ಶಾಸಕ ಎಚ್. ಡಿ.ತಮ್ಮಯ್ಯ ಪ್ರದರ್ಶನ ಉದ್ಘಾಟಿಸಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶರನ್ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ನಗರದ ರಂಗಣ್ಣನವರ ಛತ್ರದಲ್ಲಿ ಚಿಕ್ಕಮಗಳೂರು ಬ್ರಾಹ್ಮಣ ಮಹಾ ಸಭಾ ದಿಂದ ಆಯೋಜಿಸಿರುವ ದಸರಾ ಗೊಂಬೆ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ.
ದಸರಾ ಗೊಂಬೆ ಪ್ರದರ್ಶನದಲ್ಲಿ ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ 1500 ರಿಂದ 2000ಕ್ಕೂ ಹೆಚ್ಚು ಗೊಂಬೆಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಪುರಾಣ ಪ್ರಸಿದ್ಧ ರಾಮಾಯಣ, ಮಹಾಭಾರತ, ಮದುವೆ ಸಂಭ್ರಮ, ಜಾತ್ರೆ, ಉತ್ಸವ, ಧಾರ್ಮಿಕ ಸಮಾರಂಭಗಳು, ಹಿಂದಿನ ಕಾಲದ ಉಪಯೋಗಿಸಿರುವ ವಸ್ತುಗಳು ಸೇರಿದಂತೆ ನಮ್ಮ ಹಿಂದಿನ ಮತ್ತು ಇಂದಿನ ಜೀವನಕ್ರಮವನ್ನು ಪ್ರತಿಬಿಂಬಿಸುವ ಗೊಂಬೆಗಳನ್ನು ಜೋಡಿಸಲಾಗಿದ್ದು, ನೋಡುಗರ ಹುಬ್ಬೆರಿಸುವಂತೆ ಮಾಡಿದೆ.ಇದೇ ಪ್ರಥಮ ಬಾರಿಗೆ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದಿಂದ ದಸರಾ ಗೊಂಬೆ ಪ್ರದರ್ಶನ ಏರ್ಪಡಿಸಲಾಗಿದ್ದು, ಗೊಂಬೆ ಪ್ರೀಯರನ್ನು ಕೈಬೀಸಿ ಕರೆಯುತ್ತಿದೆ.ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಜತೆಗೆ ಸಿರಿ ನಟರಾಜ್, ಪನಜಾಕ್ಷಿ, ನಾಗಶ್ರೀ ಕಿರಣ್ ಅವರು ದಸರಾ ಗೊಂಬೆ ಪ್ರದರ್ಶನದಲ್ಲಿ ಗೊಂಬೆಗಳನ್ನು ಇರಿಸಿದ್ದು, ಶ್ರೀ ರಂಗಣ್ಣನವರ ಛತ್ರ ವಿವಿಧ ಬಣ್ಣಗಳ ವಿವಿಧ ವೈಭವದ ಗೊಂಬೆಗಳ ಮನೆ ಯಾಗಿ ಪರಿವರ್ತನೆಯಾಗಿ ಗೊಂಬೆ ಪ್ರೀಯರನ್ನು ಕೈಬೀಸಿ ಕರೆಯುತ್ತಿದೆ. ಬೃಹತ್ ಗೊಂಬೆ ಪ್ರದರ್ಶನ ಆಕರ್ಷಕ ಕೇಂದ್ರ ಬಿಂಧುವಾಗಿ ಹೊರಹೊಮ್ಮಿದೆ.ಶಾಸಕ ಎಚ್. ಡಿ.ತಮ್ಮಯ್ಯ ದಸರಾ ಗೊಂಬೆ ಪ್ರದರ್ಶನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಹಲವು ಮಹಾನೀಯರನ್ನು ಕಂಡಂತಹ ಜಿಲ್ಲೆಯಾಗಿದೆ. ಜತೆಗೆ ಸುಸಂಸ್ಕೃತ ಮತ್ತು ವೈವಿದ್ಯಮಯ ಕಲೆಗಳನ್ನು ಹೊಂದಿದ್ದು, ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಬೇಕು ಎಂದು ಹೇಳಿದರು.ದಸರಾ ಗೊಂಬೆ ಪ್ರದರ್ಶನ ಏರ್ಪಡಿಸುವ ಮೂಲಕ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಅತ್ಯುತ್ತಮ ಕೆಲಸ ಮಾಡಿದೆ. ಪೋಷಕರು ತಮ್ಮ ಮಕ್ಕಳನ್ನು ಕರೆ ತಂದು ನಮ್ಮ ಸಂಸ್ಕೃತಿಯನ್ನು ಗೊಂಬೆಗಳ ಮೂಲಕ ಅವರಿಗೆ ಅರಿವು ಮೂಡಿಸ ಬೇಕೆಂದು ಕಿವಿಮಾತು ಹೇಳಿದ ಅವರು, ನಮ್ಮ ನಾಡ ಹಬ್ಬ ಮೈಸೂರು ದಸರಾ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.ಮೈಸೂರು ದಸರಾ ಆಚರಣೆ ಧಾರ್ಮಿಕವಾಗಿ ಮಾತ್ರವಲ್ಲದೆ, ನಮ್ಮ ಸಂಪ್ರದಾಯ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಹೀಗೆ ಅನೇಕ ಕ್ಷೇತ್ರಗಳನ್ನು ಒಳಗೊಂಡಿದೆ. ದಸರಾ ರಾಜ್ಯ, ದೇಶ ಸೇರಿದಂತೆ ವಿದೇಶಿಗರ ಗಮನ ಸೆಳೆದಿದೆ ಎಂದು ಹೇಳಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಉತ್ತಮ ಸಂದೇಶವನ್ನು ಹೊಂದಿರುವ ಹಾಗೂ ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ದಸರಾ ಗೊಂಬೆ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಲ್ಲವಿ ಸಿ.ಟಿ.ರವಿ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಜೋಷಿ, ಕಾರ್ಯದರ್ಶಿ ಎನ್.ಕೆ.ಅಶ್ವಿನ್, ನಾಗಶ್ರೀ ಕಿರಣ್, ರಮಾ, ಸತೀಶ್ ಇದ್ದರು. ಚೈತ್ರಾ ಸ್ವಾಗತಿಸಿ, ನಿರೂಪಿಸಿದರು.
23 ಕೆಸಿಕೆಎಂ 3ಚಿಕ್ಕಮಗಳೂರು ನಗರದ ರಂಗಣ್ಣನವರ ಛತ್ರದಲ್ಲಿ ಏರ್ಪಡಿಸಿರುವ ದಸರಾ ಗೊಂಬೆ ಪ್ರದರ್ಶನವನ್ನು ಶಾಸಕ ಎಚ್.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು.