ಜನವರಿಗೆ ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗದಲ್ಲಿ ಮೆಟ್ರೋ

KannadaprabhaNewsNetwork | Published : Oct 6, 2024 1:23 AM

ಸಾರಾಂಶ

ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಬಹುತೇಕ ಜನವರಿಯಲ್ಲಿ ಪ್ರಯಾಣಿಕ ಸಂಚಾರ ಆರಂಭಿಸಬಹುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಡಿಸೆಂಬರ್‌ನಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ಸಿಎಂಆರ್‌ಎಸ್‌) ತಪಾಸಣೆ ನಡೆಸಲು ನಿರ್ಧರಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ಬಹುತೇಕ ಜನವರಿಯಲ್ಲಿ ಪ್ರಯಾಣಿಕ ಸಂಚಾರ ಆರಂಭಿಸುವ ಸುಳಿವು ನೀಡಿದೆ. ಆದರೆ ಆರಂಭದಲ್ಲಿ ಕೇವಲ ಮೂರು ರೈಲುಗಳು ಈ ಮಾರ್ಗದಲ್ಲಿ ಸಂಚರಿಸುವುದರಿಂದ ರೈಲಿಗಾಗಿ ಅರ್ಧಗಂಟೆ ಕಾಯುವುದು ಅನಿವಾರ್ಯವಾಗಲಿದೆ.

ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ 19 ಕಿ.ಮೀ. ಉದ್ದದ ಈ ಮಾರ್ಗ ಇದೇ ವರ್ಷಾಂತ್ಯಕ್ಕೆ ಆರಂಭವಾಗುವ ನಿರೀಕ್ಷೆ ಹುಸಿಯಾಗಿದೆ. ಮಾರ್ಗದ ಸಿವಿಲ್‌, ತಾಂತ್ರಿಕ ಕಾಮಗಾರಿಗಳು ಪೂರ್ಣಗೊಂಡಿವೆ. ಸಿಗ್ನಲಿಂಗ್‌ ಸಿಸ್ಟಂ ಕೂಡ ಮುಗಿದಿದೆ. ಸದ್ಯ ಚೀನಾದಿಂದ ಬಂದ ಚಾಲಕರಹಿತ ರೈಲು (ಮೂಲ ಮಾದರಿ) ಮಾತ್ರ ನಮ್ಮ ಮೆಟ್ರೋ ಬಳಿಯಿದ್ದು, ಅದರಿಂದಲೇ ತಪಾಸಣೆ ನಡೆಸಲಾಗುತ್ತಿದೆ. ನವೆಂಬರ್‌-ಡಿಸೆಂಬರ್ ವೇಳೆಗೆ ಇನ್ನೆರಡು ರೈಲುಗಳು ಬಿಎಂಆರ್‌ಸಿಎಲ್‌ಗೆ ಸೇರ್ಪಡೆ ಆಗಲಿವೆ. ರೈಲ್ವೆ ಮಂಡಳಿಯು ಟ್ರಾಕ್ಷನ್‌ಗೆ ಸಂಬಂಧಿಸಿದಂತೆ ಮಂಜೂರಾತಿ ನೀಡಿದೆ. ಹೀಗಾಗಿ 2025ರ ಜನವರಿಯಲ್ಲಿ ಅರ್ಧಗಂಟೆಗೊಮ್ಮೆ ರೈಲು ಸಂಚಾರ ಆರಂಭಿಸುವ ಗುರಿಯಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ತೀತಾಘರ್‌ ರೈಲ್ವೆ ಸಿಸ್ಟಂ ಲಿ. ಕಂಪನಿಯು 2025ರ ಮಾರ್ಚ್‌ನಿಂದ ಪ್ರತಿ ತಿಂಗಳು ಎರಡು ರೈಲುಗಳನ್ನು ಪೂರೈಕೆ ಮಾಡಲಿದೆ. ಇದರಿಂದ ಹಂತ ಹಂತವಾಗಿ ರೈಲುಗಳಿಗೆ ಕಾಯುವ ಅವಧಿ ಕಡಿಮೆಯಾಗಲಿದೆ. ಆಗಸ್ಟ್‌ ಒಳಗಾಗಿ ಈ ಮಾರ್ಗಕ್ಕೆ ಬೇಕಾದ ಎಲ್ಲ 15 ರೈಲುಗಳು ಲಭ್ಯವಿರಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಚೀನಾದಿಂದ ಫೆ.20ರಂದು ಚಾಲಕರಹಿತ ಆರು ಬೋಗಿಗಳ ರೈಲು ಹೆಬ್ಬಗೋಡಿಯಲ್ಲಿನ ಮೆಟ್ರೋ ಡಿಪೋ ತಲುಪಿತ್ತು. ಇದೇ ರೈಲನ್ನು ಹಳದಿ ಮಾರ್ಗದಲ್ಲಿ 37 ಬಗೆಯ ಪರೀಕ್ಷೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಬಹುತೇಕ ಯಶಸ್ವಿಯಾಗಿದೆ. ಸಿಗ್ನಲಿಂಗ್‌ ಪರೀಕ್ಷೆ ಮುಗಿದಿದೆ. ಇದೀಗ, ಕೋಚ್‌ಗಳು ಸ್ಟ್ಯಾಟಿಕ್‌ ಮತ್ತು ಎಲೆಕ್ಟ್ರಿಕಲ್‌ ಸಕ್ರ್ಯೂಟ್‌ ಪರೀಕ್ಷೆ ನಡೆಯುತ್ತಿದೆ.

ಹಳದಿ ಮಾರ್ಗದಲ್ಲಿ 2023 ರ ಜುಲೈನಲ್ಲೇ ವಾಣಿಜ್ಯ ಸಂಚಾರ ಆರಂಭವಾಗಬೇಕಿತ್ತು. ಆದರೆ, ರೈಲಿನ ಕೊರತೆ, ಕಾಮಗಾರಿ ವಿಳಂಬದಿಂದ ಒಂದು ವರ್ಷ ಡೆಡ್‌ಲೈನ್‌ ವಿಸ್ತರಿಸಲಾಯಿತು. ಈ ಅವಧಿಯೂ ಮುಗಿದಿದ್ದು, ಸದ್ಯ ವರ್ಷಾಂತ್ಯಕ್ಕೆ ಗಡುವು ನಿಗದಿಪಡಿಸಲಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಗೊಂಡರೆ ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಹಾಗೂ ಹೊಸೂರಿನತ್ತ ತೆರಳುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಈ ಭಾಗದಲ್ಲಿ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ.

Share this article