ಅಧಿಕಾರಿಗಳ ದಲಿತ ವಿರೋಧಿ ನೀತಿಗೆ ಖಂಡನೆ । ಶಿಂಗಾಡಿಕದಿರೇನಹಳ್ಳಿ ಭೂಮಿ ಸಮಸ್ಯೆ ಇತ್ಯರ್ಥ ಪಡಿಸಲು ಒತ್ತಾಯ
ಅಧಿಕಾರಿಗಳ ದಲಿತ ವಿರೋಧಿ ನೀತಿಯನ್ನು ಖಂಡಿಸಿ, ಶಿಂಗಾಡಿಕದಿರೇನಹಳ್ಳಿ ಭೂಮಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಒತ್ತಾಯಿಸಿ ಜು. 13ರಂದು ಚಿಕ್ಕಬಳ್ಳಾಪುರ ತಹಸೀಲ್ದಾರ್ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಮತ್ತು ಗಡಿನಾಡು ರೈತ ಸಂಘ ಹಾಗೂ ಶಿಂಗಾಡಿಕದಿರೇನಹಳ್ಳಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ದಸಂಸ ಮುಖಂಡ ಕೆ.ಸಿ. ರಾಜಕಾಂತ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಮಿಗಾಗಿ ಬದುಕಿಗಾಗಿ ಸಾವಿರಾರು ವರ್ಷಗಳಿಂದ ಲಕ್ಷಾಂತರ ಜನ ಬೀದಿಗೆ ಇಳಿದು ಹೋರಾಟ ಮಾಡಿ ಬಡವರ, ದಲಿತರ ಭೂ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಆಳುವ ಸರ್ಕಾರಗಳ ಮೇಲೆ ಒತ್ತಡ ಹಾಕಿದ ಪರಿಣಾಮ ಭೂ ಸುಧಾರಣೆ ಕಾಯ್ದೆ, ಬಗರ್ ಹುಕುಂ ಕಾಯ್ದೆ, ಉಳುವವನೆ ಭೂ ಒಡೆಯ, ಅಕ್ರಮ ಸಕ್ರಮ ಇತ್ಯಾದಿ ಜನಪರ ಕಾನೂನುಗಳು ಜಾರಿಗೆ ಬಂದವು. ಇದರ ಶ್ರೇಯಸ್ಸು ದಲಿತ ಚಳುವಳಿಗೆ ದಕ್ಕುತ್ತದೆ. ಸ್ವಾತಂತ್ರ್ಯ ಬಂದು 80 ವರ್ಷಗಳು ಸಮೀಪಿಸುತ್ತಿದ್ದರೂ ಭೂಮಿ ಕೊಡಿ, ನಿವೇಶನ ಕೊಡಿ, ಸ್ಮಶಾನ ಕೊಡಿ ಎಂದು ಅಂಗಲಾಚಿ ಬೇಡುವಂತಾಗಿದೆ.ಎಷ್ಟು ದಿನ ಈ ಹಾಹಾಕಾರ? ಇಂದಿಗೂ ದಲಿತರು ಬದುಕುವದಾರಿಗಳು ತೆರೆದುಕೊಳ್ಳುತ್ತಿಲ್ಲ. ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ಶಿಂಗಾಡಿಕದಿರೇನಹಳ್ಳಿ ಗ್ರಾಮದ ದಲಿತರಿಗೆ 1972-73 ಸಾಲಿನಲ್ಲಿ ಅಕ್ರಮ ಸಕ್ರಮ ಕಾನೂನಡಿ ಸರ್ವೆ ನಂಬರ್ 67ರಲ್ಲಿ ಭೂ ಮಂಜೂರಾತಿ ಆಗಿದೆ. ಅಂದಿನಿಂದ ಸದರಿ ಸರ್ವೇ ನಂಬರ್ 67ರಲ್ಲಿ ಬೆಳೆ ಬೆಳೆದು ಸ್ವಾಧೀನದಲ್ಲಿರುತ್ತಾರೆ ಎಂದು ತಿಳಿಸಿದರು.
ಆದರೆ ಕಂದಾಯ ಇಲಾಖೆಯವರಾಗಲಿ ಆರಣ್ಯ ಇಲಾಖೆಯವರಾಗಲಿ ಸರಿಯಾದ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡದೆ ದಲಿತ ವಿರೋಧಿಯನ್ನು ಅನುಸರಿಸುತ್ತಿದ್ದಾರೆ. ಮುಖ್ಯವಾಗಿ ಚಿಕ್ಕಬಳ್ಳಾಪುರ ತಹಸೀಲ್ದಾರ್ ರವರು ಸಮಸ್ಯೆಯನ್ನು ತಿಳಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ದಸಂಸ ತಾಲೂಕು ಸಂಚಾಲಕ ಎನ್.ಪರಮೇಶ್,ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಪದಾಧಿಕಾರಿಗಳಾದ ಎಂ.ಮುನಿರಾಜು, ಚಿನ್ನಪ್ಪ, ಮುನಿಯಪ್ಪ, ತ್ಯಾಗರಾಜು, ವೆಂಕಟೇಶ, ಲಕ್ಷ್ಮಯ್ಯ, ರಾಮಕೃಷ್ಣ, ಮತ್ತಿತರರು ಇದ್ದರು.