ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಗುರುದೇವೋತ್ಸವ ಕಾರ್ಯಕ್ರಮ ಮೂರು ದಿನಗಳ ಕಾಲ ಅದ್ಭುತವಾಗಿ ಮೂಡಿಬಂದಿತು. ನಗರದ ವಿವೇಕಾನಂದ ರಂಗಮಂದಿರದಲ್ಲಿ ಸಂಜೆ ೪ ರ ಬಳಿಕ ನೃತ್ಯಲೋಕವೇ ಸೃಷ್ಟಿಯಾಗುತ್ತಿತ್ತು. ನೃತ್ಯ ಕಲಾವಿದೆಯರು ಒಬ್ಬರನ್ನೊಬ್ಬರು ಮೀರಿಸುವಂತೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದರು. ನವರಸಗಳನ್ನು ಅವಾಹನೆ ಮಾಡಿಕೊಂಡವರಂತೆ ನರ್ತಿಸಿದರು. ಕ್ಲಿಷ್ಟಕರವೆನಿಸುವಂತಹ ಭಾವ-ಭಂಗಿಗಳನ್ನು ನಿರಾಯಾಸವಾಗಿ ತೋರುತ್ತಾ ನೋಡುಗರ ಹೃದಯಗೆದ್ದರು.
ಪುಟ್ಟ ಪುಟ್ಟ ಕಲಾವಿದೆಯರೂ ಅನುಭವಿ ನೃತ್ಯಕಲಾವಿದೆಯರಿಗೆ ಸರಿಸಮನಾಗಿ ನರ್ತಿಸಿ ಭರತನಾಟ್ಯದ ಸೊಬಗಿಗೆ ಮೆರುಗು ನೀಡಿದರು. ಬೆಳಕಿನ ವಿನ್ಯಾಸವೂ ನೃತ್ಯದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಅದ್ಭುತ ಭಾವಾಭಿನಯ, ಕಣ್ಣೋಟ ಜೊತೆಗೆ ವೈವಿಧ್ಯಮಯ ನೃತ್ಯ ಪ್ರಾಕಾರಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು.ಕಾರ್ಯಕ್ರಮದಲ್ಲಿ ಬೆಂಗಳೂರು ಭಾಷ್ಯಾಂಗ ನೃತ್ಯಾಲಯದ ವಿದುಷಿ ಎಂ.ಎಸ್.ಸಿಂಧುರಾವ್ ಅವರು ಮೈಸೂರಿನ ಅರಮನೆಗಳಲ್ಲಿ ಇರುವ ನಾಟ್ಯಮಂಟಪಗಳ ಅಧ್ಯಯನ ಕುರಿತು ಪ್ರಬಂಧ ಮಂಡಿಸಿದರೆ, ನೃತ್ಯ ಮತ್ತು ಬೆಳಕಿನ ವಿನ್ಯಾಸದ ಬಗ್ಗೆ ಧ್ವನಿ ಬೆಳಕು ವಿನ್ಯಾಸಕಾರ ಎಂ.ಎಲ್.ರಾಜನ್ ಪ್ರಬಂಧ ಮಂಡಿಸಿದರು.
ಕಾರ್ಯಕ್ರಮದಲ್ಲಿ ಬೆಳಕು ವಿನ್ಯಾಸಕಾರ ಎಂ.ಎಲ್.ರಾಜನ್ ಮತ್ತು ತಬಲ ಕಲಾವಿದ ಪಂಡಿತ್ ಭೀಮಾಶಂಕರ್ ಬಿದನೂರ್ ವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು.