ಕನ್ನಡಪ್ರಭ ವಾರ್ತೆ ಮೈಸೂರು
ಅಂಬೇಡ್ಕರ್ ಭವನ ಕಾಮಗಾರಿ ಆರಂಭವಾಗಿ 13 ವರ್ಷಗಳೇ ಕಳೆದರು ಅಪೂರ್ಣಗೊಂಡು ಅರ್ಧಕ್ಕೆ ನಿಂತಿದೆ. ಕಾಮಗಾರಿ ಆರಂಭಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದಸಂಸ ಮುಖಂಡರು ಸಚಿವ ಮಹದೇವಪ್ಪ ಅವರ ನಿವಾಸ ಮುತ್ತಿಗೆ ಹಾಕಲು ಯತ್ನಿಸಿದರು.
ದಸಂಸ ಮುಖಂಡರು ಸಚಿವ ಮಹದೇವಪ್ಪ ಅವರ ಮನೆಗೆ ಮುತ್ತಿಗೆ ಹಾಕುವ ವಿಷಯ ತಿಳಿದ ಪೊಲೀಸರು ಅವರ ಮನಗೆ ಆಗಮಿಸುವ ರಸ್ತೆಗಳಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಮುತ್ತಿಗೆ ಹಾಕಲು ಬಂದ ಪ್ರತಿಭಟನಾಕಾರರನ್ನು ತಡೆದು ಬಂಧಿಸಿದರು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಪೊಲೀಸ್ ವ್ಯಾನ್ ನಲ್ಲಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.ಪೊಲೀಸರ ವರ್ತನೆಯಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ಪೊಲೀಸರು, ಸಚಿವ ಮಹದೇವಪ್ಪ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಾ. 27 ರಂದು ಕ್ಯಾಬಿನೆಟ್ ನಲ್ಲಿ ಅಂಭೇಡ್ಕರ್ ಭವನದ ಕಾಮಗಾರಿ ಆರಂಭ ಸಂಬಂಧ ಹೆಚ್ಚುವರಿ 23 ಕೋಟಿ ರೂ. ಹಣ ಬಿಡುಗಡೆ ಮಾಡಲಾಗುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ಆರಂಭಿಸದಿದ್ದರೆ ಏ. 14ರ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಅವಕಾಶ ನೀಡುವುದಿಲ. ಅವರ ದಲಿತ ವಿರೋಧಿ ನೀತಿಯನ್ನು ಕರಪತ್ರ ಮಾಡಿ ಎಲ್ಲಾ ಕಡೆಗಳಲ್ಲಿ ಹಂಚಲಾಗುವುದು ಎಂದರು.
ಸಚಿವ ಮಹದೇವಪ್ಪ ಅವರ ಬಳಿ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಅವರು ಇದೂವರಗೂ ಅಂಬೇಡ್ಕರ್ ಭವನ ನಿರ್ಮಾಣದ ಕುರಿತು ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದಾರೆ. ನಾವು ಕೂಡ ತಾಳ್ಮೆಯಿಂದ ಇಷ್ಟು ದಿನ ಕಾದೆವು. ಆದರೆ ಸಚಿವರ ಉದ್ಧಟತನ ಮತ್ತು ದಲಿತರ ಮೇಲಿನ ತಾತ್ಸಾರ ಮನೋಭಾವದ ವಿರುದ್ಧ ಅವರ ಮನೆ ಮುತ್ತಿಗೆ ಹಾಕಲು ತೀರ್ಮಾನಿಸಿದೆವು ಎಂದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಶಂಭುಲಿಂಗಸ್ವಾಮಿ, ಶಿವಬುದ್ಧಿ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಕಲ್ಲಹಳ್ಳಿ ಕುಮಾರ್, ಆಲಗೂಡು ಶಿವಕುಮಾರ್, ಕುಕ್ಕೂರು ರಾಜು, ಸಿದ್ಧರಾಜು ಹೊಮ್ಮರಗಳ್ಳಿ, ಮುತ್ತು, ಮಹೇಶ್, ಅಶೋಕಪುರಂ ಅಣ್ಣಯ್ಯ, ಮೊದಲಾದವರು ಇದ್ದರು.