ತಹಸೀಲ್ದಾರ್‌ ವರ್ತನೆ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ

KannadaprabhaNewsNetwork | Published : Aug 31, 2024 1:37 AM

ಸಾರಾಂಶ

ಬಾಕಿ ಉಳಿದಿರುವ 12 ದಲಿತ ಕುಟುಂಬಗಳಿಗೆ ಒಂದೇ ಕಡೆ ಮನೆ ನೀಡುವಂತೆ ಕಳೆದ ವರ್ಷದಿಂದ ಕೇಳುತ್ತಾ ಬಂದಿದ್ದು

ರೋಣ: ನೆರೆ ಹಾವಳಿಯಿಂದ ಸ್ಥಳಾಂತರಗೊಂಡ ಗ್ರಾಮಗಳ ಮನೆ ಹಂಚಿಕೆಯಲ್ಲಿನ ತಾರತಮ್ಯ ಕುರಿತು ಮಾಹಿತಿ ಕೇಳಲು ತೆರಳಿದ್ದ ದಲಿತ ಮುಖಂಡರಿಗೆ ಸಮರ್ಪಕ ಮಾಹಿತಿ ನೀಡದೇ ಕಚೇರಿಯಿಂದ ಹೊರ ಹೋಗಿ ಎಂದು ಬೆದರಿಕೆ ಹಾಕಿ ಕುಳಿತುಕೊಳ್ಳಲು ಕುರ್ಚಿ ನೀಡದೇ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್‌ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದಿದೆ.

ರೋಣ ತಾಲೂಕಿನ ಅಮರಗೋಳ ಹಾಗೂ ಬಸರಕೋಡ ಗ್ರಾಮಗಳ ಆಸರೆ ಮನೆಗಳನ್ನು ದಲಿತ ಫಲಾನುಭವಿಗಳಿಗೆ ಒಂದೇ ಕಡೆ ಕಲ್ಪಿಸಿಕೊಡುವಂತೆ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಬಾಕಿ ಉಳಿದಿರುವ 12 ದಲಿತ ಕುಟುಂಬಗಳಿಗೆ ಒಂದೇ ಕಡೆ ಮನೆ ನೀಡುವಂತೆ ಕಳೆದ ವರ್ಷದಿಂದ ಕೇಳುತ್ತಾ ಬಂದಿದ್ದು. ಈ ಕುರಿತು ತಹಸೀಲ್ದಾರ್‌ ನಾಗರಾಜ.ಕೆ, ಅವರು ಸಮರ್ಪಕ ಮಾಹಿತಿ ನೀಡದೇ ಸೌಜನ್ಯದಿಂದ ವರ್ತಿಸದೇ ಕಚೇರಿಯಿಂದ ಹೊರಗೆ ನಡೆಯಿರಿ ಎಂದು ಹೇಳಿದ್ದಲ್ಲದೇ ಕುಳಿತುಕೊಳ್ಳಲು ಕುರ್ಚಿ ನೀಡದೇ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಪಿಎಸ್‌ಐ ಪ್ರಕಾಶ ಬಣಕಾರ ಅವರನ್ನು ಕಚೇರಿಗೆ ಕರೆಯಿಸಿ,ಅನಗತ್ಯವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇವರನ್ನು ಹೊರ ಹಾಕಿ ಎಂದು ಆದೇಶಿಸುತ್ತಿದ್ದಾರೆ. ನ್ಯಾಯಯುತ ಮಾಹಿತಿ ಕೇಳಲು ಹೋದರೆ ಸರಿಯಾದ ಮಾಹಿತಿ ನೀಡದೇ ನಮ್ಮ ಮೇಲೆ ಏರುಧ್ವನಿಯಲ್ಲಿ ಬೆದರಿಕೆ ಹಾಕುವುದು ಸಮಂಜಸವಲ್ಲ, ದಲಿತರನ್ನು ಅಸ್ಪೃಶ್ಯತೆಯಿಂದ ಕಂಡಿರುವ ತಹಸೀಲ್ದಾರರ ನಡೆ ಖಂಡನೀಯವಾಗಿದೆ ಎಂದು ದಲಿತ ಮುಖಂಡ ಪ್ರಕಾಶ ಹೊಸಳ್ಳಿ ಆರೋಪಿಸಿದರು.

ಇನ್ನೋರ್ವ ದಲಿತ ಮುಖಂಡ ಡಿ.ಜೆ.ಕಟ್ಟಿಮನಿ ಮಾತನಾಡಿ, ತಹಸೀಲ್ದಾರರು ನಮ್ಮನ್ನು ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಸಮರ್ಪಕ ಮಾಹಿತಿ ನೀಡದೇ ಕಚೇರಿಯಿಂದ ಹೊರಗೆ ಹೋಗಿ ಎಂದು ಬೆದರಿಕೆ ಹಾಕುತ್ತಾರೆ. ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪಿಎಸ್ಐ ಅವರನ್ನು ಕರೆಸಿದ್ದಾರೆ, ನಾವು ಮಾಹಿತಿ ಕೇಳುವುದು ತಪ್ಪಾ? ಕರ್ತವ್ಯಕ್ಕೆ ನಾವೇಕೆ ಅಡ್ಡಿಪಡಿಸಬೇಕು, ಒಂದು ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.

ಮಾತಿನ ಚಕಮಕಿ: ಈ ವೇಳೆ ಕೆಲಕಾಲ ತಹಸೀಲ್ದಾರ್‌ ನಾಗರಾಜ.ಕೆ. ಹಾಗೂ ದಲಿತ ಮುಖಂಡರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಆಸರೆ ಮನೆಗಳ ಹಂಚಿಕೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಸೋಮವಾರದ ವರೆಗೆ ಕಾಲಾವಕಾಶ ನೀಡಿ ಎಂದು ತಹಸೀಲ್ದಾರ್‌ ನಾಗರಾಜ ಕೆ.ಹೇಳಿದರು. ಬಳಿಕ ಸೋಮವಾರ ಸಮರ್ಪಕ ಮಾಹಿತಿ ನೀಡಿ ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತ ಮುಖಂಡರು ತಹಸೀಲ್ದಾರ್‌ಗೆ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

ಈ ಸಂದರ್ಭದಲ್ಲಿ ಪ್ರಕಾಶ ಹೊಸಳ್ಳಿ, ಸಂಗಪ್ಪ ಹೊಸಮನಿ, ಮಂಜುನಾಥ ಬುರಡಿ, ಹನಮಂತಪ್ಪ ಪೂಜಾರ, ದುರ್ಗಪ್ಪ ಕಟ್ಟಿಮನಿ, ಭೀಮಪ್ಪ ಮಾದರ, ಪ್ರಕಾಶ ಮಾದರ ಸೇರಿದಂತೆ ದಲಿತ ಸಂಘಟನೆ ವಿವಿಧ ಮುಖಂಡರು ಇದ್ದರು.

Share this article