ಬೊಂಬೆನಾಡಿನ ಅಖಾಡಕ್ಕೆ ದಳಪತಿ ರಂಗಪ್ರವೇಶ!

KannadaprabhaNewsNetwork | Published : Oct 6, 2024 1:23 AM

ಸಾರಾಂಶ

ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆ ಅಖಾಡ ಕಾವು ಪಡೆದುಕೊಳ್ಳುತ್ತಿದ್ದು, ಕ್ಷೇತ್ರದಲ್ಲಿ ಚುನಾವಣೆ ರಣಕಹಳೆ ಮೊಳಗಿಸಿರುವ ಬಂಡೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಟಕ್ಕರ್ ನೀಡಲು ಕೇಂದ್ರ ಸಚಿವ, ದಳಪತಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಬೊಂಬೆನಾಡಿಗೆ ಎಂಟ್ರಿ ನೀಡುತ್ತಿದ್ದಾರೆ.

ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆ ಅಖಾಡ ಕಾವು ಪಡೆದುಕೊಳ್ಳುತ್ತಿದ್ದು, ಕ್ಷೇತ್ರದಲ್ಲಿ ಚುನಾವಣೆ ರಣಕಹಳೆ ಮೊಳಗಿಸಿರುವ ಬಂಡೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಟಕ್ಕರ್ ನೀಡಲು ಕೇಂದ್ರ ಸಚಿವ, ದಳಪತಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಬೊಂಬೆನಾಡಿಗೆ ಎಂಟ್ರಿ ನೀಡುತ್ತಿದ್ದಾರೆ.ಭಾನುವಾರ ತಾಲೂಕಿನ ಐದು ಜಿಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಉಪಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಟಿಕೆಟ್ ಗೊಂದಲದ ನಡುವೆ ಎಂಟ್ರಿ:

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ನಡುವೆ ಗೊಂದಲ ಇನ್ನು ಮುಗಿದಿಲ್ಲ. ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿಯ ನಂತರ ಕೊಂಚ ತಣ್ಣಗಾಗಿದ್ದಾರೆ.ಕೆಲ ದಿನಗಳ ಹಿಂದೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕ್ಷೇತ್ರ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಗಳನ್ನು ನಡೆಸಿದ್ದರು. ಆ ಮೂಲಕ ಕ್ಷೇತ್ರ ಜೆಡಿಎಸ್ ಕಾರ್ಯಕರ್ತರು ಹಾಗೂ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ನಡೆಸಿದ್ದರು.ಡಿಕೆಶಿ ದಾಂಗುಡಿ:

ಉಪಚುನಾವಣೆ ಹಿನ್ನೆಲೆ ಈಗಾಗಲೇ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದಾದ್ಯಂತ ಒಂದು ಸುತ್ತಿನ ಪ್ರವಾಸ ನಡೆಸಿದ್ದು, 5 ಜನಸ್ಪಂದನಾ ಕಾರ್ಯಕ್ರಮ ನಡೆಸುವ ಜತೆಗೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಬಂಪರ್ ಕೊಡುಗೆ ಘೋಷಿಸಿದ್ದಾರೆ. ₹500 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಘೋಷಿಸಿದ್ದು, ಹತ್ತಾರು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇದರ ಜತೆಗೆ ನಿವೇಶನ ರಹಿತರು ಹಾಗೂ ವಸತಿ ರಹಿತರಿಗೆ ಸೂರು ಕಲ್ಪಿಸುವ ಭರವಸೆ ನೀಡಿದ್ದಾರೆ.ಈ ಬಾರಿ ಚನ್ನಪಟ್ಟಣ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲೇಬೇಕು ಎಂದು ಡಿಕೆಶಿ ಪಣತೊಟ್ಟಿದ್ದಾರೆ. ಈಗಾಗಲೇ ಜೆಡಿಎಸ್‌ನ 14 ನಗರಸಭಾ ಸದಸ್ಯರನ್ನು ಕಾಂಗ್ರೆಸ್‌ಗೆ ಸೆಳೆದಿದ್ದು, ವಿರೋಧ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಂಡಿದೆ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಚಿವರು, ಶಾಸಕರು ಚನ್ನಪಟ್ಟಣಕ್ಕೆ ಭೇಟಿ ನೀಡಿ ಪಕ್ಷಕ್ಕೆ ಬಲತುಂಬುವ ಕೆಲಸ ಮಾಡಿದ್ದಾರೆ. 5 ಜಿಪಂ ವ್ಯಾಪ್ತಿಯಲ್ಲಿ ಉಸ್ತುವಾರಿ ನೇಮಿಸಲಾಗಿದೆ. ಕಾಂಗ್ರೆಸ್ ಆರ್ಭಟ ಮುಂದೆ ವಿಪಕ್ಷಗಳು ಕೊಂಚ ಮಂಕಾಗಿದ್ದವು. ಇದೀಗ ಚುನಾವಣೆ ದಿನಾಂಕ ಯಾವಾಗ ಬೇಕಾದರೂ ಘೋಷಣೆ ಆಗಬಹುದು ಎಂಬ ಹೊತ್ತಿನಲ್ಲಿ ಕುಮಾರಸ್ವಾಮಿ ಕ್ಷೇತ್ರ ಪ್ರವಾಸ ಸಾಕಷ್ಟು ಕೌತುಕ ಮೂಡಿಸಿದೆ.ಉಪಚುನಾವಣೆ ಟಿಕೆಟ್ ಕುರಿತು ಇದುವರೆಗೆ ತುಟಿ ಬಿಚ್ಚದ ಎಚ್‌ಡಿಕೆ ತಮ್ಮ ನಿಲುವು ಪ್ರಕಟಿಸುವರೇ ಎಂದು ಎರಡು ಪಕ್ಷದವರು ಕುತೂಹಲದಿಂದ ಕಾಯುತ್ತಿದ್ದು, ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಮೌನ ಮುರಿಯುವರೇ ದಳಪತಿ ?ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್‌ಗಾಗಿ ಬಿಜೆಪಿ-ಜೆಡಿಎಸ್ ಮಧ್ಯೆ ಸಾಕಷ್ಟು ಪೈಪೋಟಿ ನಡೆದಿದ್ದು, ಇದೀಗ ಅದು ಕೊಂಚ ತಣ್ಣಗಾಗಿದೆ. ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸುವ ಮೂಲಕ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಬೇಕು ಎಂಬುದು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಸೆಯಾಗಿದೆ.

ಇಂದು ಎಚ್‌ಡಿಕೆ ಕ್ಷೇತ್ರ ಪ್ರವಾಸಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಭಾನುವಾರ ಮುಖಂಡರ, ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಕೋಡಂಬಳ್ಳಿ ಮರುಳಸಿದ್ದೇಶ್ವರ ದೇವಸ್ಥಾನದ ಆವರಣ, ಇಗ್ಗಲೂರು ಸರ್ಕಲ್‌, ದೊಡ್ಡಮಳೂರು, ನಾಗವಾರ, ಬ್ರಹ್ಮಣಿಪುರದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ.

Share this article