ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ವಹಿಸದೆ ಕಡೆಗಣಿಸಿರುವುದರಿಂದ ರೈತರ ಬೆಳೆಗಳು ಕಣ್ಣಮುಂದೆಯೇ ನಾಶವಾಗುತ್ತಿವೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಟಿ.ಎ.ರಾಮೇಗೌಡ, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿದ್ಯುತ್ ಸಮರ್ಪಕವಾಗಿ ಸರಬರಾಜು ಇಲ್ಲದೆ ಅಸಮರ್ಪಕವಾಗಿ ಪೂರೈಸುತ್ತಿರುವುದರಿಂದ ಅನ್ನದಾತರು ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ಕಣ್ಣ ಮುಂದೆಯೇ ಬೆಳೆಗಳು ಒಣಗುವಂತಾಗಿದೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶವ್ಯಕ್ತಪಡಿಸಿದರು.ಸಸ್ಪೆಂಡ್ ಆದವರ ಮರು ನೇಮಕ
ಪಟ್ಟಣದಲ್ಲಿ ಬೆಸ್ಕಾಂ ಶಾಖೆ ೩ರಲ್ಲಿ ಸಿಬ್ಬಂದಿ ಇಲ್ಲ ಎಂದು ಬೂದಿಕೋಟೆ ಶಾಖೆಯ ಲೈನ್ ಮ್ಯಾನ್‌ಗಳಾದ ಡಿ.ಎಸ್.ಶಶಿಕುಮಾರ್ ಮತ್ತು ಮಧುರವರನ್ನು ವರ್ಗವಣೆ ಮಾಡಲಾಗಿದೆ. ಆದರೆ ಅವರು ಅಮಾನತುಗೊಂಡವರು ಮತ್ತೆ ಹೇಗೆ ಅವರನ್ನು ಅದೇ ಸ್ಥಳಕ್ಕೆ ವರ್ಗಾಯಿಸಿದ್ದೀರಿ ಎಂದು ಪ್ರಶ್ನಿಸಿದರು.ವಿದ್ಯುತ್ ಲೋಡ್ ಶೆಡ್ಡಿಂಗ್ ಬಗ್ಗೆ ಜೆಇ ಅಮರೇಶ್‌ರನ್ನು ರೈತರು ಸಂಪರ್ಕ ಮಾಡಿದರೆ ಅವರು ಯಾರ ಕೈಗೂ ಸಿಗುವುದಿಲ್ಲ. ಟಿ.ಸಿ ಸ್ಥಳಾಂತರ ಸೇರಿದಂತೆ ಪ್ರತಿಯೊಂದು ವಿಷಯಕ್ಕೆ ಲಂಚವಿಲ್ಲದೆ ರೈತರ ಕೆಲಸಗಳನ್ನು ಮಾಡುವುದಿಲ್ಲ. ಲೈನ್‌ಮ್ಯಾನ್ ಈಶ್ವರಪ್ಪ ತನ್ನ ಸಹೋದ್ಯೋಗಿಗಳ ಮೇಲೆ ದುರ್ನಡತೆ ಮಾಡಿದರೂ ಅವರ ಮೇಲೆ ಕ್ರಮವಹಿಸದೆ ಎಇಇ ರವರು ತಾರತಮ್ಯ ಮಾಡುತ್ತಿದ್ದಾರೆ. ಎಇಇಗೆ ನೀಡಿರುವ ವಾಹನವನ್ನು ಬಾಡಿಗೆಗೆ ಉಪಯೋಗಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಜೆಇ ವಿರುದ್ಧ ಕ್ರಮಕ್ಕೆ ಒತ್ತಾಯ
ಜೆಇ ಅಮರೇಶ್ ರವರು ಅಕ್ರಮಗಳಲ್ಲಿ ತೊಡಗಿದ್ದರೂ ಅವರ ವಿರುದ್ದ ಅನೇಕ ದೂರುಗಳು ಬಂದಿದ್ದರೂ ಅವರ ವಿರುದ್ದ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದರ ಹಿಂದೆ ಅನುಮಾಗಳು ಮೂಡುತ್ತಿವೆ. ರೈತರ ಸಮಸ್ಯೆ ಪರಿಹರಿಸಲು ಮೇಲಧಿಕಾರಿಗಳು ಕ್ರಮವಹಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.ಸ್ಥಳಕ್ಕೆ ಬಂದ ಇಇ ಈ ಬಗ್ಗೆ ತನಿಖೆ ಮಾಡಿ ಸೂಕ್ತಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ ನಾರಾಯಣಪ್ಪ,ಚಲಪತಿ,ದೇವರಾಜ,ನಾಗೇಶ್,ಗೋವಿಂದಪ್ಪ,ಅಶ್ವಥಪ್ಪ,ಮಂಜುನಾಥ್,ಮುನಿವೆಂಕಟಪ್ಪ ಮತ್ತಿತರರು ಇದ್ದರು.