ನೇಹಾ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Apr 23, 2024 12:50 AM

ಸಾರಾಂಶ

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಸೋಮವಾರ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ/ಬೆಂಗಳೂರು

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಸೋಮವಾರ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ, ಎಬಿವಿಪಿ, ಮುಸ್ಲಿಂ ಸಂಘಟನೆಗಳು, ಮಹಿಳಾ ಜಾಗೃತಿ ವೇದಿಕೆಗಳಿಂದಲೂ ಪ್ರತಿಭಟನೆಗಳು ನಡೆದವು.

ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಬಿವಿಪಿ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಅಂಜುಮನ್ ಸಂಸ್ಥೆ ಸೋಮವಾರ ಕರೆ ನೀಡಿದ್ದ ಬಂದ್‌ ಬೆಂಬಲಿಸಿ ನಗರದ ಶಾಹ ಬಜಾರ್ ವಾಣಿಜ್ಯ ಮಳಿಗೆ, ನೂರಾನಿ ಮಾರುಕಟ್ಟೆಗಳು ಬೆಳಗ್ಗೆ 8ರಿಂದ ಮದ್ಯಾಹ್ನ 3ಗಂಟೆಯವರೆಗೆ ಸಂಪೂರ್ಣ ಸ್ಥಗಿತವಾಗಿದ್ದವು. ಅಂಜುಮನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕೈಗೆ ಕಪ್ಪು ಬಟ್ಟೆ ಧರಿಸಿಕೊಂಡು ಘಂಟಿಕೇರಿಯ ನೆಹರು ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಧಾರವಾಡದಲ್ಲಿ ಮುಸ್ಲಿಮರು ಮೌನ ಪ್ರತಿಭಟನೆ ನಡೆಸಿದರು. ಇದೇ ವೇಳೆ, ಹಳೇಹುಬ್ಬಳ್ಳಿಯ ಇಂಡಿಪಂಪ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನೇಹಾ ಕೊಲೆ ಆರೋಪಿ ಫಯಾಜ್‌ನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಇಂತಹ ಶಿಕ್ಷೆ ಗುರಿಪಡಿಸುವುದರಿಂದ ಮಹಿಳೆಯರ ಮೇಲಾಗುವ ಕ್ರೂರ ಕೃತ್ಯಗಳು ನಿಯಂತ್ರಣಕ್ಕೆ ಬರುತ್ತವೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬೆಳಗಾವಿಯಲ್ಲಿ ಜಾಗೃತ ಮಹಿಳಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.

ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ವಿದ್ಯಾರ್ಥಿನಿ ನೇಹಾ ಹತ್ಯೆ ಮಾಡಿರುವ ಕೊಲೆಗಡುಕನಿಗೆ ರಾಜ್ಯ ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಶಿಕ್ಷೆ ನೀಡಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ಮೈಸೂರಿನ ಗಾಂಧಿ ಚೌಕದಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಲವ್ ಜಿಹಾದ್ ಗೆ ಕಡಿವಾಣ ಹಾಕುತ್ತಿಲ್ಲ ಎಂದು ಕಿಡಿ ಕಾರಿದರು.

ಇದೇ ವೇಳೆ, ಹೊಸಪೇಟೆಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು, ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬೈಂದೂರಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇದೇ ವೇಳೆ, ಕಾರವಾರ, ರಾಯಚೂರು, ಕಲಬುರಗಿ, ಗದಗ, ಮಂಡ್ಯ, ರಾಮನಗರ ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.

ನೇಹಾ ಕೇಸ್‌ ಸಿಬಿಐಗೆ ಒಪ್ಪಿಸಿ: ಕಟೀಲ್‌

- ನೇಹಾ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಿ

ಕನ್ನಡಪ್ರಭ ವಾರ್ತೆ ಮಂಗಳೂರು

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಅಲ್ಲದೆ, ನೇಹಾ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಹಿಂದೂಗಳ ಮೇಲೆ ಹಲ್ಲೆ, ಹತ್ಯೆಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗದಲ್ಲಿ ಹರ್ಷ ಹತ್ಯೆ, ಮಂಗಳೂರಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆಯಿತು. ತಕ್ಷಣ ಅವರ ಮನೆಗೆ ತೆರಳಿ ಸಾಂತ್ವನ ಹೇಳುವ, ಪರಿಹಾರ ನೀಡುವ ಕೆಲಸ ಮಾಡಲಾಯಿತು. ಈಗ ಕಾಂಗ್ರೆಸ್‌ ಕಾರ್ಪೊರೇಟರ್‌ ಪುತ್ರಿ ನೇಹಾ ಕೊಲೆಯಾದರೂ ಕಾಂಗ್ರೆಸ್‌ ಸರ್ಕಾರ, ಮುಖಂಡರು ನೇಹಾ ಕುಟುಂಬಕ್ಕೆ ಇದುವರೆಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಪ್ರಕರಣದ ತನಿಖೆಯನ್ನು ಕಾಂಗ್ರೆಸ್‌ ಸರ್ಕಾರ ನಡೆಸುವ ವಿಶ್ವಾಸವಿಲ್ಲ. ಕೂಡಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

-----

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮೆರವಣಿಗೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಯಿತು. ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೇಳಿ ಬಂತು. ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಆದಾಗ ಡಿ.ಕೆ. ಶಿವಕುಮಾರ್‌ ಹಗುರ ಹೇಳಿಕೆ ನೀಡಿದ್ದರು. ಬಳಿಕ ಬಾಂಬ್‌ ಸ್ಫೋಟಕ್ಕೆ ಉಗ್ರವಾದಿಗಳ ಲಿಂಕ್‌ ಇರುವುದು ಬಯಲಾದಾಗ ದಾರಿ ತಪ್ಪಿಸುವ ಮಾತನಾಡಿದ್ದರು. ಕಾಂಗ್ರೆಸ್‌ನ ತುಷ್ಟೀಕರಣ ನೀತಿಯೇ ಇಂತಹ ಘಟನೆಗಳಿಗೆ ಕಾರಣ ಎಂದು ನಳಿನ್‌ ಕುಮಾರ್‌ ಹೇಳಿದರು.

ಬಿಜೆಪಿ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿತ್ತು. ಇದೀಗ ಪಿಎಫ್‌ಐನ ನಂಟಿರುವ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಒಳ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸಂಪತ್ತಿನ ಸಮಾನ ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ. ಇದು ಮುಸ್ಲಿಮರ ತುಷ್ಟೀಕರಣ ನೀತಿ. ರಾಜ್ಯದಲ್ಲಿ ಬಹುಸಂಖ್ಯಾತ ಹಿಂದುಗಳಿಗೆ ಬದುಕು ಕಷ್ಟವಾಗಿದೆ ಎಂದರು.

+++

ದ.ಕ.ಕ್ಕೆ 1.13 ಲಕ್ಷ ಕೋಟಿ:

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಗೆ 1.13 ಲಕ್ಷ ಕೋಟಿ ರು.ಅನುದಾನ ನೀಡಿದೆ. ಕಳೆದ 33 ವರ್ಷಗಳಿಂದ ದ.ಕ. ಕ್ಷೇತ್ರವನ್ನು ಬಿಜೆಪಿ ಸಂಸದರು ಪ್ರತಿನಿಧಿಸುತ್ತಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂದು ನಳಿನ್‌ ಕುಮಾರ್‌ ತಿಳಿಸಿದರು.ನೇಹಾ ಹತ್ಯೆ ಪ್ರಕರಣ ಸಿಒಡಿ ತನಿಖೆಗೆ: ಸಿಎಂ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಕರಣದ ವಿಚಾರಣೆಗಾಗಿ ವಿಶೇಷ ಕೋರ್ಟ್‌ ರಚಿಸುತ್ತೇವೆ. ಸಿಒಡಿ ಅಧಿಕಾರಿಗಳ ತಂಡ ಹುಬ್ಬಳ್ಳಿಗೆ ತೆರಳಿ ಪೊಲೀಸರಿಂದ ನೇಹಾ ಹತ್ಯೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ನೇಹಾ ಹತ್ಯೆ ಹಿಂದೆ ಯಾರ ಕೈವಾಡ ಇದ್ದರೂ, ಯಾರೇ ಭಾಗಿಯಾಗಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಿಒಡಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.ನೇಹಾ ಕೊಲೆ: ವಿಶೇಷ ಕೋರ್ಟ್‌ ಸ್ಥಾಪನೆಗೆ ಸೂಚನೆ

ಕಾನೂನು ಇಲಾಖೆಗೆ ಎಚ್‌ಕೆ ಪತ್ರ

ಕನ್ನಡಪ್ರಭ ವಾರ್ತೆ, ಬೆಂಗಳೂರು

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಕುರಿತು ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ ಅವರು ಇಲಾಖೆ ಪ್ರಧಾನಕಾರ್ಯದರ್ಶಿಗೆ ಅಧಿಕೃತ ಪತ್ರ ಬರೆದಿದ್ದಾರೆ.

ಸೋಮವಾರ ಬರೆದಿರುವ ಟಿಪ್ಪಣಿ ಪತ್ರದಲ್ಲಿ, ‘ಬರ್ಬರ ಹತ್ಯೆ ಹಿನ್ನೆಲೆಯಲ್ಲಿ ಪ್ರಕರಣ ಜನಮಾನಸದ ನೆನಪಿನ ಆಳದಿಂದ ಮಾಸುವ ಮೊದಲೇ ಅಪರಾಧಿಗೆ ಶಿಕ್ಷೆಯಾಗಬೇಕು. ಹೀಗಾಗಿ ತಕ್ಷಣ ವಿಶೇಷ ನ್ಯಾಯಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

------------

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹೀನಾಯ ಹತ್ಯೆ ಪ್ರಕರಣದಲ್ಲಿ ಪ್ರಥಮ ವರ್ತಮಾನ ವರದಿಯ ಆಧಾರದ ಮೇಲೆ ಹಾಗೂ ಪ್ರಕರಣದ ಕುರಿತು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಸಿದ್ದೇನೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯವು ಮಹಿಳೆಯರ ವಿರುದ್ಧದ ಹೀನಾಯ ಅಪರಾಧ ಪ್ರಕರಣಗಳಲ್ಲಿ ನೀಡಿರುವ ಮಾರ್ಗದರ್ಶನಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಹಾಗೂ ಅಪರಾಧ ಪ್ರಕ್ರಿಯಾ ಸಂಹಿತೆ, ಭಾರತೀಯ ದಂಡ ಸಂಹಿತೆಗೆ ಮಾಡಲಾಗಿರುವ ತಿದ್ದುಪಡಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರಕರಣ ಜನಮಾನಸದ ನೆನಪಿನ ಆಳದಿಂದ ಮಾಸುವ ಮೊದಲೇ ಅಪರಾಧಿಗೆ ಶಿಕ್ಷೆಯಾಗಬೇಕು.

ಜತೆಗೆ ಸಾಮಾಜಿಕ ಪರಿಣಾಮಗಳನ್ನು ಪರಿಗಣಿಸಬೇಕಿದ್ದು ನೇಹಾ ಪ್ರಕರಣವು ಸಾಮಾಜಿಕ ಹಾಗೂ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುವಂತದ್ದಾಗಿದೆ. ಹೀಗಾಗಿ ತಕ್ಷಣ ಒಂದು ವಿಶೇಷ ನ್ಯಾಯಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಿ ಎಂದು ಎಚ್.ಕೆ. ಪಾಟೀಲ್‌ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಯಿದೆ.ನೇಹಾಳಿಗೆ 9 ಅಲ್ಲ, 13 ಬಾರಿ ಇರಿದಿದ್ದ ಫಯಾಜ್‌!

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಾಹಿತಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿನ ಬಿವಿಬಿ ಕ್ಯಾಂಪಸ್‌ನಲ್ಲಿ ಹಾಡಹಗಲೇ ಹತ್ಯೆಗೀಡಾದ ನೇಹಾ ಹಿರೇಮಠಳಿಗೆ ಆರೋಪಿ ಫಯಾಜ್‌ ಬರೋಬ್ಬರಿ 13 ಬಾರಿ ಚೂರಿಯಿಂದ ಇರಿದಿದ್ದ ಎಂಬುದು ಮರಣೋತ್ತರ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ.

ಈವರೆಗೆ 9 ಬಾರಿ ಇರಿದಿದ್ದ ಎಂದು ನಂಬಲಾಗಿತ್ತು. ಆದರೆ, ಎದೆ, ಕೈ, ಬೆನ್ನು, ಪೃಷ್ಟ ಭಾಗಗಳಲ್ಲೂ ಎರಡ್ಮೂರು ಬಾರಿ ಇರಿದಿದ್ದ. ಕತ್ತಿನ ಭಾಗದಲ್ಲಿ ಬರೋಬ್ಬರಿ 12 ಇಂಚಿಗೂ ಆಳವಾಗಿ ಇರಿದಿದ್ದ. ಈ ಕಾರಣದಿಂದ ತೀವ್ರ ರಕ್ತಸ್ರಾವವಾಗಿ ನೇಹಾ ಮೃತಪಟ್ಟಿದ್ದಾಳೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

Share this article