ಯಾವುದೇ ಶಿಫಾರಸು, ಲಾಬಿಗಳಿಗೆ ಬಲಿಯಾಗದೆ ಎಐಸಿಸಿಯೇ ಮೊದಲ ಬಾರಿಗೆ ಜಿಲ್ಲಾಧ್ಯಕ್ಷರನ್ನು ಹೊಸದಾಗಿ ನೇಮಕ ಮಾಡಿದೆ. ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ವಾಲ್ಮೀಕಿ ಸಮುದಾಯದ ಚಂದ್ರಶೇಖರ ಜುಟ್ಟಲ್ ಆಯ್ಕೆಯಾಗಿದ್ದರೆ, ಮಹಾನಗರ ಜಿಲ್ಲಾಧ್ಯಕ್ಷರಾಗಿ ಲಿಂಗಾಯತ ಸಮುದಾಯದ ಸದಾನಂದ ಡಂಗನವರ ನೇಮಕವಾಗಿದ್ದಾರೆ.
ಹುಬ್ಬಳ್ಳಿ:
ಯಾವುದೇ ಶಿಫಾರಸು, ಲಾಬಿಗಳಿಗೆ ಬಲಿಯಾಗದೆ ಎಐಸಿಸಿಯೇ ಮೊದಲ ಬಾರಿಗೆ ಜಿಲ್ಲಾಧ್ಯಕ್ಷರನ್ನು ಹೊಸದಾಗಿ ನೇಮಕ ಮಾಡಿದೆ. ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ವಾಲ್ಮೀಕಿ ಸಮುದಾಯದ ಚಂದ್ರಶೇಖರ ಜುಟ್ಟಲ್ ಆಯ್ಕೆಯಾಗಿದ್ದರೆ, ಮಹಾನಗರ ಜಿಲ್ಲಾಧ್ಯಕ್ಷರಾಗಿ ಲಿಂಗಾಯತ ಸಮುದಾಯದ ಸದಾನಂದ ಡಂಗನವರ ನೇಮಕವಾಗಿದ್ದಾರೆ.
ಕಳೆದ 30 ವರ್ಷಗಳ ಬಳಿಕ ಮಹಾನಗರ ಜಿಲ್ಲಾಧ್ಯಕ್ಷರನ್ನಾಗಿ ಲಿಂಗಾಯತ ಸಮುದಾಯದವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ಅಂದರೆ ಕಾಲೆಳೆಯುವುದು, ಭಿನ್ನಾಭಿಪ್ರಾಯ, ಗುಂಪುಗಾರಿಕೆ ಸದಾ ಇದ್ದೇ ಇರುತ್ತದೆ ಎಂಬ ಮಾತಿದೆ. ಇದಕ್ಕೆ ಜಿಲ್ಲಾಧ್ಯಕ್ಷರ ನೇಮಕವೂ ಕಾರಣವಾಗುತ್ತಿತ್ತು. ಯಾರು ಶಾಸಕರೋ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತರಾಗಿರುತ್ತಾರೋ ಅಥವಾ ಅತ್ತ ಕೆಪಿಸಿಸಿಯಲ್ಲಿ ಲಾಬಿ ನಡೆಸುವವರನ್ನೆ ಜಿಲ್ಲಾಧ್ಯಕ್ಷರಾಗಿ ನೇಮಕವಾಗುವುದು ಮಾಮೂಲಿಯಾಗಿತ್ತು. ಜತೆಗೆ ಅರ್ಹ ಅದಾರೋ ಇಲ್ವೋ ಎನ್ನುವುದಕ್ಕಿಂತ ಜಾತಿ ಆಧಾರದ ಮೇಲೆಯೇ ಜಿಲ್ಲಾಧ್ಯಕ್ಷರ ನೇಮಕವಾಗುತ್ತಿತ್ತು.
ಆದರೆ, ಇದೇ ಮೊದಲ ಬಾರಿಗೆ ಯಾವುದೇ ಲಾಬಿಯಾಗಲಿ, ಶಿಫಾರಸುಗಳಿಗೆ ಮಣೆ ಹಾಕುವುದು ಬೇಡ. ಕಾರ್ಯಕರ್ತರ ವಿಶ್ವಾಸ ಗಳಿಸಿರುವ, ಸಾರ್ವಜನಿಕ ಸಂಘಟನೆಗಳಲ್ಲಿ ಕೆಲಸ ಮಾಡಿದವರನ್ನು ಎಐಸಿಸಿಯೇ ನೇರವಾಗಿ ನೇಮಕ ಮಾಡಲು ನಿರ್ಧರಿಸಿತ್ತು. ಸಂಘಟನಾ ಅಭಿಯಾನ್‌ವನ್ನೂ ಶುರು ಮಾಡಿತ್ತು. ಪ್ರತಿ ಜಿಲ್ಲೆಗೂ ಎಐಸಿಸಿ ವೀಕ್ಷಕರೇ ಆಗಮಿಸಿ ಕಾರ್ಯಕರ್ತರ, ಸಾರ್ವಜನಿಕ ಸಂಘಟನೆಗಳ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿಗೆ ಸಲ್ಲಿಸಿತ್ತು. ಅದರಲ್ಲಿ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವ ಉದ್ದೇಶ ಹೊಂದಿತ್ತು. ಅದರಂತೆ ಇದೀಗ ಮಹಾನಗರ ಜಿಲ್ಲಾಧ್ಯಕ್ಷರನ್ನಾಗಿ ಸದಾನಂದ ಡಂಗನವರ ಆಯ್ಕೆಯಾಗಿದ್ದರೆ, ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಜುಟ್ಟಲ್ ಆಯ್ಕೆಯಾಗಿದ್ದಾರೆ.
30 ವರ್ಷಗಳ ಬಳಿಕ:
ಸಾಮಾಜಿಕ ನ್ಯಾಯ ಹಾಗೂ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಉದ್ದೇಶದಿಂದ ಮಹಾನಗರ ಜಿಲ್ಲಾಧ್ಯಕ್ಷಗಿರಿ ಮುಸ್ಲಿಂ ಸಮುದಾಯದ ಪಾಲೇ ಆಗುತ್ತಿತ್ತು. ಹಿಂದೆ ಐ.ಜಿ. ಸನದಿ, ಜಬ್ಬಾರಖಾನ್ ಹೊನ್ನಳ್ಳಿ, ಎ.ಎಂ. ಹಿಂಡಸಗೇರಿ ಅಧ್ಯಕ್ಷರಾಗಿದ್ದರು. ಬಳಿಕ 9 ವರ್ಷಗಳಿಂದ ಅಲ್ತಾಫ್ ಹಳ್ಳೂರ ಅಧ್ಯಕ್ಷರಾಗಿದ್ದರು. ಕಳೆದ 30-35 ವರ್ಷಗಳಿಗೂ ಅಧಿಕ ಕಾಲದಿಂದ ಮುಸ್ಲಿಂ ಸಮುದಾಯದವರೇ ಅಧ್ಯಕ್ಷರಾಗಿರುತ್ತಿದ್ದರು. ಇಷ್ಟು ವರ್ಷಗಳ ಬಳಿಕ ಇದೀಗ ಡಂಗನವರ ಅವರನ್ನು ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿ ಇದ್ದಾಗಿನಿಂದಲೇ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವ ಡಂಗನವರ, ರಾಜ್ಯ ಯುವ ಕಾಂಗ್ರೆಸ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದವರು. ಪಕ್ಷದ ನಿಷ್ಠಾವಂತರೆನಿಸಿರುವ ಡಂಗನವರ ಇದೀಗ ಜಿಲ್ಲಾಧ್ಯಕ್ಷರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಜುಟ್ಟಲ್:
ಕುಂದಗೋಳ ಕ್ಷೇತ್ರದ ಮಾಜಿ ಶಾಸಕ ಗೋವಿಂದ ಜುಟ್ಟಲ್ ಅವರ ಪುತ್ರರಾಗಿರುವ ಚಂದ್ರಶೇಖರ ಜುಟ್ಟಲ್, ಕಾಂಗ್ರೆಸ್‌ನ ನಿಷ್ಠಾವಂತರೆನಿಸಿಕೊಂಡವರು. ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಜುಟ್ಟಲ್, ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ದುಡಿದವರು. ಇದೀಗ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಭಿನ್ನಮತ, ಗುಂಪುಗಾರಿಕೆ ಇಲ್ಲದಂತೆ ಪಕ್ಷ ಸಂಘಟಿಸಬೇಕು ಎಂಬ ಉದ್ದೇಶದಿಂದ ಎಐಸಿಸಿ ಯಾವುದೇ ಲಾಬಿಗೆ ಮಣಿಯದೇ ಜಿಲ್ಲಾಧ್ಯಕ್ಷರನ್ನು ನೇಮಿಸಿದೆ. ಇವರ ನೇತೃತ್ವದಲ್ಲಾದರೂ ಪಕ್ಷ ಬೇರು ಮಟ್ಟದಿಂದ ಸಂಘಟನೆಯಾಗಬೇಕು ಎಂಬುದು ಕಾರ್ಯಕರ್ತರು, ಕೆಪಿಸಿಸಿ, ಎಐಸಿಸಿ ಅಭಿಲಾಷೆ. ಏನಾಗುತ್ತದೆಯೋ ಕಾಯ್ದು ನೋಡಬೇಕಷ್ಟೇ!ಎಐಸಿಸಿ ನನ್ನ ಮೇಲೆ ನಂಬಿಕೆ ಇಟ್ಟು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ.
ಸದಾನಂದ ಡಂಗನವರ, ಜಿಲ್ಲಾಧ್ಯಕ್ಷ ಹು-ಧಾ ಮಹಾನಗರಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಗ್ರಾಮೀಣ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಸ್ಥಾನಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ಪಕ್ಷ ಸಂಘಟನೆ ಮಾಡುತ್ತೇವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.