ಗದಗ: 12ನೇ ಶತಮಾನದಲ್ಲಿ ಜನಸೇವೆ, ಧರ್ಮಜಾಗೃತಿ ಮತ್ತು ಕಾಯಕ- ದಾಸೋಹಗೈದ ಗುಡ್ಡಾಪುರದ ಶರಣೆ ದಾನಮ್ಮ ಶರಣೆಯಾಗಿ ನಂಬಿದ ಭಕ್ತಸಮೂಹಕ್ಕೆ ವರ ನೀಡುವವಳು ದಾನೇಶ್ವರಿ ದೇವಿಯಾಗಿದ್ದಾಳೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.
ಸಂಸಾರದಲ್ಲಿದ್ದುಕೊಂಡು ಸದ್ಗತಿ ಹೊಂದಿ ಧರ್ಮ, ಸಂಸ್ಕಾರ, ಸಂಸ್ಕೃತಿ ಕುರಿತು ಜಾಗೃತಿ ಮೂಡಿಸಿದ ದಾನಮ್ಮ ಕೇವಲ ಶರಣೆ ಅಲ್ಲ, ನಂಬಿದ ಭಕ್ತರಿಗೆ ವರ ನೀಡುವ ವರದಾನೇಶ್ವರಿಯೂ ಹೌದು. 12ನೇ ಶತಮಾನದಲ್ಲಿ ಸಾಮಾಜಿಕ, ವೈಚಾರಿಕ ಕ್ರಾಂತಿ ಮಾಡಿದ ದಿಟ್ಟ ಶರಣೆ ಎಂದರು.
ದಾನಮ್ಮದೇವಿಯ ಪುರಾಣ- ಪ್ರವಚನವನ್ನು ಭಕ್ತಿ ಮತ್ತು ದಾನಕ್ಕೆ ಹೆಸರಾಗಿರುವ ಬಸವೇಶ್ವರ ನಗರದಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ಮುನ್ನಡೆಸಿಕೊಂಡು ಬಂದಿರುವ ಇಲ್ಲಿನ ಭಕ್ತಾದಿಗಳ ಹಾಗೂ ಸಂಘಟಕರ ಭಕ್ತಿ ಹಾಗೂ ದಾನ ಗುಣ ಮೆಚ್ಚುವಂತದ್ದು. ಈ ಪರಂಪರೆ ಮುಂದುವರಿಯಲಿ. ಕಾಯಕ ಮತ್ತು ದಾಸೋಹದಿಂದ ಮನುಷ್ಯ ಸಂತೃಪ್ತಿ ಹೊಂದುತ್ತಾನೆ ಹಾಗೆಯೇ ಪುರಾಣ ಪ್ರವಚನ ಶ್ರವಣದಿಂದ ಸದ್ಭಾವನೆ ಮೂಡಿ ಜ್ಞಾನ ಇಮ್ಮಡಿಗೊಳ್ಳುವುದು ಎಂದರು.ಸ್ವಚ್ಛ ಮನಸ್ಸು ಇದ್ದಲ್ಲಿ ದೇವರು ನೆಲೆಸಿರುತ್ತಾನೆ ಎಂಬುದನ್ನು ಗುರುವಿನಿಂದ ತಿಳಿಯಬಹುದು. ಗುರುವಿನ ಸನ್ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಜೀವನ್ಮುಕ್ತಿ ಹೊಂದಬೇಕು. ಮಕ್ಕಳಿಗೆ ಸದ್ವಿನಿಯ, ಸದಾಚಾರಗಳನ್ನು, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ರೂಢಿಸಬೇಕು. ಇದಕ್ಕೆಲ್ಲ ಪ್ರವಚನ ಮಾಲಿಕೆ ದಾರಿದೀಪವಾಗಲಿ ಎಂದರು.
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳು ರಚಿಸಿದ ದಾನಮ್ಮದೇವಿ ಪುರಾಣವನ್ನು ನಂದಿಕೇಶ್ವರದ ವೀರೇಶ್ವರ ಶಾಸ್ತ್ರಿಗಳಿಂದ ಮೊದಲ ದಿನ ಆರಂಭಗೊಂಡ ಪುರಾಣ ಪ್ರವಚನಕ್ಕೆ ಮೃತ್ಯುಂಜಯ ಹಿರೇಮಠ, ಹೇಮಂತಕುಮಾರ ಹಿರೇಮಠ ಸಂಗೀತ ಸಾಥ್ ನೀಡಿದರು.
ಹಿರಿಯ ಟ್ರಸ್ಟಿ ರಾಚಪ್ಪ ಮಿಣಜಗಿ ಹಾಗೂ ಗೌರವಾಧ್ಯಕ್ಷೆ ಶೈಲಜಾ ಕೊಡೇಕಲ್ ಮಾತನಾಡಿದರು. ಈ ವೇಳೆ ಟ್ರಸ್ಟಿಗಳಾದ ಶಿವಬಸಪ್ಪ ಯಂಡಿಗೇರಿ, ಶಿವಕುಮಾರ ಬೇವಿನಮರದ, ಶಂಭು ಕಾರಕಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುರೇಖಾ ಪಿಳ್ಳಿ ಸ್ವಾಗತಿಸಿದರು. ಜ್ಯೋತಿ ಹೇರಲಗಿ ನಿರೂಪಿಸಿ, ವಂದಿಸಿದರು.