ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್‍ಯಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಮುಂಗಾರು ಮಳೆ ಬೀಳದೆ ಬರ ಪರಿಸ್ಥಿತಿ ಎದುರಾಗಿ 4 ತಿಂಗಳಾದರೂ ಸಮರ್ಥವಾಗಿ ನಿರ್ವಹಿಸದೆ ರಾಷ್ಟ್ರೀಯ ದುರಂತವೆಂದು ಪರಿಗಣಿಸಲು ಅಗತ್ಯ ಕ್ರಮ ಕೈಗೊಳ್ಳದ ಸರ್ಕಾರದ ವೈಫಲ್ಯವನ್ನು ವಿರೋಧಿಸಿದರು.ಪ್ರತಿ ಎಕರೆಗೆ ಕೇವಲ ₹2500 ತಾತ್ಕಾಲಿಕವಾಗಿ ಪರಿಹಾರದ ಭಿಕ್ಷೆ ಘೋಷಿಸಿದ ಅನ್ಯಾಯಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಒಕ್ಕೂಟ ವ್ಯವಸ್ಥೆಯೊಳಗಿದ್ದರೂ ಕೇಂದ್ರ ಸರ್ಕಾರ ನೆರೆ ದೇಶದ ದುರಂತಕ್ಕೆಲ್ಲಾ ಸ್ಪಂದಿಸುತ್ತದೆ. ಆದರೆ, ಕರ್ನಾಟಕದ ಬರ ದುರಂತವನ್ನು ಗಂಭೀರವಾಗಿ ಪರಿಗಣಿಸದಿರುವುದನ್ನು ಖಂಡಿಸಿದರು.
ರಾಜ್ಯದ 40 ಸಾವಿರ ಹೆಕ್ಟೇರ್ ಭೂಮಿ ಕೃಷಿ ನಾಶವಾಗಿದೆ. ₹40 ಸಾವಿರ ಕೋಟಿ ನಷ್ಟಕ್ಕೆ ತಕ್ಕಂತೆ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಗಳನ್ನಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೆಳೆ ಪರಿಹಾರ ನೀಡಬೇಕು. ರಾಜ್ಯದ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ರೈತ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ಸರ್ಕಾರಗಳು ತುಂಬಿಕೊಡಬೇಕು. ಮಂಡ್ಯ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.