- ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಸೋಮವಾರ ನಡೆದ ಮದುವೆ
- ಟ್ರ್ಯಾಕ್ಟರ್‌ನಿಂದ ಬಿತ್ತುವ ಕೂರಿಗೆ ನೀಡಿ ಕನ್ಯಾದಾನ- ಮಾದರಿ ಕಾರ್ಯ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಹೊಲದಲ್ಲಿ ದುಡಿಯುವ ರೈತ ವರನಿಗೆ ಕನ್ಯಾ ನೀಡುವುದೇ ಅಪರೂಪ. ರೈತ ಎಂದರೆ ಸಾಕು ಮಗಳು ಕೊಡಲು ಮೂಗು ಮುರಿಯುತ್ತಾರೆ. ಆದರೆ, ಇಲ್ಲೊಬ್ಬರು ರೈತನಿಗೆ ಕನ್ಯಾದಾನ ಮಾಡಿದ್ದೂ ಅಲ್ಲದೆ, ರೈತರೇ ದೇಶದ ಹೆಮ್ಮೆ ಎನ್ನುವಂತೆ ಟ್ರ್ಯಾಕ್ಟರ್‌ನಿಂದ ಬಿತ್ತುವ ಕೂರಿಗೆಯನ್ನು ದಕ್ಷಿಣೆಯಾಗಿ ನೀಡಿ ಮಾದರಿಯಾಗಿದ್ದಾರೆ.ಇಂಥದ್ದೊಂದು ಮಾದರಿ ಮದುವೆಯಾಗಿದ್ದು ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ. ಸೋಮವಾರ ನಡೆದ ಮದುವೆಗೆ ಬಂದವರೆಲ್ಲ, ಒಳ್ಳೆ ಕೆಲಸ ಮಾಡಿದ್ದಾರೆ ಎನ್ನುವ ಶಹಬ್ಬಾಸ್‌ಗಿರಿ ನೀಡಿದರು.
ದೇವಮ್ಮ ಹಾಗೂ ಮಂಜುನಾಥಗೌಡ ಅವರ ಮದುವೆ ಇಂಥದ್ದೊಂದು ವಿಶೇಷತೆಗೆ ಸಾಕ್ಷಿಯಾಯಿತು.ಹಿರೇಸಿಂದೋಗಿ ಗ್ರಾಮದ ಚನ್ನನಗೌಡ ಮಾಲಿಪಾಟೀಲ ಅವರ ಮಗ ಮಂಜುನಾಥಗೌಡ ಪದವಿ ಓದಿದ್ದರೂ ಒಕ್ಕಲುತನ ಮಾಡುತ್ತಿದ್ದಾರೆ. ಹಾಗೆ ಅದೇ ಗ್ರಾಮದಲ್ಲಿ ನೆಲಸಿರುವ ಶ್ರೀಶೈಲಪ್ಪ ಸಂಕಿ ಎಂಬವರ ಮಗಳು ದೇವಮ್ಮ ಪಿಯುಸಿ ಶಿಕ್ಷಣ ಪಡೆದಿದ್ದಾರೆ.
ವಧುವಿನ ತಂದೆ ವರನಿಗೆ ಸುಮಾರು ₹1 ಲಕ್ಷ ಮೌಲ್ಯದ ಕೂರಿಗೆ ದಕ್ಷಿಣೆಯಾಗಿ ನೀಡಿದ್ದಾರೆ. ಹೀಗೆ ಮಗಳನ್ನು ರೈತನಿಗೆ ಕೊಟ್ಟರೆ ಸಾಲದು, ಆತ ಮತ್ತೆ ರೈತನಾಗಿಯೇ ದುಡಿಮೆ ಮಾಡಲು ದಾರಿ ಮಾಡಿಕೊಡಬೇಕು. ಅದರಿಂದ ಆತ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಚಿಂತನೆ ಮಾಡಿ, ಟ್ರ್ಯಾಕ್ಟರ್‌ನಿಂದ ಬಿತ್ತನೆ ಮಾಡುವ ಕೂರಿಗೆಯನ್ನು ಮದುವೆಯಲ್ಲಿಯೇ ದಕ್ಷಿಣೆಯಾಗಿ ನೀಡಿದ್ದಾರೆ.ನಮ್ಮ ಅಣ್ಣನ ಮಗಳು ದೇವಮ್ಮ ಅವರನ್ನು ರೈತನಿಗೆ ಕೊಟ್ಟಿದ್ದೇವೆ ಮತ್ತು ಅದರ ಜತೆಗೆ ನನ್ನ ಅಣ್ಣ ಶ್ರೀಶೈಲ ರೈತರ ಬಗ್ಗೆ ಹಮ್ಮೆ ಬರುವಂತಾಗಲಿ ಎಂದು ಬಿತ್ತನೆ ಮಾಡುವ ಕೂರಿಗೆಯನ್ನು ದಕ್ಷಿಣೆಯಾಗಿ ನೀಡಿದ್ದಾರೆ ಎಂದು ವಧುವಿನ ಚಿಕ್ಕಪ್ಪ ಬಸಣ್ಣ ಸಂಕಿ ಹೇಳಿದ್ದಾರೆ.