಿ 977 ಎಕರೆ ಜಮೀನು ಈಗಾಗಲೇ ದಲಿತೇತರರಿಂದ ಅತಿಕ್ರಮಣವಾಗಿದೆ. ಸದ್ಯ 190 ಎಕರೆ ಜಮೀನು ಹಂಚಿಕೆಗೆ ಲಭ್ಯವಿದ್ದು, ಅದಕ್ಕೂ ಮೀನ ಮೇಷ ಎಣಿಸಲಾಗುತ್ತಿದೆ. ಇದು ಜಿಲ್ಲಾಡಳಿತ ಹಾಗೂ ಸರ್ಕಾರದ ದಲಿತ ವಿರೋಧಿ ನೀತಿ ಎಂದು ಆಕ್ಷೇಪಿಸಿದರು.
ಡಿಸಿ ಮನ್ನಾ ಭೂಮಿಯನ್ನು ಮಂಜೂರು ಮಾಡುವಂತೆ ಜಿಲ್ಲೆಯ ದಲಿತ ಸಂಘಟನೆಗಳು 2016 ಹಾಗೂ 2017ರಲ್ಲಿ ದೊಡ್ಡ ಪ್ರತಿಭಟನೆ ನಡೆಸಿದ ಪರಿಣಾಮ ಆಗಿನ ಜಿಲ್ಲಾಧಿಕಾರಿ 2017ರಲ್ಲಿ ವಿಶೇಷ ಭೂ ಮಂಜೂರಾತಿ ನಿಯಮ (ಡ್ರಾಫ್ಟ್ ರೂಲ್ಸ್) ಸಿದ್ಧಪಡಿಸಿ ಸರ್ಕಾರಕ್ಕೆ ಅನುಮೋದನೆಗೆ ಕಳಿಸಿದ್ದಾರೆ. ಇದಾಗಿ 9 ವರ್ಷ ಕಳೆದರೂ ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದರು.ದಲಿತ ಸಮುದಾಯಗಳಿಗೆ ಮೀಸಲಾಗಿರುವ ಈ ಭೂಮಿಯನ್ನು ಹಂಚಿಕೆ ಮಾಡುವಲ್ಲಿ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಕಂದಾಯ ಸಚಿವರು, ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಹೊಣೆಗಾರಿಕೆಯಿದ್ದು, ಅವರು ಈ ಬಗ್ಗೆ ಕ್ರಮ ತಕ್ಷಣ ಕ್ರಮ ವಹಿಸಬೇಕು ಎಂದು ಸೋಮಶೇಖರ್ ಆಗ್ರಹಿಸಿದರು.
ಶ್ರೀಧರ್ ಕಳಿವೀರ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಯನ್ನು ತಿಂಗಳೊಳಗೆರೀಡೇರಿಸಬೇಕು. ಇಲ್ಲವೇ ಸಿಎಂ, ಡಿಸಿಎಂ, ಕಂದಾಯ, ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಎಲ್ಲ ಒತ್ತುವರಿ ತೆರವು ಮಾಡಿ: ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿ ಭಾರೀ ಪ್ರಮಾಣದಲ್ಲಿ ಅತಿಕ್ರಮಣವಾಗಿದ್ದು, ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ, ಎಸ್‌ಸಿ, ಎಸ್‌ಟಿಗಳಿಗೆ ಮೋಸ ಮಾಡಿದರೆ ದಲಿತ ದೌರ್ಜನ್ಯ ಕಾನೂನಿನಡಿ ಪ್ರಕರಣ ದಾಖಲಿಸಬೇಕು. ಒತ್ತುವರಿ ಆಗಿರುವ ಎಲ್ಲ ಡಿಸಿ ಭೂಮಿಯನ್ನು ತೆರವು ಮಾಡಿ ಜಿಲ್ಲಾಧಿಕಾರಿ ಮರು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.