ಬೇಲೂರಲ್ಲಿ ನಕಲಿ ಪತ್ರಕರ್ತರ ವಿರುದ್ಧ ದಲಿತ ಸಂಘಟನೆಗಳ ದೂರು

KannadaprabhaNewsNetwork |  
Published : Jun 16, 2025, 02:32 AM ISTUpdated : Jun 16, 2025, 02:33 AM IST
15ಎಚ್ಎಸ್ಎನ್11 : ಬೇಲೂರು ತಾಲ್ಲೂಕಿನಲ್ಲಿ ಇತ್ತೀಚಿಗೆ ನಕಲಿ ಪತ್ರಕರ್ತರ ಹಾವಳಿ ಮಿತಿ ಮೀರಿದ್ದು, ಅವರನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ  ಸಂಘಟನೆಗಳ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ದೂರವಾಣಿ ಸಂಪರ್ಕದಲ್ಲಿ ಗೊತ್ತಿಲ್ಲದಂತೆ ರೆಕಾರ್ಡ್ ಮಾಡಬಾರದೆಂಬ ನಿಯಮವಿದ್ದರೂ ಕದ್ದು ಮುಚ್ಚಿ ಮೊಬೈಲ್ ಗಳಿಂದ ರೆಕಾರ್ಡ್ ಮಾಡುತ್ತಿದ್ದಾರೆ. ಕೂಡಲೇ ಇಂತವರನ್ನು ಬಂಧಿಸುವ ಮೂಲಕ ಪೊಲೀಸ್ ಇಲಾಖೆ ನ್ಯಾಯ ಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನಲ್ಲಿ ಇತ್ತೀಚಿಗೆ ನಕಲಿ ಪತ್ರಕರ್ತರ ಹಾವಳಿ ಮಿತಿ ಮೀರಿದ್ದು, ಅವರನ್ನು ಕೂಡಲೇ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘಟನೆಗಳ ಒಕ್ಕೂಟದಿಂದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಗಳ ಮುಖಂಡ ಚಿಕ್ಕಬ್ಯಾಡಿಗೆರೆ ಮಂಜುನಾಥ್, ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ನಕಲಿ ಪತ್ರಕರ್ತರು ಸರ್ಕಾರಿ ಇಲಾಖಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದ್ದು, ಜೊತೆಗೆ ನೈಜ ಪತ್ರಕರ್ತರ ಗೌರವಕ್ಕೆ ಧಕ್ಕೆಯಾಗುತ್ತಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ನೋಂದಣಿಯಾಗದ ಪತ್ರಿಕೆಯ ಪತ್ರಕರ್ತರನ್ನು ಪರಿಶೀಲಿಸಿ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜೊತೆಗೆ ಅನಧಿಕೃತವಾಗಿ ವಾಹನಗಳ ಮೇಲೆ ಪ್ರೆಸ್ ಎಂದು ನಮೂದಿಸಿ ಓಡಾಡುತ್ತಿರುವುದು ಹೆಚ್ಚಾಗಿ ಕಂಡು ಬಂದಿದ್ದು, ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ಸರ್ಕಾರಿ ಅಧಿಕಾರಿಗಳು ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಎಂದು ಮನವಿ ಮಾಡಿದರು.

ದಲಿತ ಮುಖಂಡರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಸಂವಿಧಾನದಲ್ಲಿ ಪತ್ರಿಕಾ ರಂಗಕ್ಕೆ ಒಳ್ಳೆಯ ಸ್ಥಾನಮಾನವಿದೆ. ಆದರೆ ತಾಲೂಕಿನಲ್ಲಿ ಯೂಟ್ಯೂಬ್ ಚಾನೆಲ್ ಗಳ ಮೂಲಕ ನಾವು ಪತ್ರಕರ್ತರೆಂದು ಬಿಂಬಿಸಿಕೊಂಡು ಹತ್ತಾರು ಜನರ ತಂಡ ಪತ್ರಕರ್ತರ ಹೆಸರಿನಲ್ಲಿ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು, ಶಾಲಾ ಕಾಲೇಜು, ಹಾಸ್ಟೆಲ್, ಅಂಗನವಾಡಿ, ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆ ಸಿಬ್ಬಂದಿ ಮೇಲೆ ದಬ್ಬಾಳಿಕೆ ನಡೆಸಿಕೊಂಡು ಹಣ ವಸೂಲಿ ಮಾಡಿ ಯಾರಿಗಾದರೂ ಹೇಳಿದರೆ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ನಿಮ್ಮ ಮರ್ಯಾದೆ ಕಳೆಯುವುದಾಗಿ ಹೆದರಿಸುತ್ತಿದ್ದಾರೆ. ಜೊತೆಗೆ ದೂರವಾಣಿ ಸಂಪರ್ಕ ಮಾಡಿ ರೆಕಾರ್ಡ್ ಮಾಡಿ ನಾವು ಹೇಳಿದಂತೆ ಮಾಡದಿದ್ದರೆ ಸಾಮಾಜಿಕ ಜಾಲತಾಣಕ್ಕೆ ಬಿಡುವುದಾಗಿ ಹೆದರಿಸುತ್ತಿದ್ದಾರೆ. ದೂರವಾಣಿ ಸಂಪರ್ಕದಲ್ಲಿ ಗೊತ್ತಿಲ್ಲದಂತೆ ರೆಕಾರ್ಡ್ ಮಾಡಬಾರದೆಂಬ ನಿಯಮವಿದ್ದರೂ ಕದ್ದು ಮುಚ್ಚಿ ಮೊಬೈಲ್ ಗಳಿಂದ ರೆಕಾರ್ಡ್ ಮಾಡುತ್ತಿದ್ದಾರೆ. ಕೂಡಲೇ ಇಂತವರನ್ನು ಬಂಧಿಸುವ ಮೂಲಕ ಪೊಲೀಸ್ ಇಲಾಖೆ ನ್ಯಾಯ ಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಪುರಸಭಾ ಮಾಜಿ ಸದಸ್ಯ ಮಂಜುನಾಥ್, ಮುಖಂಡರಾದ ಎಂ.ಜಿ. ವೆಂಕಟೇಶ್, ರಮೇಶ್, ನಿಂಗರಾಜು ಎಂ.ಜಿ., ರಾಜಗೇರೆ ನಿಂಗರಾಜು, ಸೋಮನಹಳ್ಳಿ ಯೋಗೇಶ್ , ಸ್ವಾಮಿ, ಶಂಬುಗನಹಳ್ಳಿ ಬಾಬು, ಬಿಕ್ಕೋಡು ತೀರ್ಥಕುಮಾರ್ ಸೇರಿ ದಲಿತ ಸಂಘಟನೆ ಮುಖಂಡರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ