ದರ್ಶನ್‌ ಕೇಸ್‌: ಮೈಸೂರು ಹೋಟೆಲ್‌ನಲ್ಲಿ ಪೊಲೀಸರ ಮಹಜರ್

KannadaprabhaNewsNetwork |  
Published : Jun 19, 2024, 01:01 AM IST
5 | Kannada Prabha

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಪೈಕಿ ನಾಗರಾಜ್ ಅ.ನಾಗ ಹಾಗೂ ಲಕ್ಷ್ಮಣ್ ರನ್ನು ಬೆಂಗಳೂರು ಪೊಲೀಸರು ಮೈಸೂರಿಗೆ ಕರೆತಂದು ಮಂಗಳವಾರ ಸ್ಥಳ ಮಹಜರು ನಡೆಸಿದರು.

- ರ್‍ಯಾಡಿಸನ್‌ ಬ್ಲೂ ಹೋಟೆಲ್‌ ಮತ್ತಿತರ ಕಡೆ ಸ್ಥಳ ಪರಿಶೀಲನೆ

- ಹೋಟೆಲ್‌ನಲ್ಲಿ ದರ್ಶನ್‌ ಭೇಟಿಯಾದವರ ಕುರಿತೂ ವಿಚಾರಣೆ

ಕನ್ನಡಪ್ರಭ ವಾರ್ತೆ ಮೈಸೂರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಪೈಕಿ ನಾಗರಾಜ್ ಅ.ನಾಗ ಹಾಗೂ ಲಕ್ಷ್ಮಣ್ ರನ್ನು ಬೆಂಗಳೂರು ಪೊಲೀಸರು ಮೈಸೂರಿಗೆ ಕರೆತಂದು ಮಂಗಳವಾರ ಸ್ಥಳ ಮಹಜರು ನಡೆಸಿದರು. ರ್‍ಯಾಡಿಸನ್ ಬ್ಲೂ ಹೋಟೆಲ್‌ಗೆ ಮಧ್ಯಾಹ್ನ ಭೇಟಿ ನೀಡಿದ ಪೊಲೀಸರು, ಸತತ ಎರಡು ಗಂಟೆಗಳ ಕಾಲ ಇಬ್ಬರು ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಿದರು. ಹೋಟೆಲ್ ನಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದರು. ಕೊಲೆಯಾದ ಬಳಿಕ ಹೋಟೆಲ್ ನಲ್ಲಿ ನಡೆಸಿದ ಚರ್ಚೆ ಮತ್ತು ಮಾತುಕತೆ ಬಗ್ಗೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದರಲ್ಲದೆ ಆರೋಪಿಗಳಿಂದ ಮಾಹಿತಿ ಪಡೆದರು. ಜತೆಗೆ ಅಂದು ಕಾರ್ಯ ನಿರ್ವಹಿಸಿದ್ದ ಹೋಟೆಲ್ ಸಿಬ್ಬಂದಿಯನ್ನೂ ವಿಚಾರಿಸಿದರು.ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ದರ್ಶನ್ ಮೈಸೂರಿಗೆ ಆಗಮಿಸಿ ರ್‍ಯಾಡಿಸನ್ ಬ್ಲ್ಯೂ ಹೋಟೆಲ್ ನಲ್ಲಿ ಉಳಿದುಕೊಂಡು ಲಲಿತಮಹಲ್ ಹೋಟೆಲಿನಲ್ಲಿ ನಡೆಯುತ್ತಿರುವ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ದರ್ಶನ್ ಈ ಹೋಟೆಲ್ ನಿಂದ ಮೈಸೂರಿನ ಕುವೆಂಪುನಗರದ ಗೋಲ್ಡ್ ಜಿಮ್ ಗೆ ತೆರಳಿ ಅಲ್ಲಿ ವರ್ಕೌಟ್ ಮಾಡಿ ನಂತರ ರ್‍ಯಾಡಿಸನ್ ಬ್ಲೂ ಹೋಟೆಲ್ ಗೆ ಆಗಮಿಸುವ ಮಾರ್ಗ ಮಧ್ಯೆ ಬೆಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ರ ಪರ್ಸನಲ್ ಮ್ಯಾನೇಜರ್ ನಾಗರಾಜು ಹಾಗೂ ಕಾರು ಚಾಲಕ ಲಕ್ಷ್ಮಣ್ ರನ್ನು ಬೆಂಗಳೂರು ಪೊಲೀಸರು ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್ ಗೆ ಮಧ್ಯಾಹ್ನದ ವೇಳೆ ಕರೆತಂದು ವಿಚಾರಣೆ ನಡೆಸಿದರು.ಜೂ.8ರಂದು ಬೆಂಗಳೂರಿನ ಶೆಡ್ ನಲ್ಲಿ ಕೊಲೆಯಾದ ಬಳಿಕ ನಟ ದರ್ಶನ್ ತನ್ನ ಸಹಚರರೊಂದಿಗೆ ಮೈಸೂರಿಗೆ ಬಂದಿದ್ದು, ಹೋಟೆಲ್ ನಲ್ಲಿ ತಂಗಿದ್ದರು. ಕೊಲೆಗೂ ಮುನ್ನ ಹೋಟೆಲ್ ನಲ್ಲಿ ದರ್ಶನ್ ಯಾರನ್ನು ಭೇಟಿಯಾದರು? ಜತೆಯಲ್ಲಿ ಯಾರಿದ್ದರು? ಕೊಲೆಯಾದ ಬಳಿಕ ಮತ್ತೆ ಮೈಸೂರಿಗೆ ಬಂದ ಮೇಲೆ ಹೋಟೆಲ್ ಕೋಣೆಯಲ್ಲಿ ದರ್ಶನ್ ಯಾರೊಂದಿಗೆ ಮಾತುಕತೆ ನಡೆಸಿದರು? ಮತ್ತಿತರ ಮಾಹಿತಿಯನ್ನು ಮಹಜರು ವೇಳೆ ಪೊಲೀಸರು ಕಲೆ ಹಾಕಿದರು.

ನಂತರ ದರ್ಶನ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಹೋಟೆಲ್ ಲಲಿತ ಮಹಲ್, ನಂತರ ಮೈಸೂರು ಟಿ.ನರಸೀಪುರ ರಸ್ತೆಯ ದರ್ಶನ ಫಾರಂ ಹೌಸಿಗೂ ಆರೋಪಿಗಳನ್ನು ಕರೆತಂದು ಸ್ಥಳ ಪರಿಶೀಲಿಸಿದರು.

ಸ್ಥಳ ಮಹಜರ್‌ಗೆ ನಟ ದರ್ಶನ್‌ರನ್ನೂ ಕರೆದುಕೊಂಡು ಬರಲಾಗಿದೆ ಎಂದು ಅವರ ನೂರಾರು ಅಭಿಮಾನಿಗಳು ಹೋಟೆಲ್ ಸುತ್ತ ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು. ಸತತ ಎರಡು ಗಂಟೆ ಮಹಜರು ಬಳಿಕ ವ್ಯಾನಿನಲ್ಲಿ ಆರೋಪಿಗಳನ್ನು ವಾಪಸ್‌ ಬೆಂಗಳೂರಿಗೆ ಕರೆದೊಯ್ಯಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ