ಒಳಮೀಸಲು ಶೀಘ್ರ ಜಾರಿಗೆ ದಲಿತ ಸಂಘರ್ಷ ಸಮಿತಿ ಆಗ್ರಹ

KannadaprabhaNewsNetwork | Published : Jan 31, 2025 12:45 AM

ಸಾರಾಂಶ

ಒಳಮೀಸಲಾತಿ ಶೀಘ್ರ ಜಾರಿಗೆ ತರಬೇಕೆಂದು ಒತ್ತಾಯಿಸಿ ಎಂ.ಗುರುಮೂರ್ತಿ ಶಿವಮೊಗ್ಗ ನೇತೃತ್ವದ ಪ್ರೊ.ಬಿ.ಕೃಷ್ಣಪ್ಪ ಅವರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಒಳಮೀಸಲಾತಿ ಶೀಘ್ರ ಜಾರಿಗೆ ತರಬೇಕೆಂದು ಒತ್ತಾಯಿಸಿ ಎಂ.ಗುರುಮೂರ್ತಿ ಶಿವಮೊಗ್ಗ ನೇತೃತ್ವದ ಪ್ರೊ.ಬಿ.ಕೃಷ್ಣಪ್ಪ ಅವರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ.

ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು ಒಳಮೀಸಲಾತಿ ವರ್ಗೀಕರಣದ ವಿಚಾರವಾಗಿ ಈಗಿನ ಸರಕಾರ ವಿಳಂಬ ಧೋರಣೆ ತಾಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಪೀಠಿಕೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವ ಆಶಯ ಬರೆದಿದ್ದಾರೆ. ಅದರ ಅನುಷ್ಠಾನಕ್ಕಾಗಿ ಸಂವಿಧಾನದ 15, 16ರ ಅನುಚ್ಛೇದದಲ್ಲಿ ಶೋಷಿತ ಸಮುದಾಯಗಳು ಸಮಾನವಾಗಿ ಬದುಕಲು ಮೀಸಲಾತಿ ಕಲ್ಪಿಸುವ ಮೂಲಭೂತ ಹಕ್ಕನ್ನು ನೀಡಿದ್ದಾರೆ.

ಆದರೆ ಕರ್ನಾಟಕದಲ್ಲಿ ಚರ್ಮಗಾರಿಕೆಗೆ ಸಂಬಂಧಿಸಿದ ಮಾದಿಗ, ಸಮಗಾರ, ಡೋಹರ, ದಕ್ಕಲಿಗ, ಮಚ್ಚಗಾರ ಮತ್ತು ಇತರೆ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗದಿರುವ ಕಾರಣ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂದು ಆರೋಪಿಸಿದರು.

ಈ ಅಸಮಾನತೆಯ ಸಂತ್ರಸ್ತರಾದ ಮಾದಿಗರು, ದಲಿತರು ಹಾಗೂ ಪ್ರಗತಿಪರ ಸಂಘಟನೆಗಳು ಕಳೆದ 30 ವರ್ಷಗಳಿಂದ ನಿರಂತರ ಹೋರಾಟ ಮಾಡಿದ ಪರಿಣಾಮ ನ್ಯಾಯಾಲಯವು ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಗಳೇ ಒಳಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡಬಹುದೆಂದು ಆದೇಶಿಸಿದೆ. ಆದರೂ ಒಳಮೀಸಲಾತಿ ವರ್ಗೀಕರಣವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದ್ದು, ಇದು ಖಂಡನೀಯ ಎಂದರು.

ನ್ಯಾ.ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ವರ್ಗೀಕರಣದ ಶಿಫಾರಸ್‌ ಪರಿಗಣಿಸಿ ಹೆಚ್ಚಳವಾಗಿರುವ ಮೀಸಲಾತಿಯ ಶೇ.17 ರ ಅನುಪಾತದಲ್ಲಿ ಹೆಚ್ಚುವರಿ ಶೇ.2 ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಎ.ಬಿ.ಸಿ.ಡಿ ವರ್ಗೀಕರಣದ ಗುಂಪುಗಳಿಗೆ ಸಮಾನವಾಗಿ ಹಂಚಬೇಕು. ಅದರಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ.7 ಮೀಸಲಾತಿಯನ್ನು ನಿಗದಿಪಡಿಸಬೇಕು ಎಂದರು.

ನಿಜವಾದ 49 ಅಲೆಮಾರಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಶೇ.1 ಕ್ಕಿಂತ ಹೆಚ್ಚು ಒಳಮೀಸಲಾತಿ ನೀಡಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಬಜೆಟ್‌ನಲ್ಲಿ ಮತ್ತು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳ ಜನಸಂಖ್ಯೆಯ ಅಧಾರದ ಮೇಲೆ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟು ಅದೇ ವರ್ಷ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕೆಂದು ಪ್ರಮುಖರು ಆಗ್ರಹಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಮನೋಜ್ ಕುಮಾರ್ ಸೋಮವಾರಪೇಟೆ, ಬೋಜ ವಿರಾಜಪೇಟೆ, ಭಾವ ಮಾಲ್ದಾರೆ, ಜಿಲ್ಲಾ ಖಜಾಂಚಿ ರಾಮಚಂದ್ರ ಮಡಿಕೇರಿ, ಜಿಲ್ಲಾ ಸಮಿತಿ ಸದಸ್ಯ ಕುಳಿಯ, ಮಡಿಕೇರಿ ತಾಲೂಕು ಸಂಚಾಲಕಿ ಗೌರಮ್ಮ, ವಿರಾಜಪೇಟೆ ಸಂಚಾಲಕಿ ಮಂಜುಳಾ, ಬೆಳ್ಳಿ, ಕೆದಮುಳ್ಳೂರು ಗ್ರಾಮ ಸಂಚಾಲಕ ರಘು, ಅಣ್ಣಪ್ಪ, ತಮ್ಮಯ್ಯ, ಕುಮಾರ್, ಚಿಪ್ಪಣ್ಣ, ನಿತಿನ್, ಮಂಜು, ಸುಬ್ರಮಣಿ, ಕಮಲ, ರತ್ನ, ದೇವಿ, ಸಂಜು ಮನವಿ ನೀಡುವ ಸಂದರ್ಭ ಹಾಜರಿದ್ದರು.

Share this article