ಕನ್ನಡಪ್ರಭ ವಾರ್ತೆ ಬೆಂಗಳೂರು
ತಮ್ಮ ಪ್ರಿಯತಮೆಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ ಎಂಬ ಕಾರಣಕ್ಕೆ ತಮ್ಮದೇ ಅಭಿಮಾನಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆಗೈದು ರಾಜಕಾಲುವೆಗೆ ಎಸೆದ ಆರೋಪದ ಮೇರೆಗೆ ಕನ್ನಡ ಚಲನಚಿತ್ರ ರಂಗದ ‘ಚಾಲೆಜಿಂಗ್ ಸ್ಟಾರ್’ ನಟ ದರ್ಶನ್ ತೂಗುದೀಪ ಹಾಗೂ ಅವರ ಪ್ರಿಯತಮೆ ಸೇರಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಚಿತ್ರದುರ್ಗದ ಔಷಧಿ ಮಾರಾಟ ಅಂಗಡಿ ಕೆಲಸಗಾರ ರೇಣುಕಾಸ್ವಾಮಿ (34) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ದರ್ಶನ್, ಅವರ ಗೆಳತಿ ಪವಿತ್ರಾಗೌಡ, ಸಹಚರರಾದ ಪಟ್ಟಣಗೆರೆ ವಿನಯ್, ಪವನ್, ಪ್ರದೋಶ್, ನಂದೀಶ್, ಕೇಶವ ಮೂರ್ತಿ, ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ದರ್ಶನ್ ಕಾರು ಚಾಲಕ ಲಕ್ಷ್ಮಣ್, ದೀಪಕ್ ಕುಮಾರ್, ನಾಗರಾಜ್, ನಿಖಿಲ್, ಕಾರ್ತಿಕ್ ಬಂಧನಕ್ಕೊಳಗಾಗಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ 6 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಾಗಡಿ ರಸ್ತೆಯ ಸುಮನಹಳ್ಳಿ ಸಮೀಪದ ರಾಜಕಾಲುವೆಯಲ್ಲಿ ಭಾನುವಾರ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಯಿತು. ಈ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆಗಿಳಿದಾಗ ಕೊಲೆ ಕೃತ್ಯ ಬಯಲಾಗಿದೆ.
ಮೂರು ದಿನಗಳ ಹಿಂದೆ ತನ್ನ ಗೆಳತಿಗೆ ಇನ್‌ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಸಹಚರರ ಮೂಲಕ ಅಪಹರಿಸಿ ಬೆಂಗಳೂರಿಗೆ ಕರೆತಂದು ದರ್ಶನ್ ಹತ್ಯೆಗೈದಿದ್ದಾರೆ. ಈ ಬಗ್ಗೆ ತಾಂತ್ರಿಕ ಮಾಹಿತಿ ಆಧರಿಸಿ ದರ್ಶನ್ ಮತ್ತಿತರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೊಂದು ಸಹಚರರ ಶರಣಾಗತಿ ಮಾಡಿಸಿದ್ದ ದರ್ಶನ್:
ಹಲವು ವರ್ಷಗಳಿಂದ ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ ಪ್ರೀತಿಯಲ್ಲಿದ್ದು, ಈ ಪ್ರೀತಿ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಬಹಿರಂಗಪಡಿಸಿದ್ದಳು. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರೇಮದ ವಿಷಯವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಪವಿತ್ರ ಮಧ್ಯೆ ಪೋಸ್ಟ್ ವಾರ್ ನಡೆದಿತ್ತು. ಈ ಜಗಳವನ್ನು ಮುಂದಿಟ್ಟು ಪವಿತ್ರಾಗೌಡ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕೆಲವರು ಕಾಮೆಂಟ್ ಕೂಡ ಮಾಡಿದ್ದರು.ಅದೇ ರೀತಿ ಇನ್‌ಸ್ಟಾಗ್ರಾಂನಲ್ಲಿ ಪವಿತ್ರಾಗೌಡಳ ಖಾತೆಗೆ ಟ್ಯಾಗ್ ಮಾಡಿ ದರ್ಶನ್ ಅಭಿಮಾನಿಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೂಡ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುತ್ತಿದ್ದ. ಈ ಕಾಮೆಂಟ್‌ಗಳಿಗೆ ಆಕೆ ಆಕ್ಷೇಪಿಸಿದ್ದಳು. ಹೀಗಿದ್ದರೂ ಸಹ ಆತ ಕಾಮೆಂಟ್ ಮುಂದುವರೆಸಿದ್ದ. ಇದನ್ನು ದರ್ಶನ್ ಗಮನಕ್ಕೆ ಪವಿತ್ರಾ ತಂದಿದ್ದಳು.
ಈ ವಿಚಾರ ತಿಳಿದು ಕೆರಳಿದ ದರ್ಶನ್, ತಮ್ಮ ಅಭಿಮಾನಿ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಘವೇಂದ್ರ ತಂಡಕ್ಕೆ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು. ಬಳಿಕ ಚಿತ್ರದುರ್ಗದಲ್ಲಿ ಶನಿವಾರ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಬೆಂಗಳೂರಿಗೆ ದರ್ಶನ್ ಸಹಚರರು ಕರೆತಂದಿದ್ದರು.ಆನಂತರ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪಟ್ಟಣಗೆರೆ ಗ್ರಾಮದಲ್ಲಿ ದರ್ಶನ್ ಸ್ನೇಹಿತ ದೀಪಕ್ ಪಾಲುದಾರಿಕೆಯ ಶೆಡ್‌ಗೆ (ಸಾಲ ತೀರಿಸದ ವಾಹನಗಳ ಜಪ್ತಿ ಮಾಡಿ ನಿಲ್ಲಿಸುವ ಜಾಗ) ರೇಣುಕಾಸ್ವಾಮಿಯನ್ನು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕರೆದೊಯ್ದಿದ್ದರು. ಆ ಶೆಡ್‌ಗೆ ಪವಿತ್ರಾ ಜತೆ ದರ್ಶನ್ ತೆರಳಿದ್ದರು. ಬಳಿಕ ಐದಾರು ತಾಸು ನಿರಂತರವಾಗಿ ರೇಣುಕ ಮೇಲೆ ಮನಬಂದಂತೆ ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿತ್ತು. ಈ ಚಿತ್ರಹಿಂಸೆ ತಾಳಲಾರದೆ ರಾತ್ರಿ 12 ಗಂಟೆಗೆ ಸುಮಾರಿಗೆ ಆತ ಕೊನೆಯುಸಿರೆಳೆದಿದ್ದ.
ಬಳಿಕ ಸುಮನಹಳ್ಳಿ ಸಮೀಪದ ರಾಜಕಾಲುವೆಗೆ ಮೃತದೇಹವನ್ನುಸ್ಕಾರ್ಪಿಯೋ ಕಾರಿನಲ್ಲಿ ತಂದು ಎಸೆದು ಆರೋಪಿಗಳು ತೆರಳಿದ್ದರು. ರಾಜಕಾಲುವೆ ಬಳಿ ಭಾನುವಾರ ಬೆಳಗ್ಗೆ ಅಪರಿಚಿತ ಮೃತದೇಹ ಕಂಡು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಸುಮನಹಳ್ಳಿ ಅನುಗ್ರಹ ಅಪಾರ್ಟ್‌ಮೆಂಟ್ ಕಾವಲುಗಾರ ಮಾಹಿತಿ ನೀಡಿದ್ದರು. ಈ ಅಪರಿಚಿತ ಮೃತದೇಹ ಪತ್ತೆಗೆ ಪೊಲೀಸರು ಕಾರ್ಯಾಚರಣೆಗಿಳಿದಾಗ ಕೊಲೆ ರಹಸ್ಯ ಬಯಲಾಗಿದೆ.ಸಿಸಿಟಿವಿ ಕ್ಯಾಮೆರಾ ಹೇಳಿದ ಸತ್ಯ:
ಮೃತದೇಹ ಮೇಲಿನ ಗಾಯದ ಗುರುತುಗಳನ್ನು ಗಮನಿಸಿದ ಪೊಲೀಸರು, ಈ ವ್ಯಕ್ತಿಯನ್ನು ಬೇರೆಡೆ ಹತ್ಯೆಗೈದು ಬಳಿಕ ಇಲ್ಲಿಗೆ ತಂದು ಎಸೆದಿದ್ದಾರೆ ಎಂದು ಶಂಕಿಸಿದ್ದಾರೆ. ಅಂತೆಯೇ ಕೂಡಲೇ ಮೃತದೇಹ ಪತ್ತೆಯಾದ ಸ್ಥಳದ ಸುತ್ತಮುತ್ತಲಿನ ಕಟ್ಟಡಗಳ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸಿದರು. ಆಗ ಅನುಗ್ರಹ ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ನಸುಕಿನ 4 ಗಂಟೆ ಸುಮಾರಿಗೆ ಸ್ಕಾರ್ಪಿಯೋ ಕಾರು ಓಡಾಟ ಪತ್ತೆಯಾಗಿದೆ. ಪೊಲೀಸರು ಈ ಸ್ಕಾರ್ಪಿಯೋ ಬೆನ್ನಹತ್ತಿದ್ದಾರೆ ಎಂಬ ವಿಚಾರ ತಿಳಿದು ಬಂಧನ ಭೀತಿಗೊಳಗಾದ ದರ್ಶನ್, ತಕ್ಷಣವೇ ತನ್ನ ನಾಲ್ವರು ಸಹಚರರನ್ನು ಪೊಲೀಸರಿಗೆ ಸ್ವಯಂ ಶರಣಾಗತಿ ಮಾಡಿಸಿದ್ದಾರೆ.ಹೀಗೆ ಏಕಾಏಕಿ ತಾವಾಗಿ ಠಾಣೆಗೆ ಬಂದು ಶರಣಾದ ಆರೋಪಿಗಳ ನಡವಳಿಕೆ ಬಗ್ಗೆ ಗುಮಾನಿಗೊಂಡ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆ ನಾಲ್ವರನ್ನು ತೀವ್ರ ಪ್ರಶ್ನಿಸಿದಾಗ ಮತ್ತೆ 7 ಮಂದಿ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆ 7 ಮಂದಿಯನ್ನು ಸೆರೆಹಿಡಿದು ವಿಚಾರಿಸಿದಾಗ ಅಂತಿಮವಾಗಿ ದರ್ಶನ್ ಹಾಗೂ ಅವರ ಗೆಳತಿ ಹೆಸರು ಬಾಯ್ಬಿಟ್ಟಿದ್ದಾರೆ.
ಪೊಲೀಸರಿಗೆ ಕಾದಿದ್ದ ದರ್ಶನ್:ಕೊಲೆ ಪ್ರಕರಣದಲ್ಲಿ ತನ್ನ ಸಹಚರರ ಬಂಧನ ವಿಚಾರ ತಿಳಿದ ಕೂಡಲೇ ತಾವು ಪೊಲೀಸರ ಅತಿಥಿಯಾಗುವುದು ದರ್ಶನ್ ಅವರಿಗೆ ಖಚಿತವಾಗಿದೆ. ಹೀಗಾಗಿ ಮೈಸೂರಿನ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದ ವಿಚಾರ ತಿಳಿದು ಹೋಟೆಲ್‌ಗೆ ದರ್ಶನ್ ಬಂಧಿಸಲು ಪೊಲೀಸರು ತೆರಳಿದ್ದಾರೆ. ಆಗ ಯಾವುದೇ ರೀತಿ ಪ್ರತಿರೋಧ ಅಥವಾ ಕೂಗಾಟ ಮಾಡದೆ ಸುಮ್ಮನೆ ಹೋಟೆಲ್ ರೂಂನಿಂದ ಬಂದು ಪೊಲೀಸರ ಜೀಪ್ ಹತ್ತಿದ್ದಾರೆ. ಅಷ್ಟರಲ್ಲಿ ಬೆಂಗಳೂರಿನ ಆರ್.ಆರ್.ನಗರದಲ್ಲಿದ್ದ ಪವಿತ್ರಾಗೌಡಳನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ನಂತರ ಎಲ್ಲ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದು ಪ್ರಾಥಮಿಕ ಹಂತದ ವಿಚಾರಣೆ ನಡೆಸಿದ ಪೊಲೀಸರು, ಸಂಜೆ 5.30 ಗಂಟೆಗೆ ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ನಂತರ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆಗ ಪೊಲೀಸರು ಹೆಚ್ಚಿನ ತನಿಖೆಗೆ ವಶಕ್ಕೆ ನೀಡುವಂತೆ ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಗಳಿಗೆ 6 ದಿನಗಳು ಪೊಲೀಸ್ ಕಸ್ಟಡಿ ನೀಡಿದೆ.ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಪವಿತ್ರಾಗೌಡ ಹೊರತುಪಡಿಸಿ ಇನ್ನುಳಿದ 11 ಮಂದಿಯನ್ನು ಕರೆತಂದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇತ್ತ ಮಡಿವಾಳದ ಮಹಿಳಾ ಸ್ವಾಂತನ ಕೇಂದ್ರಕ್ಕೆ ಪವಿತ್ರಾಗೌಡಳನ್ನು ಪೊಲೀಸರು ಕಳುಹಿಸಿದ್ದು, ಬುಧವಾರ ಬೆಳಗ್ಗೆ ಆಕೆಯನ್ನು ಮತ್ತೆ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.