ಗಬ್ಬೆದ್ದು ನಾರುವ ದಾಂಡೇಲಿ ಬಸ್ ನಿಲ್ದಾಣದ ಶೌಚಾಲಯ

KannadaprabhaNewsNetwork | Published : Apr 21, 2025 12:59 AM

ಸಾರಾಂಶ

ದೂರದ ಊರುಗಳಿಂದ ಬರುವ ಪ್ರವಾಸಿಗರು, ಪ್ರವಾಸಿಗರನ್ನು ಹೊತ್ತು ತರುವ ಬಸ್‌ಗಳು ದಾಂಡೇಲಿ ಬಸ್ ನಿಲ್ದಾಣದ ಹತ್ತಿರ ಇಳಿಸುತ್ತವೆ.

ದಾಂಡೇಲಿ: ಪ್ರವಾಸೋದ್ಯಮ ನಗರ ಎಂದು ಬಿಂಬಿತಗೊಳ್ಳುತ್ತಿರುವ ದಾಂಡೇಲಿಗೆ ಪ್ರವಾಸಕ್ಕೆಂದು ಬರುವ ಪ್ರವಾಸಿಗರಿಗೆ ಇಲ್ಲಿನ ಬಸ್‌ ನಿಲ್ದಾಣದ ಶೌಚಾಲಯ ನರಕ ದೃಶ್ಯವನ್ನು ತೋರಿಸುತ್ತಿದೆ. ಪ್ರವಾಸಿಗರು, ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೂರದ ಊರುಗಳಿಂದ ಬರುವ ಪ್ರವಾಸಿಗರು, ಪ್ರವಾಸಿಗರನ್ನು ಹೊತ್ತು ತರುವ ಬಸ್‌ಗಳು ದಾಂಡೇಲಿ ಬಸ್ ನಿಲ್ದಾಣದ ಹತ್ತಿರ ಇಳಿಸುತ್ತವೆ. ಪ್ರವಾಸಿಗರು ಮೊದಲು ಹುಡುಕುವುದೇ ಶೌಚಾಲಯವನ್ನು. ಆದರೆ ಈ ಭಾಗದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಜನರು ಬಸ್‌ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಹೋಗುತ್ತಾರೆ. ಅಲ್ಲಿನ ಅವಸ್ಥೆಯನ್ನು ಅನುಭವಿಸಿ ಅನಿವಾರ್ಯವಾಗಿ ಉಪಯೋಗಿಸಿ, ಹೇಳಿದಷ್ಟು ಹಣ ನೀಡಿ ಬರುವಂತಹ ಸ್ಥಿತಿ ಇದೆ.

ಬಸ್‌ ನಿಲ್ದಾಣದ ಅಕ್ಕಪಕ್ಕ ಇರುವ ಅಂಗಡಿಕಾರರು ಹತ್ತಾರು ಬಾರಿ ಪ್ರತಿಭಟಿಸಿದರೂ ಪ್ರಯೋಜನವಿಲ್ಲದಂತಾಗಿದೆ.

ದಾಂಡೇಲಿ ಬಸ್ ನಿಲ್ದಾಣ ಕಳೆದ ೨೦೧೦-೧೩ರ ಸುಮಾರಿಗೆ ಸುಮಾರು ₹೨ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಹೈಟೆಕ್ ಶೌಚಾಲಯ ನಿರ್ಮಿಸಿ ನಿಲ್ದಾಣದ ಸೌಂದರ್ಯಕ್ಕೆ ಆದ್ಯತೆ ನೀಡಲಾಗಿತ್ತು. ಆದರೆ ನಿಲ್ದಾಣದ ಸುತ್ತ ದಪ್ಪವಾಗಿ ಕಾಂಕ್ರಿಟ್ ಹಾಕಿ, ಶೌಚಾಲಯ ಕಟ್ಟಿದ್ದು ಬಿಟ್ಟರೆ ಇನ್ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಆದರೆ ಕೋಟಿಗಟ್ಟಲೇ ಹಣ ಮಾತ್ರ ವ್ಯಯ್ಯವಾಗಿದೆ.

ಹಳೆ ಮುದುಕಿಗೆ ಹೊಸ ಸೀರೆ ಉಡಿಸಿದಂತೆ, ಆಗ ಮಾತ್ರ ಸುಣ್ಣ ಬಣ್ಣ ಮಾಡಿದರು. ನಂತರ ನಿಲ್ದಾಣ ಮೊದಲಿನ ಸ್ಥಿತಿಗೇ ಮರಳಿದೆ. ಮಳೆಗಾಲದಲ್ಲಿ ಮಾಳಿಗೆ ಸೋರುವುದು, ದನಗಳು ನಿಲ್ದಾಣ ಒಳಗೆ ಬಂದು ಉಳಿದುಕೊಂಡು ಗಲೀಜು ಮಾಡುವುದು ನಿಂತಿಲ್ಲ. ಸದ್ಯಕ್ಕೆ ನಿಲ್ದಾಣದ ಮೇಲೆ ಮಾಳಿಗೆ ಸೋರದಂತೆ ತಗಡಿನ ಶೀಟ್‌ ಹಾಕಲಾಗಿದೆ. ಈ ಕ್ಷೇತ್ರದ ಶಾಸಕರು ಹಿಂದೆ ಜಿಲ್ಲಾ ಉಸ್ತುವಾರಿ ಮಂತ್ರಿ ಇದ್ದರು. ಆ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಹೈಟೆಕ್ ಬಸ್‌ ನಿಲ್ದಾಣಗಳು ನಿರ್ಮಾಣಗೊಂಡು, ಅವುಗಳಲ್ಲಿ ಗುಣಮಟ್ಟದ ಶೌಚಾಲಯಗಳು ಕೂಡ ತಯಾರಾದವು. ಆದರೆ ದಾಂಡೇಲಿಗೆ ಮಾತ್ರ ಮಲತಾಯಿ ಧೋರಣೆ ಅನುಸರಿಸಲಾಯಿತು ಎನ್ನುತ್ತಾರೆ ಸ್ಥಳೀಯರು.

ದಾಂಡೇಲಿ ಸುತ್ತಮುತ್ತ ಪ್ರವಾಸಿಗರಿಗಾಗಿ ಅನೇಕ ರೆಸಾರ್ಟ್‌ಗಳು, ಹೋಮ್‌ಸ್ಟೇಗಳು ನಿರ್ಮಾಣಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅವುಗಳಲ್ಲಿ ಉತ್ತಮ ಸೇವೆಗಳು ಕೂಡ ಸಿಗುತ್ತಿವೆ. ಆದರೆ ದಾಂಡೇಲಿಗೆ ಬಂದಿಳಿದು ತಾವು ಬುಕ್ ಮಾಡಿದ ಸ್ಥಳಕ್ಕೆ ಮುಟ್ಟುವ ಮೊದಲು ನಿಲ್ದಾಣದಲ್ಲಿ ಹೋಗಿ ಬರುವಾಗ ಆಗುವ ಕೆಟ್ಟ ಅನುಭವವನ್ನು ಅನೇಕ ಪ್ರವಾಸಿಗರು ಹೇಳಿಕೊಳ್ಳುವುದನ್ನು ಕಾಣಬಹುದಾಗಿದೆ.

ಇಗಿರುವ ಬಸ್‌ ನಿಲ್ದಾಣವನ್ನು ತೆಗೆದು ನೂತನವಾಗಿ ಹೈಟೆಕ್ ಬಸ್‌ ನಿಲ್ದಾಣವಾಗಿ ನಿರ್ಮಾಣ ಮಾಡಬೇಕು. ಸ್ಥಳೀಯರಿಗೆ ತೊಂದರೆಯಾಗದಂತೆ ಶೌಚಾಲಯವನ್ನು ಹೈಟೆಕ್‌ಗಾಗಿ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರಾದ ಡಿವೈಎಫ್‌ಐ ಮುಖಂಡರು, ನಗರಸಭೆಯ ಮಾಜಿ ಸದಸ್ಯರು ಆದ ಡಿ.ಸ್ಯಾಮಸನ್ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ, ಈ ಭಾಗದ ಶಾಸಕರು, ಸಚಿವರಿಗೆ ಒತ್ತಾಯಿಸಿದ್ದಾರೆ.

Share this article