ದಾವಣಗೆರೆಯಲ್ಲಿ 2 ತಿಂಗಳಲ್ಲಿ ಐಟಿ-ಬಿಟಿ ಕಂಪನಿ ಆರಂಭ

KannadaprabhaNewsNetwork |  
Published : Nov 15, 2025, 01:45 AM IST
11ಕೆಡಿವಿಜಿ6-ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಬುಧವಾರ ಟೆಕ್ ರೈಸ್ ದಾವಣಗೆರೆ ಸಭೆ ನಂತರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಬೆಂಗಳೂರಿನ ಕೆಇಡಿಎಂ ಸಿಇಓ ಸಂಜೀವಕುಮಾರ ಗುಪ್ತ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ವಿವಿಧ ಕಂಪನಿಗಳ ಸಿಇಓಗಳ ಜೊತೆ. ..................11ಕೆಡಿವಿಜಿ7, 8, 9, 10-ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಬುಧವಾರ ಟೆಕ್ ರೈಸ್ ದಾವಣಗೆರೆ ಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಬೆಂಗಳೂರಿನ ಕೆಇಡಿಎಂ ಸಿಇಓ ಸಂಜೀವಕುಮಾರ ಗುಪ್ತ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ವಿವಿಧ ಕಂಪನಿಗಳ ಸಿಇಓಗಳ ಜೊತೆಗೆ ಸಭೆ ನಡೆಸಿದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಐಟಿ-ಬಿಟಿ ಕಂಪನಿ ಸ್ಥಾಪಿಸಬೇಕು, ಸ್ಥಳೀಯವಾಗಿಯೇ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಕನಸು ಸಾಕಾರಗೊಳ್ಳುವ ದಿನ ಸಮೀಪಿಸುತ್ತಿದೆ. ದೇಶ-ವಿದೇಶಗಳ ಕಂಪನಿಗಳ ಜೊತೆಗಿನ ಮಾತುಕತೆಯ ಫಲವಾಗಿ 2 ತಿಂಗಳಲ್ಲಿ 10ಕ್ಕೂ ಹೆಚ್ಚು ಕಂಪನಿ ಇಲ್ಲಿಗೆ ಬರುವ ನಿರೀಕ್ಷೆ ಇದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ಬಹು ವರ್ಷಗಳ ಕನಸು ಸಾಕಾರ, 20ಕ್ಕೂ ಹೆಚ್ಚು ಕಂಪನಿ ಪೈಕಿ 3 ಕಂಪನಿ ಶೀಘ್ರವೇ ಶುರು: ಸಂಸದೆ ಡಾ.ಪ್ರಭಾ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿ ಐಟಿ-ಬಿಟಿ ಕಂಪನಿ ಸ್ಥಾಪಿಸಬೇಕು, ಸ್ಥಳೀಯವಾಗಿಯೇ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಕನಸು ಸಾಕಾರಗೊಳ್ಳುವ ದಿನ ಸಮೀಪಿಸುತ್ತಿದೆ. ದೇಶ-ವಿದೇಶಗಳ ಕಂಪನಿಗಳ ಜೊತೆಗಿನ ಮಾತುಕತೆಯ ಫಲವಾಗಿ 2 ತಿಂಗಳಲ್ಲಿ 10ಕ್ಕೂ ಹೆಚ್ಚು ಕಂಪನಿ ಇಲ್ಲಿಗೆ ಬರುವ ನಿರೀಕ್ಷೆ ಇದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಸ್ಮಾರ್ಟ್ ಸಿಟಿ ಯೋಜನೆ ಕಚೇರಿಯಲ್ಲಿ ಬುಧವಾರ ವಿವಿಧ ಐಟಿ-ಬಿಟಿ ಕಂಪನಿಗಳ ಸಿಇಒ, ಎಂಜಿನಿಯರಿಂಗ್ ಕಾಲೇಜುಗಳ ಪ್ರಾಚಾರ್ಯರೊಂದಿಗೆ ಟೆಕ್ ರೈಸ್‌ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಐಟಿ-ಬಿಟಿ ಕಂಪನಿಗಳು ಸ್ಥಾಪನೆಯಾಗಬೇಕು, ಸ್ಥಳೀಯವಾಗಿಯೇ ನಮ್ಮ ಯುವಜನರಿಗೆ ಉದ್ಯೋಗ ಸಿಗಬೇಕೆಂಬ ಪ್ರಯತ್ನಕ್ಕೆ ಎಲ್ಲ ರೀತಿಯ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.

ಐಟಿ-ಬಿಟಿ ಕಂಪನಿಗಳಿಗೆ ಅಗತ್ಯ ಮೂಲಸೌಕರ್ಯ, ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಇಲ್ಲಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ 1, 2 ಹಾಗೂ 3ನೇ ಮಹಡಿಗಳಲ್ಲಿ ಸದ್ಯಕ್ಕೆ ಕಂಪನಿಗಳಿಗೆ ಸೌಕರ್ಯ ಕಲ್ಪಿಸಲಾಗುತ್ತದೆ. ಅಲ್ಲಿ ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ ಐಟಿ-ಬಿಟಿ ಕಂಪನಿಗಳಿಗೆ ಅಗತ್ಯ ವ್ಯವಸ್ಥೆಯೂ ಸಿದ್ಧವಿದೆ. ದಿನದ 24 ಗಂಟೆಯೂ ಬಸ್ಸು ಸೌಕರ್ಯ ಇರುತ್ತದೆ. ಪ್ರಶಾಂತ ವಾತಾವರಣ, ಕಾನೂನು ಸುವ್ಯವಸ್ಥೆ, ಸ್ವಚ್ಛತೆ ಜೊತೆಗೆ ಸ್ಟಾರ್‌ ಹೋಟೆಲ್‌ಗಳು, ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳೂ ಇರುವುದು ಕಂಪನಿಗಳಿಗೂ ಪೂರಕವಾಗಿದೆ ಎಂದು ತಿಳಿಸಿದರು.

ಕೇಂದ್ರದ ಎಸ್‌ಟಿಪಿಐ, ಕರ್ನಾಟಕ ಡಿಜಿಟಲ್‌ ಎಕನಾಮಿ ಮಿಷನ್ ಸಹಕಾರದಲ್ಲಿ ಜಿಲ್ಲಾಡಳಿತ ನೆರವಿನಿಂದ ಕಂಪನಿಗಳನ್ನು ಸ್ಥಾಪಿಸಲು ದಾವಣಗೆರೆ ವಿಜ್ಹನ್‌ ಗ್ರೂಪನ್ನು ಜೂನ್ ತಿಂಗಳಲ್ಲೇ ರಚಿಸಿದೆ. ಬೆಂಗಳೂರಿನ ಪ್ರತಿಷ್ಟಿತ ಕಂಪನಿಗಳು, ವಿವಿಧ ರಾಜ್ಯಗಳು, ಕೆಲ ದೇಶಗಳಿಗೂ ಹೋಗಿ ತಂಡವು ಅಧ್ಯಯನ ಮಾಡಿ ಬಂದಿದೆ. ಅಲ್ಲಿನ ಕಂಪನಿಗಳೊಂದಿಗೆ ನಡೆಸಿದ ಮಾತುಕತೆ ಫಲವಾಗಿ ಕಂಪನಿಗಳ ಸಿಇಒಗಳ ಸಭೆ ಮಾಡುವ ಪ್ರಯತ್ನವೂ ಈಗ ಸಫಲವಾಗಿದೆ ಎಂದರು.

ಬೆಂಗಳೂರಿನ ಕೆಇಡಿಎಂ ಸಿಇಒ ಸಂಜೀವಕುಮಾರ ಗುಪ್ತಾ, ಬೆಂಗಳೂರಿನಿಂದ ಹೊರ ಜಿಲ್ಲೆಗಳಲ್ಲೂ ಐಟಿ ಬಿಟಿಗಳನ್ನು ಸ್ಥಾಪಿಸಬೇಕೆಂಬ ಸದುದ್ದೇಶದಿಂದ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಕಲಬುರಗಿಗಳನ್ನು ಜಾಗತಿಕ ಆರ್ಥಿಕ ವಲಯಗಳಾಗಿ ಗುರುತಿಸಲಾಗಿದೆ. ಈ ಆರ್ಥಿಕ ವಲಯಗಳಲಲಿ ದಾವಣಗೆರೆಯೂ ಸೇರಿದಂತೆ ಇಲ್ಲಿ ಅಗತ್ಯ ಸೌಕರ್ಯ ಕಲ್ಪಿಸಿದೆ. ಜಾಗತಿಕ ಆರ್ಥಿಕ ವಲಯ ಸ್ಥಾಪಿಸುವುದರಿಂದ ಅನೇಕ ಕಂಪನಿಗಳು ಇಲ್ಲಿಗೆ ಬರುತ್ತವೆ. ಅನೇಕ ಕಂಪನಿಗಳ ಜೊತೆಗೆ ಸಭೆ ನಡೆಸಿದ್ದು, 10ಕ್ಕಿಂತ ಹೆಚ್ಚು ಕಂಪನಿ ದಾವಣಗೆರೆ ಬಗ್ಗೆ ಒಲವು ತೋರಿದ್ದು, ಆದಷ್ಟು ಬೇಗನೆ 3 ಕಂಪನಿ ಸಹ ಸ್ಥಾಪನೆಯಾಗಲಿವೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ನ.16ಕ್ಕೆ ಬೆಂಗಳೂರಿನಲ್ಲಿ ನಡೆಯುವ ಟೆಕ್ ಸಮ್ಮೇಳನದಲ್ಲಿ ನಮ್ಮ ಜಿಲ್ಲೆಯಿಂದ ಸ್ಟಾಲ್ ಹಾಕಲಿದ್ದು, ತಾವೂ ಸ್ಥಳದಲ್ಲಿ ಹಾಜರಿರುತ್ತೇವೆ. ಸಂಸದರು ಸಹ ಸ್ಟಾಲ್‌ಗೆ ಭೇಟಿ ನೀಡುವರು ಎಂದು ಹೇಳಿದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್‌, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ, ಕೆಡಿಇಎಂ, ಎಸ್‌ಟಿಪಿಐ ಅಧಿಕಾರಿಗಳು, ವಿಷನ್ ದಾವಣಗೆರೆ ತಂಡದ ವೀರೇಶ ಪಟೇಲ್‌, ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಚಾರ್ಯರು, ವಿವಿಧ ಕಂಪನಿಗಳ ಸಿಇಒಗಳು, ಅಧಿಕಾರಿಗಳು ಇದ್ದರು.

- - -

-11ಕೆಡಿವಿಜಿ7, 8, 9, 10:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ