ಕನ್ನಡಪ್ರಭ ವಾರ್ತೆ ಗದಗ
ನಗರದ ಗಾಂಧಿ ಸರ್ಕಲ್‌ನಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ನಗರ ಮಂಡಲ ವತಿಯಿಂದ ತುರ್ತು ಪರಿಸ್ಥಿಯ ಕರಾಳ ದಿನವನ್ನು ಕಾರ್ಯಕರ್ತರು ಕೈಗೆ ಕಪ್ಪು ಬಟ್ಟೆ ಧರಿಸಿ, ಗೊಡೆಗಳಿಗೆ ಬಿತ್ತಿ ಪತ್ರಗಳನ್ನ ಅಂಟಿಸಿ ಜನರಿಗೆ ತಿಳಿ ಹೇಳುವ ಮೂಲಕ ಆಚರಿಸಿದರು.ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಅಂದಿನ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನದ ವಿರುದ್ಧವಾಗಿ ಏಕಪಕ್ಷಿಯ ನಿರ್ಣಯವನ್ನು ತೆಗೆದುಕೊಂಡು 21 ತಿಂಗಳ ವರೆಗೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಇದರ ವಿರುದ್ಧ ಹೋರಾಡುವವರನ್ನು ಜೈಲಿಗೆ ಕಳಿಸುವ ಹೀನ ಕೃತ್ಯ ಮಾಡಿರುವ ಅಂದಿನ ಸರ್ವಾಧಿಕಾರಿ ಪ್ರಧಾನಿಮಂತ್ರಿ ಇಂದಿರಾ ಗಾಂಧಿ ದೇಶದ ಹೆಸರನ್ನು ಕೆಡಿಸುವ ಕೆಲಸ ಮಾಡಿದ್ದಾರೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ತುರ್ತು ಪರಿಸ್ಥಿತಿಯ ವಿರುದ್ಧ ಪ್ರತಿಭಟಿಸಿದ್ದು, ಇಂದು ಅದೇ ಪಕ್ಷದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರಿಗೆ, ಕಾರ್ಯಕರ್ತರಿಗೆ ಇಲ್ಲ. ಸಂವಿಧಾನವನ್ನು ನರೇಂದ್ರ ಮೋದಿಯವರು ಗೌರವಿಸುವುದರೊಂದಿಗೆ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ದೇಶದ ಸೇವೆ ಮಾಡುತ್ತಿದ್ದಾರೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಕನಿಷ್ಠ 100-120 ಬಾರಿ ಕಾಂಗ್ರೆಸ್ ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ಇಂದಿನ ಕಾಂಗ್ರೆಸ್ ಪಕ್ಷ ಎಂದಿಲ್ಲದ ಪ್ರೇಮವನ್ನು ಸಂವಿಧಾನದ ಮೇಲೆ ತೋರುತ್ತಿದೆ. ದೇಶವನ್ನು 60 ವರ್ಷ ಆಳಿದ ಏಕೈಕ ಪಕ್ಷ ಕಾಂಗ್ರೆಸ್. ದೇಶದ ಯಾವೊಂದು ಅಭಿವೃದ್ಧಿ ಕಾರ್ಯಕ್ಕಾಗಲಿ, ಬಡಜನರ ಹಿತ ಕಾಯುವುದಾಗಲಿ, ದೇಶದ ಒಳ್ಳೆಯ ಚಿಂತನೆಯನ್ನೂ ಮಾಡದೇ ಕೇವಲ ಅಧಿಕಾರದಾಹಕ್ಕಾಗಿ ವಿನಾಕಾರಣ ಆಡಳಿತ ಪಕ್ಷದ ಮೇಲೆ ದೊಷಿಸುವ ಆರೋಪವನ್ನು ಮಾಡುತ್ತಿದೆ. ಮುಂದಿನ ದಿನಮಾನದಲ್ಲಿ ಕಾಂಗ್ರೆಸ್‌ಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದರು.
ಈ ವೇಳೆ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೊಷ ಅಕ್ಕಿ, ನಗರ ಅಧ್ಯಕ್ಷ ವೆಂಕಟೇಶ ಹಬೀಬ, ನವೀನ ಕೊಟೆಕಲ್, ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ, ಪ್ರಮುಖರಾದ ಶ್ರೀಪತಿ ಉಡುಪಿ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸುಧೀರ ಕಾಟಿಗರ, ಗಂಗಾಧರ ಹಬೀಬ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮೀ ಮಾನ್ವಿ, ಇರ್ಷಾದ ಮಾನ್ವಿ, ಅಶೋಕ ಸಂಕಣ್ಣವರ, ಸುರೇಶ ಚಿತ್ತರಗಿ, ಅಶೋಕ ಕುಡತಿನಿ, ಲಕ್ಷ್ಮೀ ಶಂಕರ ಕಾಕಿ, ವಸಂತ ಹಬೀಬ, ಕೇಶವ ಕೊಟ್ನಿಕಲ್, ಕಾರ್ತಿಕ್ ಶಿಗ್ಲಿಮಠ, ಜಯಶ್ರೀ ಅಣ್ಣಿಗೇರಿ, ಅವಿನಾಶ ಹೊನಗುಡಿ, ಗಣೇಶ ಪರಾಪೂರ, ಪದ್ಮಾ ಮುತ್ತಲದಿನ್ನಿ, ಚಂದ್ರು ತಡಸದ, ಮಂಜು ಬಾಗೂರ ಹಾಗೂ ಪ್ರಮುಖರು, ಕಾರ್ಯಕರ್ತರು ಇದ್ದರು.