ದಲಿತರು ಸ್ವಾಭಿಮಾನದಿಂದ ಬದುಕಿದರೆ ಅಭಿವೃದ್ಧಿ

KannadaprabhaNewsNetwork | Published : Apr 21, 2025 12:59 AM

ಸಾರಾಂಶ

ಸಿರಿಗೆರೆ ಸಮೀಪದ ಅಳಗವಾಡಿ ಗ್ರಾಮದಲ್ಲಿ ನಡೆದ ಡಾ.ಅಂಬೇಡ್ಕರ್‌ ಹಾಗೂ ಡಾ.ಬಾಬು ಜಗಜೀವನರಾಮ್‌ ಜಯಂತಿಯಲ್ಲಿ ಮಾಜಿ ಸಚಿವ ಎಚ್.‌ಆಂಜನೇಯ ಮಾತನಾಡೊಡಿದರು.

ಮಾಜಿ ಸಚಿವ ಎಚ್‌.ಆಂಜನೇಯ ಅಳಗವಾಡಿ ಗ್ರಾಮದಲ್ಲಿ ಅಂಬೇಡ್ಕರ್, ಬಾಬು ಜಗಜೀವನ್ ರಾಮ್‌ ಜಯಂತಿ ಆಚರಣೆಕನ್ನಡಪ್ರಭ ವಾರ್ತೆ ಸಿರಿಗೆರೆ

ದಲಿತರು ಎದೆಗಾರಿಕೆ, ಸ್ವಾಭಿಮಾನ ಮತ್ತು ಛಲಗಾರಿಕೆಯಿಂದ ಬದುಕಿ ಆರ್ಥಿಕ ಸ್ವಾವಲಂಭನೆ ಸಾಧಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಸಿರಿಗೆರೆ ಸಮೀಪದ ಅಳಗವಾಡಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್‌ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡಬೇಕೆನ್ನುವ ನಿಟ್ಟಿನಲ್ಲಿ ಬಸವಣ್ಣ-ಅಂಬೇಡ್ಕರ್ ಅವರು ಸಾಕಷ್ಟು ಕಲ್ಯಾಣ ಕ್ರಾಂತಿಗಳನ್ನು ನಡೆಸಿದ್ದಾರೆ. ಸಮಾಜದಲ್ಲಿ ಇಂದಿಗೂ ಕೂಡ ಅಸಮಾನತೆಯ ಸಂಕೋಲೆ ಎದ್ದು ಕಾಣುತ್ತಿದೆ. ಮೇಲು-ಕೀಳು ಮನೆಮಾಡಿದ್ದ ಸಮಾಜದಲ್ಲಿ ಅಂಬೇಡ್ಕರ್ ಅವರು ಉತ್ತಮ ಪ್ರಜೆಯಾಗಿ ದೇಶಕ್ಕೆ ಸಂವಿಧಾನವನ್ನು ನೀಡಿ ಎಲ್ಲರೂ ಅದರಡಿ ಬದುಕುವ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಸಾಕಷ್ಟು ಜನ ಜಾಗೃತಿ ಮೂಡಿಸುವಂತಹ ಕಲ್ಯಾಣ ಕಾರ್ಯಗಳನ್ನು ಮಾಡಿದ್ದಾರೆ.

ಅದೇ ರೀತಿಯಲ್ಲಿ ಅಂಬೇಡ್ಕರ್ ಅವರು ಸಹ ದಲಿತರ ಉದ್ಧಾರಕ್ಕಾಗಿ ಜೀವವನ್ನು ಕೂಡ ಲೆಕ್ಕಿಸದೆ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದರು.

ದಲಿತ ಸಮುದಾಯದ ಯುವಕರು ದುಶ್ಚಟಗಳಿಗೆ ಬಲಿಯಾಗಿ ಸಂಸಾರ ನೌಕೆಯನ್ನು ಸಾಗಿಸಲು ಹೆಣಗಾಡುತ್ತಿದ್ದಾರೆ. ದುಶ್ಚಟಕ್ಕೆ ಈಡಾದದವರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಪಾತಾಳದತ್ತ ಹೋಗುತ್ತಿದ್ದಾರೆ. ಇದನ್ನು ಅರಿತು ಅವರು ಉತ್ತಮ ಬದುಕನ್ನು ಅಳವಡಿಸಿಕೊಳ್ಳಬೇಕು ಎಂದರು.

ಮಾದಿಗ ಸಮುದಾಯದವರು ಛಲದಿಂದ, ಸ್ವಾಭಿಮಾನದಿಂದ, ಎದೆಗಾರಿಕೆಯಿಂದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯವಾಗಲಿದೆ ಎಂದು ಹೇಳಿದರು.

ದಲಿತ ಮುಖಂಡ ಹೊಳಿಯಪ್ಪ ಮಾತನಾಡಿ, ಅಂಬೇಡ್ಕರ್ ಅವರು ಹಲವು ಕಷ್ಟಗಳ ನಡುವೆಯೇ ದೇಶದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿ ಭಾರತಕ್ಕೆ ಶ್ರೇಷ್ಠ ಸಂವಿಧಾನವನ್ನ ಕೊಡುಗೆಯನ್ನಾಗಿ ನೀಡಿದ್ದಾರೆ.

ಭಾರತ ದೇಶದಲ್ಲಿ ಸಾಕಷ್ಟು ಜಾತಿಗಳ ನಡುವೆ ಸಂಘರ್ಷಗಳು ಎಂದಿಗೂ ಸಹ ನಡೆಯುತ್ತಲೇ ಇವೆ. ಇವುಗಳನ್ನ ನಿಯಂತ್ರಿಸಬೇಕಾದರೆ ಮೊದಲು ಜ್ಞಾನವಂತರಾಗಬೇಕು ಎಂದರು.

ಹಿಂದೂ ಧರ್ಮದಲ್ಲಿ ಹುಟ್ಟಿದಂತಹ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿ ಸಮುದಾಯದವರಿಗೆ ಕೆಲವೊಂದಿಷ್ಟು ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿ ಕೊಟ್ಟಿದ್ದಾರೆ. ಆದರೆ ಇಂದಿಗೂ ಸಹ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ದಲಿತ ಸಮುದಾಯದ ಯುವ ಪೀಳಿಗೆ ಅರ್ಥೈಸಿಕೊಳ್ಳದೆ ಅಡ್ಡದಾರಿ ಹಿಡಿದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಸುಮಾರು 130 ವರ್ಷಗಳ ಇಂದಿನ ಕಾಲಘಟ್ಟದಲ್ಲೇ ಜಾತಿಯ ಅಸಮಾನತೆ ಎಂಬ ವಿಷ ಬೀಜ ದೇಶದೆಲ್ಲೆಡೆ ವ್ಯಾಪಿಸಿ ದಲಿತರಿಗೆ ಜೀವನವೇ ಇಲ್ಲದಂತ ಪರಿಸ್ಥಿತಿ ಉಂಟಾಗಿತ್ತು. ದೇವಸ್ಥಾನಗಳಿಗೆ, ಕೆರೆಗಳಿಗೆ ಮನೆಗಳಿಗೆ, ನಿರ್ಬಂಧಿಸಿದಂತಹ ಸಮುದಾಯವನ್ನು ಅಂಬೇಡ್ಕರ್ ಅವರು ಎಚ್ಚರಿಸುವಂತಹ ಪ್ರಯತ್ನ ಮಾಡಿದ್ದಾರೆ. ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದಲಿತರ ಹೇಳಿಕೆಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾನೂನು ವಿದ್ಯಾರ್ಥಿ ಅನಿಲ್ ಮಾತನಾಡಿ, ಅಂಬೇಡ್ಕರ್ ಅವರ ಜ್ಞಾನ ಇಡೀ ದೇಶಕ್ಕೆ ಗೊತ್ತಿದೆ ಆದರೆ ಅವರ ತತ್ವ ಸಿದ್ಧಾಂತಗಳನ್ನು ಪಾಲನೆ ಮಾಡುವಲ್ಲಿ ಯುವ ಸಮುದಾಯ ಸಂಪೂರ್ಣವಾಗಿ ವಿಫಲವಾಗಿದೆ. ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಅಂಬೇಡ್ಕರ್ ಅವರು ಹಾಗೂ ಬಾಬು ಜಗಜೀವನ್ ರಾಮ್ ರವರು ದಲಿತರ ಉದ್ಧಾರಕ್ಕಾಗಿ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ವಿಶೇಷ ಕ್ರಾಂತಿಯನ್ನು ಸೃಷ್ಟಿಸಿ ದಲಿತರ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಈ ವೇಳೆ ವಕೀಲರಾದ ನಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ವಸಂತ್ ಕುಮಾರ್, ಬೈರಪ್ಪ, ಹನುಮಂತಪ್ಪ, ಚಂದ್ರಪ್ಪ, ನಿಂಗಪ್ಪ, ಸುನಿಲ್, ಅನಿಲ್, ಅಜಯ್, ಚೇತನ್, ಹರೀಶ್, ದರ್ಶನ್, ನಿಂಗರಾಜ್ ರವಿಕುಮಾರ್, ಅಣ್ಣಪ್ಪ, ಹೇಮಂತ್ ಇತರರು ಇದ್ದರು.

Share this article