ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನೀಡಿರುವ ವರದಿ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಫೆ. 4ರಂದು ವಿಚಾರಣೆ ನಡೆದು ಧರ್ಮಸ್ಥಳ ಪರ ವಕೀಲರು ತಾವು ಪ್ರಕರಣದಲ್ಲಿ ಸಂತ್ರಸ್ತರಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಲು ತಮಗೂ ಅವಕಾಶ ನೀಡಬೇಕು ಎಂದು ವಾದ ಮಂಡಿಸಿದರು. ವಿಚಾರಣೆ ಆಲಿಸಿದ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.13ಕ್ಕೆ ಮುಂದೂಡಿದೆ.
ಎಸ್ಐಟಿ ಪರ ವಕೀಲರು ಧರ್ಮಸ್ಥಳದವರನ್ನು ಪ್ರಕರಣದಲ್ಲಿ ಭಾಗಿಯಾಗಲು ಅವಕಾಶ ಕೇಳಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಿರುವುದಾಗಿ ತಿಳಿದುಬಂದಿದೆ.ಫೆ.13ಕ್ಕೆ ವಿಚಾರಣೆ ಮುಂದಕ್ಕೆ; ಈಗಾಗಲೇ ಮಹೇಶ್ ಶೆಟ್ಟಿ ಹಾಗೂ ಇತರರ ಪರವಾಗಿ ಹಾಜರಾಗುತ್ತಿರುವ ನ್ಯಾಯವಾದಿಗಳು ಧರ್ಮಸ್ಥಳದವರನ್ನು ಈ ಪ್ರಕರಣದಲ್ಲಿ ಕಕ್ಷಿದಾರರಾಗಿಸುವುದಕ್ಕೆ ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದಾರೆ. ನ್ಯಾಯಾಲಯ ವಿಚಾರಣೆಯನ್ನು ಫೆ.13ಕ್ಕೆ ಮುಂದೂಡಿದ್ದು, ಅಂದು ಮಹೇಶ್ ಶೆಟ್ಟಿ ಪರ ವಕೀಲರು ತಮ್ಮ ವಾದ ಮಂಡಿಸಲಿದ್ದಾರೆ. ಎಸ್ಐಟಿ ಪರ ವಕೀಲರೂ ಆಕ್ಷೇಪಣೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವರೂ ಮುಂದೆ ಈ ಬಗ್ಗೆ ವಾದ ಮಂಡಿಸಲಿದ್ದಾರೆ.ನ್ಯಾಯಾಲಯಕ್ಕೆ ಹಾಜರಾದ ಚಿನ್ನಯ್ಯ:ಸಾಕ್ಷಿ ದೂರುದಾರನಾಗಿ ಬಂದು ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಚಿನ್ನಯ್ಯ ಹಾಗೂ ಆತನ ಪತ್ನಿ ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಧರ್ಮಸ್ಥಳದವರು ಸಲ್ಲಿಸಿರುವ ಅರ್ಜಿಯಂತೆ ಅವರನ್ನು ಪ್ರಕರಣದಲ್ಲಿ ಭಾಗಿಗಳಾಗಲು ಅವಕಾಶ ನೀಡುವುದಕ್ಕೆ ತಮ್ಮ ಆಕ್ಷೇಪಣೆ ಇಲ್ಲ ಎಂದು ನ್ಯಾಯಾಲಯದ ಮುಂದೆ ಚಿನ್ನಯ್ಯ ನ ಪರ ವಕೀಲರು ತಿಳಿಸಿರುವುದಾಗಿ ತಿಳಿದುಬಂದಿದೆ.